ಕೊರೊನಾ ಸೋಂಕು ಹೆಚ್ಚುತ್ತಿರುವ ರಾಷ್ಟ್ರಗಳಿಗೆ ಇರಾಕ್ ನಿಂದ ಪ್ರಯಾಣ ನಿರ್ಬಂಧ

ಬಾಗ್ದಾದ್, ಫೆ 27:   ಕೊರೊನಾ ಸೋಂಕು ವ್ಯಾಪಿಸುತ್ತಿರುವ ರಾಷ್ಟ್ರಗಳಿಗೆ ಪ್ರಯಾಣಿಸದಂತೆ ಇರಾಕ್ ಪ್ರಾಧಿಕಾರ ನಿರ್ಬಂಧ ವಿಧಿಸಿದೆ.  ಕೊರೊನಾ ಸೋಂಕು ವಿರುದ್ಧದ ಹೋರಾಟದಲ್ಲಿ ಸರ್ಕಾರದ ಸಮಿತಿ ಮಾಡಿರುವ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಈ ನಿರ್ಬಂಧ ವಿಧಿಸಲಾಗಿದೆ.ಜಪಾನ್, ದಕ್ಷಿಣ ಕೊರಿಯಾ, ಥಾಯ್ಲೆಂಡ್, ಸಿಂಗಾಪುರ, ಇಟಲಿ, ಕುವೈತ್ ಮತ್ತು ಬಹ್ರೇನ್ ಗಳಿಗೆ ಪ್ರಯಾಣ ಬೆಳೆಸದಂತೆ ಸೂಚಿಸಲಾಗಿದೆ. ಈ ನಿರ್ಬಂಧ ಅಧಿಕೃತ ಪ್ರತಿನಿಧಿಗಳು ಮತ್ತು ರಾಜತಾಂತ್ರಿಕರಿಗೆ ಅನ್ವಯವಾಗುವುದಿಲ್ಲ.  ಅಲ್ಲದೇ ಫೆ 27 ರಿಂದ ಮಾರ್ಚ್ 7 ರವರೆಗೆ ಸಿನಿಮಾ, ಕೆಫೆ, ಕ್ಲಬ್ ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳನ್ನು ಮುಚ್ಚುವಂತೆ ನಿರ್ಬಂಧ ವಿಧಿಸಲಾಗಿದ್ದು ಸಾರ್ವಜನಿಕ ಸಮಾರಂಭಗಳನ್ನು ಏರ್ಪಡಿಸದಂತೆಯೂ ಸೂಚನೆ ನೀಡಲಾಗಿದೆ. ಈ ಅವಧಿಯಲ್ಲಿ ಶಾಲಾ ಕಾಲೇಜು ತರಗತಿಗಳೂ ಇರುವುದಿಲ್ಲ ಎಂದು ಹೇಳಲಾಗಿದೆ.   ಬಾಗ್ದಾದ್ ನಲ್ಲಿ ಸೋಮವಾರ ಕೊರೊನಾ ವೈರಾಣು ಸೋಂಕಿನ ಮೊದಲ ಪ್ರಕರಣ ವರದಿಯಾಗಿತ್ತು. ಇರಾನ್ ಮೂಲದ ವಿದ್ಯಾರ್ಥಿಯಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು. ನಂತರ ಇರಾನ್ ನಿಂದ ಪ್ರವಾ ಮುಗಿಸಿ ವಾಪಸಾದ ಒಂದೇ ಕುಟುಂಬದ ಇತರ ನಾಲ್ವರಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು.