ಬೆಳಗಾವಿ 10: ಎಸ್.ಎಂ.ಕೃಷ್ಟ ಅವರು ಈ ನಾಡಿನ ಸಾಂಸ್ಕೃತಿಕ ನಾಯಕ.. ದೇವರಾಜು ಅರಸು ಸರಿ ಸಮಾನವಾದ ಮೌಲ್ಯಯುತ ಆಡಳಿತ ನಡೆಸಿದ ಧೀಮಂತ ನಾಯಕರಾಗಿ ಎಲ್ಲರನ್ನೂ ಒಳಗೊಳ್ಳುವ ರಾಜಕಾರಣ ಮಾಡಿದ ಮುತ್ಸದ್ಧಿ" ಡಿಸೆಂಬರ್ 10ರಂದು ನಡೆದ ಎರಡನೇ ದಿನದ ಅಧಿವೇಶನದಲ್ಲಿ ’ಚಿಂತಕರ ಚಾವಡಿ’ ಎಂದೇ ಹೆಸರಾದ ಮೇಲ್ಮನೆಯಲ್ಲಿ ಈ ಮೇಲಿನಂತೆ ಎಸ್‌ಎಂಕೃಷ್ಣ ಅವರ ವ್ಯಕ್ತಿತ್ವವನ್ನು ಬಣ್ಣಿಸಲಾಯಿತು.
ಸಂತಾಪ ಸೂಚನೆಯ ನಿರ್ಣಯದ ಪ್ರಕಟಣೆ ಬಳಿಕ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದಸ್ಯರಿಗೆ ಮಾತನಾಡಲು ಅವಕಾಶ ಕಲ್ಪಿಸಿದರು. ಇದೇ ವೇಳೆ ವಿಧಾನ ಪರಿಷತ್ ಶಾಸಕರಾದ ಡಾ. ತಿಮ್ಮಯ್ಯ ಅವರು ಮಾತನಾಡಿ, ಡಾ. ರಾಜಕುಮಾರ ಅವರು ಅಪಹರಣವಾದಾಗ ಅವರನ್ನು ರಕ್ಷಣೆ ಮಾಡಿ ನಾಡಿಗೆ ಒಪ್ಪಿಸಿದ ಕೀರ್ತಿ ಎಸ್‌ಎಂ ಕೃಷ್ಣ ಅವರಿಗೆ ಸಲ್ಲುತ್ತದೆ ಎಂದರು.
ಶಿಸ್ತುಬದ್ಧ ರಾಜಕಾರಣಿ : ಪರಿಷತ್ ಶಾಸಕರಾದ ಎಸ್.ಎಲ್ ಭೋಜೇಗೌಡ ಅವರು ಮಾತನಾಡಿ, ಕೃಷ್ಣ ಅವರು ನಾಲ್ಕು ಸದನಗಳಲ್ಲಿ ಕುಳಿತು ಸೇವೆ ಮಾಡಿದರು. ಶಿಸ್ತುಬದ್ಧವಾದ ರಾಜಕಾರಣಿಯಾಗಿದ್ದರು. ಯಾವುದಕ್ಕು ಧೃತಿ ಗೆಡುತ್ತಿರಲಿಲ್ಲ. ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ ಕೀರ್ತಿ ಕೃಷ್ಣ ಅವರಿಗೆ ಸಲ್ಲುತ್ತದೆ ಎಂದರು.
ನೋಡಿ ಕಲಿಯಬೇಕು : ಪರಿಷತ್ ಶಾಸಕರಾದ ಶಶೀಲ್ ಜಿ ನಮೋಶಿ ಅವರು ಮಾತನಾಡಿ, ದೇವದುರ್ಗದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ ಕೊಡುವ ಮೂಲಕ ಬಿಸಿ ಊಟ ಯೋಜನೆಯನ್ನು ಆರಂಭಿಸಿದರು. ನೋಡಿ ಕಲಿಯುವಂತಹ ರಾಜಕಾರಣಿ ಎಸ್‌ಎಂ ಕೃಷ್ಟ ಆಗಿದ್ದರು ಎಂದರು.
ಮುಂದಿನ ಪೀಳಿಗೆಗೆ ಸ್ಪೂರ್ತಿ : ಪರಿಷತ್ ಶಾಸಕರಾದ ಬಿ.ಕೆ.ಹರಿಪ್ರಸಾದ್ ಅವರು ಮಾತನಾಡಿ, ವಿದ್ಯಾರ್ಥಿ ದಿಶೆಯಿಂದಲು ನಾವು ಎಸ್‌ಎಂ ಕೃಷ್ಣ ಅವರೊಂದಿಗೆ ಒಡನಾಟ ಹೊಂದಿದ್ದೆವು. ಎಲ್ಲ ಸದನದಲ್ಲೂ ಸದಸ್ಯರಾಗಿ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗುವಂತೆ ಆಡಳಿತ ನಡೆಸಿದರು ಎಂದರು.
ಸಮಯೋಚಿತ ರಾಜಕಾರಣಿ : ಪರಿಷತ್ ಶಾಸಕರಾದ ಸಿ.ಟಿ.ರವಿ ಅವರು ಮಾತನಾಡಿ, ಪ್ರತಿಯೊಂದನ್ನು ಸಮಯೋಚಿತವಾಗಿ ಮಾಡುವ, ಉತ್ತಮ ನಿರ್ಣಯ ತೆಗೆದುಕೊಂಡು ಆಡಳಿತ ನಡೆಸಿದ ಕೀರ್ತಿ ಎಸ್‌ಎಂ ಕೃಷ್ಣ ಅವರಿಗೆ ಸಲ್ಲುತ್ತದೆ ಎಂದರು.
ಕೃಷ್ಣ ಅವರ ಆತ್ಮೀಯತೆ, ಸಂಸ್ಕಾರ, ನಡವಳಿಕೆ ಎಲ್ಲವೂ ವಿಶೇಷವಾಗಿತ್ತು. ಕೃಷ್ಣ ಅವರು ಈ ನಾಡಿನ ಸಾಂಸ್ಕೃತಿಕ ನಾಯಕ. ನನ್ನ ಸರ್ಕಾರದ ಮೊದಲ ಆದ್ಯತೆ ಅಕ್ಷರ ಮತ್ತು ಆರೋಗ್ಯ ಎಂದು ಹೇಳುತ್ತಿದ್ಧರು. ತಮ್ಮ ಸಂಪುಟದಲ್ಲಿ ನನಗೆ ಶಾಲಾ ಶಿಕ್ಷಣ ಖಾತೆ ನೀಡಿದರು. ಸರ್ಕಾರಿ ಶಾಲೆಗಳನ್ನು ದೇವಾಲಯದ ರೀತಿ ಮಾಡಿದರು. ಮಕ್ಕಳನ್ನು ದೇವರೆಂದು ಭಾವಿಸಿದ್ದರು ಎಂದು ಪರಿಷತ್ ಶಾಸಕರಾದ ಅಡಗೂರ ಹೆಚ್ ವಿಶ್ವನಾಥ ಅವರು ತಿಳಿಸಿದರು.
ಮಾನವೀಯ ಮೌಲ್ಯ ಹೊಂದಿದ್ದರು : ಪರಿಷತ್ ಶಾಸಕರಾದ ಎಂ.ನಾಗರಾಜ ಅವರು ಮಾತನಾಡಿ, ಕೃಷ್ಟ ಅವರು ಮಾನವೀಯ ಮೌಲ್ಯ ಹೊಂದಿದ ನಾಯಕರಾಗಿದ್ದರು. ಶಿಸ್ತು ಸಂಯಮದ ರಾಜಕಾರಣ ಮಾಡಿದರು ಎಂದರು.
ಬುದ್ಧ, ಬಸವ ಅಂಬೇಡ್ಕರ್ ವಿಚಾರಧಾರೆ : ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ ಅವರು ಮಾತನಾಡಿ, ಬುದ್ದ, ಬಸವ, ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ವಿಕಾಸಸೌಧವನ್ನು ನಿರ್ಮಿಸಿದ ಕೀರ್ತಿ ಕೃಷ್ಟ ಅವರಿಗೆ ಸಲ್ಲುತ್ತದೆ ಎಂದರು.
ಡ್ರೆಸ್ ಕೋಡ್ ವಿಶೇಷ : ಪರಿಷತ್ ಶಾಸಕರಾದ ಶರವಣ ಟಿ.ಎ. ಅವರು ಮಾತನಾಡಿ, ವಿದೇಶದ ಜನರು ಕರ್ನಾಟಕದತ್ತ ನೋಡುವಂತೆ ಬೆಂಗಳೂರನ್ನು ಅಭಿವೃದ್ಧಿಪಡಿಸಿದರು. ಅವರು ವ್ಯಕ್ತಿಯಲ್ಲ; ದೊಡ್ಡ ಶಕ್ತಿಯಾಗಿದ್ದರು. ಅವರ ಡ್ರೆಸ್ ಕೋಡ್, ಸಮಯಕ್ಕೆ ಸರಿಯಾಗಿ ಮಾಡುವ ಕಾರ್ಯವಿಧಾನ ಕೂಡ ವಿಶೇಷ ಎಂದರು.
ಹೃದಯ ವೈಶಾಲ್ಯತೆ : ಪರಿಷತ್ ಶಾಸಕರಾದ ಪಿ.ಎಚ್.ಪೂಜಾರ ಅವರು ಮಾತನಾಡಿ, ಸಿಎಂ ಆಗಿದ್ದಾಗ ಆಲಮಟ್ಟಿ ಜಲಾಶಯದ ಬಗ್ಗೆ ಗಮನ ಹರಿಸಿದ್ದರು. ಬಾಗಲಕೋಟಿ ಆಲಮಟ್ಟಿ ಸಂತ್ರಸ್ತರಿಗಾಗಿ ವಿಶೇಷ ಪ್ಯಾಕೇಜ್ ನೀಡಿ ಸ್ಪಂದನೆ ನೀಡಿದ್ದು ವಿಶೇಷ. ಹೃದಯ ವೈಶಾಲ್ಯ ಹೊಂದಿದ ರಾಜಕಾರಣಿಯಾಗಿದ್ದರು ಎಂದರು.
ಮುತ್ಸದ್ಧಿ ರಾಜಕಾರಣಿ : ಪರಿಷತ್ ಶಾಸಕರಾದ ಎನ್. ರವಿಕುಮಾರ್ ಅವರು ಮಾತನಾಡಿ, ಎಸ್‌ಎಂ ಕೃಷ್ಣ ಅವರು ಸಮದೃಷ್ಟಿ ಹೊಂದಿದ ಮರೆಯಲಾರದ ರಾಜಕಾರಣಿಯಾಗಿದ್ದರು. ಪ್ರತಿಭಟನೆಕಾರರಿಗೆ ಸ್ಪಂದನೆ ನೀಡುತ್ತಿದ್ದರು. ಸಮಾಜವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಉತ್ತಮ ರಾಜಕಾರಣ ಮಾಡಿದರು. ಬೆಂಗಳೂರನ್ನು ಕ್ಲೀನ್ ಸಿಟಿ ಗ್ರೀನ್ ಸಿಟಿ ಮಾಡಿದರು.
ಚಿತ್ರರಂಗದೊಂದಿಗೆ ಉತ್ತಮ ಬಾಂಧವ್ಯ : ಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿ ಅವರು ಮಾತನಾಡಿ, ಯುವ ನಾಯಕರಿಗೆ ಸ್ಪೂರ್ತಿ ತುಂಬುತ್ತಿದ್ದರು. ಚಿತ್ರರಂಗದೊಂದಿಗೆ ಸಹ ಉತ್ತಮ ಬಾಂದವ್ಯ ಹೊಂದಿದ್ದರು ಎಂದರು.
ಜಾತಿರಹಿತ ರಾಜಕಾರಣಿ : ಪರಿಷತ್ ಶಾಸಕರಾದ ಉಮಾಶ್ರೀ ಅವರು ಮಾತನಾಡಿ, ಕೃಷ್ಣ ಅವರು ತಮ್ಮ ಆಡಳಿತಾವಧಿಯಲ್ಲಿ ಕಾರ್ಯಕರ್ತರನ್ನು ಗುರುತಿಸಿ ಪ್ರೋತ್ಸಾಹ ನೀಡಿದರು. ಸಣ್ಣ ಸಣ್ಣ ಸಮುದಾಯಗಳ ಕಾರ್ಯಕರ್ತರಿಗೆ ವಿಶೇಷ ಆದ್ಯತೆ ಕಲ್ಪಿಸಿದರು ಎಂದರು.
ಕರ್ನಾಟಕ ರಾಜ್ಯದ ಜೆಂಟಲಮನ್ : ಪರಿಷತ್ ಶಾಸಕರಾದ ಕೆಎಸ್.ನವೀನ್ ಅವರು ಮಾತನಾಡಿ, ಕೃಷ್ಣ ಅವರು ಅಳಿಸಲಾಗದ ಸೇವೆಯನ್ನು ರಾಜ್ಯ ಮತ್ತು ರಾಷ್ಟ್ರಕ್ಕೆ ನೀಡಿದ್ದಾರೆ ಎಂದರು.
ರೈತರ ಒಡನಾಡಿ : ಪರಿಷತ್ ಶಾಸಕರಾದ ಮಧು ಜಿ ಮಾದೇಗೌಡ ಅವರು ಮಾತನಾಡಿ, ಕೃಷ್ಣ ಅವರ ಕಾಲದಲ್ಲಿ ಬರ ಪರಿಸ್ಥಿತಿ ತಲೆದೋರಿದಾಗ ರೈತರ ಒಡನಾಡಿಯಾಗಿ ಅದನ್ನು ಸರಿಯಾಗಿ ನಿಬಾಯಿಸಿದರು. ಕಂಪ್ಯೂಟರ್ ಶಿಕ್ಷಣಕ್ಕಾಗಿ ಮಾಹಿತಿ ಸಿಂಧು ಕಾರ್ಯಕ್ರಮ ಜಾರಿ ಮಾಡಿದರು ಎಂದರು.
ಬುದ್ಧಿವಾದ ಹೇಳುತ್ತಿದ್ದರು : ಪರಿಷತ್ ಶಾಸಕರಾದ ನಸೀರ್ ಅಹ್ಮದ್ ಅವರು ಮಾತನಾಡಿ, ಸದನದಲ್ಲಿ ಹೇಗಿರಬೇಕು. ಹೇಗೆ ಮಾತಾಡಬೇಕು ಎಂದು ಯುವ ರಾಜಕಾರಣಿಗಳಿಗೆ ಸಲಹೆ ಮಾಡುತ್ತಿದ್ದರು. ಐಟಿಬಿಟಿಗೆ ವಿಶೇಷ ಒತ್ತು ನೀಡಿದ್ದರು ಎಂದರು.
ಐಟಿ-ಬಿಟಿಯ ವಾರಸುದಾರ : ಪರಿಷತ್ ಶಾಸಕರಾದ ಹೆಚ್‌ಪಿ ಸುಧಾಮ್ ದಾಸ್ ಅವರು ಮಾತನಾಡಿ, ಕೃಷ್ಣ ಅವರು ರಾಜಕಾರಣದ ವಿಶೇಷ ನೆಲವಾದ ಮಂಡ್ಯದಿಂದ ಬಂದು ವಿಶಿಷ್ಟ ರಾಜಕಾರಣ ಮಾಡಿದರು. ಮಾಹಿತಿ ತಂತ್ರಜ್ಞಾನಕ್ಕೆ ಉತ್ತೇಜನ ನೀಡಿ ಐಟಿ ಬಿಟಿಯ ವಾರಸುದಾರ ಎಂದು ಖ್ಯಾತಿ ಪಡೆದರು ಎಂದರು.
ಸಮರ್ಥ ನಿರ್ಹಹಣೆ : ಪರಿಷತ್ ಶಾಸಕರಾದ ಐವನ್ ಡಿ’ಸೋಜಾ ಅವರು ಮಾತನಾಡಿ, ವಿಧಾನಸಭೆ, ವಿಧಾನ ಪರಿಷತ್, ರಾಜ್ಯ ಸಭೆ, ಲೋಕಸಭೆ ಎಲ್ಲ ಕಡೆಗೂ ಉತ್ತಮವಾಗಿ ಕಾರ್ಯ ನಿರ್ವಹಿಸಿ ತಮಗೆ ವಹಿಸಿದ ಖಾತೆಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡಿದರು ಎಂದರು.
ಕ್ರೀಡಾ ಕ್ಷೇತ್ರದ ಒಲವು : ಪರಿಷತ್ ಶಾಸಕರಾದ ಗೋವಿಂದರಾಜು ಅವರು ಮಾತನಾಡಿ, ಕ್ರೀಡಾ ಕ್ಷೇತ್ರದ ಬಗ್ಗೆ ಸಹ ಕೃಷ್ಣ ಅವರಿಗೆ ಒಲವಿತ್ತು. ವಿಂಬಲ್ಡನ್ ಕ್ರೀಡಾಕೂಟ ವೀಕ್ಷಣೆಗಾಗಿ ವಿದೇಶಕ್ಕೆ ತೆರಳುತ್ತಿದ್ದರು ಎಂದರು.
ಸ್ಮಾರ್ಟ್ ರಾಜಕಾರಣಿ : ಪರಿಷತ್ ಶಾಸಕರಾದ ಕೇಶವ ಪ್ರಸಾದ ಎಸ್ ಅವರು ಮಾತನಾಡಿ, ಕೃಷ್ಣ ಅವರು ತಮ್ಮ ಆಡಳಿತಾವಧಿಯಲ್ಲಿ ಗಮನಾರ್ಹ ಕೆಲಸ ಮಾಡಿ ಸ್ಮಾರ್ಟ್ ರಾಜಕಾರಣಿಯಾಗಿ ಗುರುತಿಸಿಕೊಂಡರು ಎಂದು ತಿಳಿಸಿದರು. ಮೃತರ ಗೌರವಾರ್ಥ ಸದಸ್ಯರು ಎದ್ದು ನಿಂತು ಒಂದು ನಿಮಿಷ ಮೌನ ಆಚರಿಸಿ ಗೌರವ ಸಲ್ಲಿಸಿದರು.