ಬೆಂಗಳೂರು, ಜ 13,ಭಾರತದ ಕ್ರೀಡಾಪಟುಗಳಿಗೆ 2020ನೇ ವರ್ಷ ಆರಂಭವಾಗಿದೆ. ವಿಶ್ವ ಕ್ರೀಡಾ ಕ್ಷೇತ್ರದಲ್ಲಿ ತಮ್ಮದೇ ಹೆಜ್ಜೆ ಗುರುತು ಮೂಡಿಸಲು ಭಾರತೀಯ ಯುವ ಕ್ರೀಡಾಪಟುಗಳ ಸಜ್ಜಾಗಿದ್ದಾರೆ. ಅದರಂತೆ, ಭಾರತದಿಂದ ಅಗ್ರ ಹತ್ತು ಕ್ರೀಡಾಪಟುಗಳು ಭವಿಷ್ಯದಲ್ಲಿ ಅತ್ಯುನ್ನತ ಸ್ಥಾನಕ್ಕೇರುವ ನಿರೀಕ್ಷೆ ಮೂಡಿಸಿದ್ದಾರೆ. ದೇಶೀಯ ಮಟ್ಟದಲ್ಲಿ ತೋರಿರುವ ಸಾಧನೆ ಪರಿಗಣಿಸಿ ಅವರು ವಿಶ್ವ ಮಟ್ಟದಲ್ಲಿ ಭರವಸೆ ಹುಟ್ಟು ಹಾಕಿದ್ದಾರೆ. ಮುಂಬರುವ ದಶಕದ ಭರವಸೆಯ ತಾರೆಗಳೆಂದೇ ಇವರನ್ನು ಕರೆಯಬಹುದಾಗಿದೆ.
1.ದೇವದತ್ತ ಪಡಿಕ್ಕಲ್(ಕ್ರಿಕೆಟ್):ದೇವದತ್ತ ಪಡಿಕ್ಕಲ್ ಪ್ರಸ್ತುತ ಕರ್ನಟಕ ತಂಡದ ಆಧಾರ ಸ್ಥಂಭ. ಕಳೆದ ವಿಜಯ್ ಹಜಾರೆ ಟ್ರೋಫಿ ಹಾಗೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ-20 ಟೂರ್ನಿಯಲ್ಲಿ ಕರ್ನಾಟಕ ಪ್ರಶಸ್ತಿ ಗೆಲ್ಲುವಲ್ಲಿ ದೇವದತ್ತ ಪಡಿಕ್ಕಲ್ ಮಹತ್ತರ ಪಾತ್ರವಹಿಸಿದ್ದರು. ಆ ಮೂಲಕ ಭಾರತೀಯ ಕ್ರಿಕೆಟ್ ನಲ್ಲಿ ತನ್ನದ ಆದ ಛಾಪು ಮೂಡಿಸಿದ್ದಾರೆ. 9 ಪ್ರಥಮ ದರ್ಜೆ ಪಂದ್ಯಗಳಿಂದ 630 ರನ್ ಹಾಗೂ ಲಿಸ್ಟ್ ಎ 13 ಪಂದ್ಯಗಳಿಂದ 650 ರನ್ ದಾಖಲಿಸಿದ್ದಾರೆ.
2. ಯಶಸ್ವಿ ಜೈಸ್ವಾಲ್(ಕ್ರಿಕೆಟ್): ಕಡುಬಡತನದ ಮೂಲಕ ಬೆಳೆದ ಬಂದ ಯಶಸ್ವಿ ಜೈಸ್ವಾಲ್ ಸದ್ಯ 19 ವಯೋಮಿತಿ ಭಾರತ ತಂಡದೊಂದಿಗೆ ಕಿರಿಯರ ವಿಶ್ವಕಪ್ ಟೂರ್ನಿ ಆಡಲು ದಕ್ಷಿಣ ಆಫ್ರಿಕಾದಲ್ಲಿದ್ದಾರೆ. ಲಿಸ್ಟ್ ಎ ನಲ್ಲಿ ದ್ವಿಶತಕ ಬಾರಿಸಿದ ವಿಶ್ವದ ಅತ್ಯಂತ ಕಿರಿಯ ಬ್ಯಾಟ್ಸ್ ಮನ್ ಎಂಬ ಸಾಧನೆ ಮಾಡಿದ್ದಾರೆ. ಬಾಲ್ಯದಿಂದಲೂ ಅತ್ಯಂತ ಕಠಿಣ ಪರಿಶ್ರಮದೊಂದಿಗೆ ಬೆಳೆದು ಬಂದಿದ್ದಾರೆ. ಪಾನಿ ಪೂರಿ ಮಾರುತ್ತಾ ಅದರಿಂದ ಬಂದ ಹಣದಿಂದ ಕ್ರಿಕೆಟ್ ನಲ್ಲಿ ವ್ಯಯಿಸುತ್ತಿದ್ದರು. ಆ ಮೂಲಕ ಇಂದು ಭಾರತದ ಉದಯೋನ್ಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ.
3. ಪ್ರಿಯಮ್ ಗರ್ಗ್(ಕ್ರಿಕೆಟ್): ಬಾಲ್ಯದಲ್ಲಿಯೇ ತನ್ನ ತಾಯಿಯನ್ನು ಕಳೆದುಕೊಂಡ ಪ್ರಿಯಮ್ ಗರ್ಗ್ ಪ್ರತಿದಿನ 25 ಕಿ.ಮೀ ದೂರ ಕ್ರಮಿಸಿ ಕ್ರಿಕೆಟ್ ಆಭ್ಯಾಸ ನಡೆಸುತ್ತಿದ್ದರು. ಪ್ರಿಯಮ್ ಗರ್ಗ್ ಭಾರತ ತಂಡದಲ್ಲಿ ಆಡುವುದು ಅವರ ತಾಯಿಯ ಕನಸಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ಆರಂಭವಾಗುವ ಕಿರಿಯರ ವಿಶ್ವಕಪ್ ಟೂರ್ನಿಯಲ್ಲಿ ಇದೀಗ, ಗರ್ಗ್ ಭಾರತ 19 ವಯೋಮಿತಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಉತ್ತರ ಪ್ರದೇಶ ಪರ 12 ಪ್ರಥಮ ದರ್ಜೆ ಪಂದ್ಯಗಳಾಡಿರುವ ಪ್ರಿಯಮ್, ಎರಡು ಶತಕ ಸೇರಿ 867 ರನ್ ದಾಖಲಿಸಿದ್ದಾರೆ. ಜತೆಗೆ, 19 ಲಿಸ್ಟ್ ಎ ಪಂದ್ಯಗಳಿಂದ ೆರಡು ಶತಕ ಸೇರದಂತೆ 707 ರನ್ ಗಳಿಸಿದ್ದಾರೆ.
4. ನಿಖತ್ ಜರಿನ್(ಬಾಕ್ಸಿಂಗ್) ಚೀನಾದಲ್ಲಿ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್ ಅರ್ಹತಾ ಸುತ್ತಿಗೆ ಪೂರ್ವಭಾವಿಯಾಗಿ ನಡೆದಿದ್ದ ಆಯ್ಕೆ ಟ್ರಯಲ್ಸ್ 51 ಕೆ.ಜಿ ಫೈನಲ್ ಹಣಾಹಣಿಯಲ್ಲಿ ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ವಿರುದ್ಧ ಸೋತು ಹಲವು ನಾಟಕೀಯ ಬೆಳವಣಿಗೆಗಳಲ್ಲಿ ಭಾಗಿಯಾಗಿದ್ದ ನಿಖತ್ ಜರೀನ್ ಅವರು ಭಾರತದ ಭವಿಷ್ಯದ ಬಾಕ್ಸಿಂಗ್ ಸ್ಟಾರ್ ಗಳಲ್ಲಿ ಒಬ್ಬರಾಗಿದ್ದಾರೆ. ಗುವಾಹಟಿಯಲ್ಲಿ ನಡೆದಿದ್ದ ಎರಡನೇ ಭಾರತ ಅಂತಾರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿಯಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದರು. ಥಾಯ್ಲೆಂಡ್ ಓಪನ್ ಅಂತಾರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿಯಲ್ಲಿಯೂ ನಿಖತ್ ಬೆಳ್ಳಿ ಪದಕ ಗೆದ್ದಿದ್ದರು.
5. ಅದಿತಿ ಅಶೋಕ್(ಗಾಲ್ಫ್):ಅದಿತಿ ಅಶೋಕ್ ಅವರು ಭಾರತದ ವೃತ್ತಿಪರ ಗಾಲ್ಫ್ ಆಟಗಾರ್ತಿ. ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ 1998ರಲ್ಲಿ ಜನಸಿರುವ ಅದಿತಿ ಅಶೋಕ್ ಅವರ 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಇವರು 6ನೇ ವಯಸ್ಸಿನಿಂದಲೇ ಗಾಲ್ಫ್ ಆರಂಭಿಸಿದ್ದರು. ಇವರ ಮಲೇಷ್ಯಾದ ಕೌಲಾಲಂಪುರದಲ್ಲಿ ಪರಿಣಿತ ಕೋಚ್ ಗಳಿಂದ ತರಬೇತಿ ಪಡೆದಿದ್ದಾರೆ. ವಿಶ್ವ ಅಮೆಚೂ ಗಾಲ್ಫ್ ಶ್ರೇಯಾಂಕದಲ್ಲಿ 11ನೇ ಸ್ಥಾನ ಪಡೆದಿದ್ದರು. 2015ರಲ್ಲಿ ಭಾರತದ ಅತ್ಯುತ್ತಮ ಗಾಲ್ಫ್ ಅಮೆಚೂರ್ ಹಾಗೂ ಏಷ್ಯಾದ ಅತ್ಯುತ್ತಮ ಅಮೆಚೂರ್ ಗಾಲ್ಫ್ ಆಗಿ ಹೊರಹೊಮ್ಮಿದ್ದರು.
6. ಗಾಯತ್ರಿ ನಿತ್ಯಾನಂದ (ಶೂಟಿಂಗ್): ಗಾಯತ್ರಿ ನಿತ್ಯಾನಂದ ಭಾರತ ಗಮನಾರ್ಹ ಶೂಟಿಂಗ್ ಪಟು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ವೈಯಕ್ತಿಕ ಹಾಗೂ ತಂಡದ ಎರಡೂ ವಿಭಾಗದಲ್ಲಿ ಗಾಯತ್ರಿ ಪದಕ ಗೆದ್ದಿದ್ದಾರೆ. 50 ಮೀ. ರೈಫಲ್ 3 ಹಂತದ ಸ್ಪರ್ಧೆಯಲ್ಲಿ ಗಾಯತ್ರಿ ಕಂಚಿನ ಪದಕ ಹಾಗೂ ಮೂವರು ಸದಸ್ಯರ ತಂಡದ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು. ಕಳೆದ ವರ್ಷ ನಡೆದಿದ್ದ ವಿಶ್ವ ಕಿರಿಯರ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ 18ನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದ್ದರು.
7. ಋತುರಾಜ್ ಸಿಂಗ್ (ಶೂಟಿಂಗ್): ಭಾರತದ ಮತ್ತೊರ್ವ ಶೂಟಿಂಗ್ ಉದಯನ್ಮುಖ ಆಟಗಾರ ಋತುರಾಜ್ ಸಿಂಗ್. 25 ಮೀ. ಸ್ಟಾಂಡರ್ಡ್ ಪಿಸ್ತೂಲ್ ವಿಭಾಗದಲ್ಲಿ ಋತುರಾಜ್ ತಂಡದೊಂದಿಗೆ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು. ಫ್ರಾನ್ಸ್ ತಂಡವನ್ನು ಫೈನಲ್ ಹಣಾಹಣಿಯಲ್ಲಿ ಎರಡು ಅಂಕಗಳ ಅಂತರದಲ್ಲಿ ಮಣಿಸಿ ಅಗ್ರ ಸ್ಥಾನ ಪಡೆದಿದ್ದರು. ಅಸ್ಸಾಂ ಶೂಟರ್ ಜಿತು ರಾಯ್ ಅವರ ದೊಡ್ಡ ಅಭಿಮಾನಿಯಾಗಿದ್ದಾರೆ. 19ರ ಪ್ರಾಯದ ಶೂಟರ್ ಕಳೆದ ವರ್ಷ 559 ಅಂಕಗಳೊಂದಿಗೆ ಬೆಳ್ಳಿ ಪದಕ ಪಡೆದಿದ್ದರು.
8.ಆಕರ್ಷಿ ಕಶ್ಯಪ್(ಬ್ಯಾಡ್ಮಿಂಟನ್): ಆಕರ್ಷಿ ಕಶ್ಯಪ್ ಅವರು ಭಾರತದ ಕಿರಿಯರ ಬ್ಯಾಡ್ಮಿಂಟನ್ ಸ್ಟಾರ್ ಆಟಗಾರ್ತಿಯಾಗಿದ್ದಾರೆ. ಕಳೆದ ಭಾನುವಾರ ಬೆಂಗಳೂರಿನಲ್ಲಿ ಮುಕ್ತಾಯವಾಗಿದ್ದ ಯೊನೆಕ್ಸ್-ಸನ್ ರೈಸ್ ಆಲ್ ಇಂಡಿಯಾ ಹಿರಿಯರ ಶ್ರೇಯಾಂಕದ ಟೂರ್ನಿಯಲ್ಲಿ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಇವರು 2018ರ ಏಷ್ಯನ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಅಲ್ಲದೆ, 2019ರ ದಕ್ಷಿಣ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತ ತಂಡದಲ್ಲಿದ್ದರು.
9. ಮಿಥುನ್ ಮಂಜುನಾಥ್(ಬ್ಯಾಡ್ಮಿಂಟನ್): ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರರಲ್ಲಿ ಮಿಥುನ್ ಮಂಜುನಾಥ್ ಕೂಡ ಒಬ್ಬರಾಗಿದ್ದಾರೆ. ಕಳೆದ ಭಾನುವಾರ ಬೆಂಗಳೂರಿನಲ್ಲಿ ಮುಕ್ತಾಯವಾಗಿದ್ದ ಯೊನೆಕ್ಸ್-ಸನ್ ರೈಸ್ ಆಲ್ ಇಂಡಿಯಾ ಹಿರಿಯರ ಶ್ರೇಯಾಂಕದ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಫೈನಲ್ ಹಣಾಹಣಿಯಲ್ಲಿ 21-17, 21-9 ಅಂತರದಲ್ಲಿ ಕೌಶಲ್ ಧರ್ಮವೀರ್ ವಿರುದ್ಧ ಗೆದ್ದು ಚಾಂಪಿಯನ್ ಆದರು. ಮಿಥುನ್ ಮಂಜುನಾಥ್ ವಿಶ್ವದ 75ನೇ ಶ್ರೇಯಾಂಕ ಪಡೆಯುವ ಮೂಲಕ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ 5ನೇ ಆವೃತ್ತಿಯಲ್ಲಿ ಪುಣೆ-7 ಪರ ಆಡಿದ್ದರು.
10.ಗಾಯತ್ರಿ ಗೋಪಿಚಂದ್ (ಬ್ಯಾಡ್ಮಿಂಟನ್) ಭಾರತ ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ಪುಲ್ಲೆಲಾ ಗೋಪಿಂಚಂದ್ ಅವ ಪುತ್ರಿ ಗಾಯತ್ರಿ ಗೋಪಿಂಚಂದ್. ಇವರು 2018ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಭಾರತ ಬ್ಯಾಡ್ಮಿಂಟನ್ ತಂಡದಲ್ಲಿ ಇವರು ಇದ್ದರು. 2019ರ ದಕ್ಷಿಣ ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕ ಗೆದ್ದಿದ್ದ ಭಾರತ ತಂಡದಲ್ಲಿ ಇವರು ಇದ್ದರು. ಇದೇ ಕ್ರೀಡಾಕೂಟದ ಮಹಿಳೆಯರ ಸಿಂಗಲ್ಸ್ ಹಣಾಹಣಿಯಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದರು. ಸದ್ಯ ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ 200ನೇ ಸ್ಥಾನ ಪಡೆದಿದ್ದಾರೆ.