ನ್ಯೂಜಿಲೆಂಡ್ ನಿಂದ ಚೀನಾ ಪ್ರಜೆಗಳಿಗೆ ಪ್ರವಾಸ ನಿರ್ಬಂಧ – ಪ್ರಧಾನಿ ಜಸಿಂದ ಆರ್ಡೆನ್

ಮಾಸ್ಕೋ, ಫೆ 24, ಚೀನಾ ಪ್ರಜೆಗಳ ಮೇಲಿನ ಪ್ರಯಾಣ ನಿಷೇಧವನ್ನು ಇನ್ನೂ ಎಂಟು ದಿನಗಳವರೆಗೆ ನ್ಯೂಜಿಲೆಂಡ್ ವಿಸ್ತರಿಸಿದ್ದು, ಪ್ರತಿ ಎರಡು ದಿನಗಳಿಗೊಮ್ಮೆ ನಿರ್ಬಂಧಗಳನ್ನು ಪರಿಶೀಲಿಸಲಿದೆ ಎಂದು ಅಲ್ಲಿನ ಪ್ರಧಾನಿ ಜಸಿಂಡಾ ಆರ್ಡೆನ್ ಸೋಮವಾರ ಹೇಳಿದ್ದಾರೆ.  ‘ಕೊರೊನವೈರಸ್ ಸೋಂಕು ಹರಡುವುದನ್ನು ತಡೆಯಲು ಚೀನಾದ ಮುಖ್ಯ ಭೂಭಾಗದಿಂದ ಅಲ್ಲಿನ ಪ್ರಜೆಗಳ ಪ್ರಯಾಣಕ್ಕೆ ತಾತ್ಕಾಲಿಕ ನಿರ್ಬಂಧಗಳು ಇನ್ನೂ ಎಂಟು ದಿನಗಳವರೆಗೆ ಮುಂದುವರೆಯುತ್ತವೆ. ಪ್ರತಿ 48 ಗಂಟೆಗಳಿಗೊಮ್ಮೆ ನಿರಂತರವಾಗಿ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ’ ಟಿವಿ ವಾಹಿನಿಯಲ್ಲಿ ಮಾಡಿದ ಭಾಷಣದಲ್ಲಿ ಆರ್ಡೆನ್ ಹೇಳಿದ್ದಾರೆ.  ನ್ಯೂಜಿಲೆಂಡ್ ಪ್ರಜೆಗಳು ತಮ್ಮ ತಾಯ್ನಾಡಿಗೆ ವಾಪಸ್ಸಾಗಲು ಅವಕಾಶವಿದೆ. ಆದರೆ, ಇವರು 14 ದಿನಗಳ ಕಾಲ ನಿರ್ಬಂಧಿತ ಜಾಗದಲ್ಲಿ ಇರಬೇಕಾಗುತ್ತದೆ. ಫೆ 3 ರಿಂದ ನಿರ್ಬಂಧಗಳು ಜಾರಿಯಲ್ಲಿವೆ.  ನ್ಯೂಜಿಲೆಂಡ್ ನಲ್ಲಿ ಇದುವರೆಗೆ ಯಾವುದೇ ಕೊರೊನವೈರಸ್ ಸೋಂಕಿನ ಪ್ರಕರಣಗಳು ದೃಢಪಟ್ಟಿಲ್ಲ. ನ್ಯೂಜಿಲೆಂಡ್ ನ ನೆರೆಯ ಆಸ್ಟ್ರೇಲಿಯಾದಲ್ಲಿ 20 ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ.   ಕರೋನವೈರಸ್ ಸೋಂಕು ಚೀನಾದಲ್ಲಿ ಡಿಸೆಂಬರ್ ಅಂತ್ಯದಲ್ಲಿ ಮೊದಲ ಬಾರಿಗೆ ಪತ್ತೆಯಾಯಿತು. ಅಂದಿನಿಂದ 25 ಕ್ಕೂ ಹೆಚ್ಚು ದೇಶಗಳಿಗೆ ಈ ಸೋಂಕು ಹರಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಮಾರಕ ಈ ಸೋಂಕು ಪರಿಸ್ಥಿತಿಯನ್ನು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯೆಂದು ಘೋಷಿಸಿದೆ. ಈಗಾಗಲೇ 77,000 ಕ್ಕೂ ಹೆಚ್ಚು ಜನರು ಸೋಂಕಿಗೆ ತುತ್ತಾಗಿದ್ದು, ಚೀನಾದಲ್ಲಿ 2,600 ಕ್ಕೂ ಜನರು ಮೃತಪಟ್ಟಿದ್ದಾರೆ.