ುಕ್ಕಳ ಹಕ್ಕುಗಳ ರಕ್ಷಣೆ, ಸುರಕ್ಷತೆ, ಶಾಲೆಯಿಂದ ಹೊರಗುಳಿದ ಮಕ್ಕಳ ಹಾಗೂ ಪೋಕ್ಸೋ ಕಾಯ್ದೆಯ ಅನುಷ್ಠಾನ, ಸಾಮರ್ಥ್ಯಾಭಿವೃದ್ಧಿ ಕುರಿತು ತರಬೇತಿ ಕಾರ್ಯಾಗಾರ

ುಕ್ಕಳ ಹಕ್ಕುಗಳ ರಕ್ಷಣೆ, ಸುರಕ್ಷತೆ, ಶಾಲೆಯಿಂದ ಹೊರಗುಳಿದ ಮಕ್ಕಳ ಹಾಗೂ ಪೋಕ್ಸೋ ಕಾಯ್ದೆಯ ಅನುಷ್ಠಾನ, ಸಾಮರ್ಥ್ಯಾಭಿವೃದ್ಧಿ ಕುರಿತು ತರಬೇತಿ ಕಾರ್ಯಾಗಾರ  Training workshop on protection of children's rights, safety, implementation of out-of-school childr

ಧಾರವಾಡ ಜ.28:  ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಪ್ರಜಂಟೆಷನ್ ಬಾಲಕಿಯರ ಪ್ರೌಢ ಶಾಲೆ, ಮಕ್ಕಳ ಸಹಾಯವಾಣಿ 1098/112, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ, ಸುರಕ್ಷತೆ, ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತಂತೆ ಹಾಗೂ ಪೋಕ್ಸೋ ಕಾಯ್ದೆಯ ಅನುಷ್ಠಾನ ಕುರಿತು ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮ ಕುರಿತು ತರಬೇತಿ ಕಾರ್ಯಾಗಾರವನ್ನು ನಿನ್ನೆ (ಜ.27) ರಂದು ಮಧ್ಯಾಹ್ನ ಪ್ರಜಂಟೆಷನ್ ಬಾಲಕಿಯರ ಪ್ರೌಶ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಅವರು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಕಾಯ್ದೆಗಳನ್ನು ಇವತ್ತಿನ ಮಕ್ಕಳನ್ನು ಅರ್ಥಸಿಕೊಳ್ಳಬೇಕು ಇಂದಿನ ಮಕ್ಕಳು ಇವತ್ತಿನ ಪ್ರಜೆಗಳು, ಬಾಲನ್ಯಾಯ ಕಾಯ್ದೆ ಪ್ರಕಾರ ತಾಯಿ ಗರ್ಭದಿಂದ 18 ವರ್ಷದೊಳಗಿನ ಗಂಡಾಗಲಿ, ಹೆಣ್ಣಾಗಲಿ ಅಥವಾ ತೃತಿಯ ಲಿಂಗಿಯಾಗಲಿ ಇವರನ್ನು ಮಕ್ಕಳು ಎಂದು ಕರೆಯತಕ್ಕದ್ದು, ಧಾರವಾಡ ಜಿಲ್ಲೆಯಲ್ಲಿ ಯಾವುದೇ ಮಗು ಶಾಲೆಯಿಂದ ಹೊರಗಡೆ ಇರಬಾರದು. ಮಕ್ಕಳ ಮೇಲೆ ಶೋಷಣೆಯಾಗದೇ ಬಾಲ್ಯವಿವಾಹ, ಪೊಕ್ಸೊ, ಬಾಲಕಾರ್ಮಿಕ, ಬಾಲ ಭಿಕ್ಷಾಟಣೆಗೆ ಒಳಗಾಗದಂತೆ ಮಗುವಿಗೆ ಸಮಸ್ಯೆಯಾಗದಂತೆ ತಾವು ಜಾಗೃತವಹಿಸಿ ಇಂತಹ ಸಮಸ್ಯೆಗೆ ಮಕ್ಕಳು ಒಳಗಾಗಿದ್ದಲ್ಲಿ ಮಕ್ಕಳ ಸಹಾಯವಾಣಿ 1098 ಗೆ ಕರೆ ಮಾಡುಳು ತಿಳಿಸಿದರು. 

ಬಾಲ ಕಾರ್ಮಿಕ ಕಾಯ್ದೆ 1986 ರನ್ವಯ 18 ವರ್ಷದೊಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧವಾಗಿರುತ್ತದೆ. ಮಕ್ಕಳು ಸುರಕ್ಷಿತ ಸ್ಪರ್ಷ ಮತ್ತು ಆಸುರಕ್ಷಿತ ಸ್ಪರ್ಷದ ಕುರಿತು ಮಕ್ಕಳು ನಿಖರವಾದ ಮಾಹಿತಿ ಪಡೆದು ಮಕ್ಕಳ ದೌರ್ಜನ್ಯದಿಂದ ತಮ್ಮ ರಕ್ಷಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.  

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ ಅವರು ಮಾತನಾಡಿ, ಶಾಲೆಯಲ್ಲಿ ಮಕ್ಕಳ ರಕ್ಷಣಾ ನೀತಿ-2016 ರ ಪ್ರತಿಯನ್ನು ತಯಾರಿಸಿ ಪ್ರತಿ ಸಿಬ್ಬಂದಿಗಳಿಂದ ಭದ್ದತಾ ಪ್ರಮಾಣ ಪತ್ರ ಪಡೆದು ಶಾಲೆಯಲ್ಲಿ ಪಾಲಿಸುವುದು. ಮಕ್ಕಳಿಗೆ ಕೈಗೆಟಕುವ ಸ್ಥಳದಲ್ಲಿ ಸಲಹಾ ಪೆಟ್ಟಿಗೆಯನ್ನು ಇರಿಸಿ ಮಕ್ಕಳ ಕುಂದು ಕೊರತೆಯನ್ನು ಪ್ರತಿ 15 ದಿನಗಳಿಗೊಮ್ಮೆ ತೆಗೆದು ಮಕ್ಕಳ ಕುಂದು ಕೊರತೆಯನ್ನು ಬಗೆಹರಿಸಬೇಕು, ಮಕ್ಕಳ ಸಹಾಯವಾಣಿಯ ನೂತನ ಲೋಗೋವನ್ನು ಶಾಶ್ವತ ಫಲಕವನ್ನಾಗಿ ಮಾಡಿ ಸಾರ್ವಜನಿಕರು ಮತ್ತು ಮಕ್ಕಳಿಗೆ ನಿಖರವಾಗಿ ಕಾಣುವಂತೆ ಅಳವಡಿಸಲು ತಿಳಿಸಿದರು.  

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್‌.ಎಸ್ ಕೆಳದಿಮಠ ಅವರು ಮಾತನಾಡಿ, ಪ್ರತಿಯೊಂದು ಶಾಲೆಯಲ್ಲಿ ಮಕ್ಕಳ ರಕ್ಷಣಾ ನೀತಿಯನ್ನು ಅಳವಡಿಸಿ ಅನುಸರಣೆ ಮಾಡುತ್ತಿದ್ದೇವೆ, ಮಕ್ಕಳ ಸಹಾಯವಾಣಿ 1098 ನೂತನ ಲೋಗೋ ಶಾಶ್ವತ ಫಲಕವನ್ನು ಬರೆಸಲಾಗುತ್ತಿದ್ದೆ. ಧಾರವಾಡ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರವಾದ ಘಟನೆಗಳು ನಡೆಯದಂತೆ ಕ್ರಮವಹಿಸಲಾಗುತ್ತಿದೆ. ಮಕ್ಕಳ ಸುರಕ್ಷತೆಗಾಗಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.  

ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ನೂರಜಹಾನ ಕಿಲ್ಲೇಧಾರ ಅವರು ಮಾತನಾಡಿ, ಮಕ್ಕಳ ರಕ್ಷಣೆಗಾಗಿ ಇರುವ ಬಾಲ ನ್ಯಾಯ ಕಾಯ್ದೆ-2015, ಲೈಂಗಿಕ ದೌರ್ಜನ್ಯ ನಿಷೇಧ ಕಾಯ್ದೆ 2012, ಬಾಲ್ಯ ವಿವಾಹ ನಿಷೇದ ಕಾಯ್ದೆ-2006, ಮಕ್ಕಳ ರಕ್ಷಣಾ ನೀತಿ-2016, ಮಕ್ಕಳ ಸಹಾಯವಾಣಿ -1098/112 ಹಾಗೂ ಮಕ್ಕಳಿಗೆ ಸಂಬಂಧಪಟ್ಟ ವಿವಿಧ ಕಾನೂನುಗಳ ಕುರಿತು ಉಪನ್ಯಾಸವನ್ನು ಮನ ಮುಟ್ಟುವಂತೆ ತಿಳಿಸಿದರು. ಕಾರ್ಯಕ್ರಮವನ್ನು ಮಹಮ್ಮದಲಿ ತಹಶೀಲ್ದಾರ ನಿರೂಪಿಸಿದರು. ಕರೆಪ್ಪ ಕೌಜಲಗಿ ವಂದಿಸಿದರು.  

ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ವಾಯ್‌.ಪಾಟೀಲ್, ಧಾರವಾಡ ತಹಶೀಲ್ದಾರ ಕಚೇರಿಯ ಗ್ರೇಡ 2 ತಹಶೀಲ್ದಾರ ಹನಮಂತ ಕೋಚರಗಿ, ಧಾರವಾಡ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ, ಧಾರವಾಡ ಶಹರ ಮತ್ತು ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ಧಾರವಾಡ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಇನಸ್ಪೆಕ್ಟರ್ ಬಸವರಾಜ ಕಾಮನಬೈಲು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ವಕೀಲರಾದ ಎಮ್‌.ಬಿ ಬೆಂತೂರು, ಪ್ರಜಂಟೆಷನ್ ಬಾಲಕಿಯರ ಪ್ರೌಢ ಶಾಲೆ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ರೇನಿಟಾ ಪಿಂಟೋ ಬಿ.ಎಸ್‌.,  ಎಸ್‌.ಡಿ.ಎಮ್‌.ಸಿ ಅಧ್ಯಕ್ಷರು, ಸದಸ್ಯರು, ವಿವಿಧ ಶಾಲೆಯ ಪ್ರಧಾನ ಗುರುಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.