ನಿಜಶರಣರು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ನಿಜಶರಣರು  ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು  True devotees should apply the principles in their lives

ಜಮಖಂಡಿ  22: ನಿಜಶರಣರು ಹೇಳಿದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂದರೆ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಓಲೆಮಠದ ಆನಂದ ದೇವರು ಹೇಳಿದರು.  

ನಗರದ ಬಸವಭವನದಲ್ಲಿ ತಾ.ಪಂ, ತಾಲುಕು ಆಡಳಿತ, ನಗರಸಭೆ, ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಸಂಘದ ಸಹಯೋಗದಲ್ಲಿ ನಡೆದ ಅಂಬಿಗರ ಚೌಡಯ್ಯನವರ 906ನೇ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.  

ಚೌಡಯ್ಯನವರ ವಚನಗಳು ನೇರ ಮತ್ತು ನಿಷ್ಟುರವಾಗಿದ್ದವು. ಅವರು ಸಮಾಜದ ಓರೇ ಕೋರೆಗಳನ್ನು ನಿಷ್ಟುರ ನುಡಿಗಳಿಂದ ತಿದ್ದಲು ಪ್ರಯತ್ನಿಸಿದರು. ಸತ್ಯವನ್ನು ನಿಷ್ಟುರವಾಗಿ ಹೇಳಿ ಸಮಾಜದ ಪರಿವರ್ತನೆಗೆ ಶ್ರಮಿಸಿದ್ದರು. ನದಿಯನ್ನು ದಾಟಿಸುವ ಕೆಲಸ ಮಾಡುತ್ತಿದ್ದ ಅವರು ಸಂಸಾರವೆಂಬ ನದಿಯನ್ನು ದಾಟಲು ಅವರ ತತ್ವ, ಸಿದ್ದಾಂತಗಳು ಅವಶ್ಯವಾಗಿವೆ, ಲಿಂಗ ಧಾರಣೆ, ಲಿಂಗಪೂಜೆ ಪ್ರತಿನಿತ್ಯ ಅವಶ್ಯವಾಗಿ ಮಾಡಬೇಕು. ಮನಸ್ಸು ಶುದ್ಧವಾಗಿಟ್ಟುಕೊಂಡು ದೇವರಲ್ಲಿ ಭಕ್ತ ಮಾಡಬೇಕು, ಕಾಯಕ ಯೋಗಿಗಳಾಗಬೇಕೆಂದು ಎಂದರು. 

ಉಪನ್ಯಾಸಕ ಬಸವರಾಜ ಸೋಮಾಪುರ ಮಾತನಾಡಿ, ಅಂಬಿಗರ ಸಮಾಜದ ಕುಲದೇವತೆ ಗಂಗಾ ಮಾತೆ ಆಗಿರುವದರಿಂದ ಗಂಗಾಮತಸ್ಥರು ಎಂದು ಕರೆಯುತ್ತಾರೆ. ಅಂಬಿಗರ ಸಮಾಜ ನಂಬಿಕೆ ವಿಶ್ವಾಸಕ್ಕೆ ಪಾತ್ರವಾಗಿದೆ. ನಂಬಿದವರನ್ನು ಪ್ರಾಣದ ಹಂಗು ತೊರೆದು ದಡ ಸೇರಿಸುವ ಕೆಲಸ ಮಾಡುತ್ತದೆ. ನಿಜಶರಣ ಅಂಬಿಗರ ಚೌಡಯ್ಯನವರ ಚರಿತ್ರೆ ಕುರಿತು ಉಪನ್ಯಾಸ ನೀಡಿದರು.  

ತಹಸೀಲ್ದಾರ ಅನೀಲ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿ, ಚೌಡಯ್ಯನವರು ನೇರ ನಿಷ್ಟುರ ವಚನಗಳಿಂದ ಸಮಾಜವನ್ನು ತಿದ್ದಿದ್ದಾರೆ. ಅವರ ಮಾರ್ಗದರ್ಶನ ಇಂದಿಗೂ ಪ್ರಸ್ತುತವಾಗಿದೆ. ಅವರ ವಚನಗಳ ಗ್ರಂಥಗಳನ್ನು ಬಿಡುಗಡೆ ಗೊಳಿಸಲಾಗಿದ್ದು ಅವುಗಳನ್ನು ಅಧ್ಯಯನ ಮಾಡುವ ಮೂಲಕ ಅವರ ತತ್ವಗಳನ್ನು ಜೀವನದಲ್ಲಿ ಅಳವಡಸಿಕೊಳ್ಳಬೇಕು ಬರೀ ದಿನಾಚರಣೆಗೆ ಸೀಮಿತವಾಗದೇ ಅವರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು. 

ಸಮಾಜದ ಮುಖಂಡರಾದ ಉಮೇಶ ಗಸ್ತಿ, ಮಹೇಶ ಕೋಳಿ, ರವಿ ಬೆಳಗಲ, ಹಣಮಂತ ಸಿಂಧೂರ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದರು. ಅಭಿ ಆಲಬಾಳ ಪ್ರಾರ್ಥನಾ ಗೀತೆ ಹಾಡಿದರು., ರಾಜು ಹಡಗಲಿ ಸ್ವಾಗತಿಸಿದರು. ಅಡಿವೇಶ ಅಳಬಾಲ ವಂದಿಸಿದರು.