ನಾಳೆ ಉಪ ಕದನ ಫಲಿತಾಂಶ; ದೇವರ ಮೊರೆ ಹೋದ ಬಿಎಸ್ವೈ

 ಬೆಂಗಳೂರು, ಡಿ.8 :     ಇದೇ ತಿಂಗಳ 5ರಂದು ನಡೆದ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಾಳೆ ನಡೆಯಲಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉತ್ತಮ ಫಲಿತಾಂಶಕ್ಕಾಗಿ ದೇವರ ಮೊರೆ ಹೋಗಿದ್ದಾರೆ. ಸರ್ಕಾರ ಉಳಿಸಿಕೊಳ್ಳಲೇ ಬೇಕು ಎಂಬ ಹಠಕ್ಕೆ ಬಿದ್ದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ತೆರಳಿದ್ದಾರೆ. ಸರ್ಕಾರದ ಉಳಿವಿಗಾಗಿ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಉತ್ತಮ ಫಲಿತಾಂಶದೊಂದಿಗೆ ಮೂರೂವರೇ ವರ್ಷಗಳ ಕಾಲ ಸರ್ಕಾರ ಯಾವುದೇ ಅಡಚಣೆ, ತೊಂದರೆ ಇಲ್ಲದೆ ಮುಂದುವರಿಯಬೇಕು ಎಂಬ ಉದ್ದೇಶದಿಂದ ಅವರು ಧರ್ಮಸ್ಥಳಕ್ಕೆ ತೆರಳಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 12ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದು ಸರ್ಕಾರ ಉಳಿಸಿಕೊಳ್ಳಲು ಪಣ ತೊಟ್ಟಿರುವ ಮುಖ್ಯಮಂತ್ರಿ ಯಡಿಯೂರಪ್ಪ, ದೇವರ ಮೊರೆ ಹೋಗಿದ್ದಾರೆ. ಈ ಹಿಂದೆ ಲೋಕಸಭೆ ಚುನಾವಣಾ ಪ್ರಕಟವಾಗುವಾಗ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಕೂಡ ಮಂಜುನಾಥನ ಮೊರೆ ಹೋಗಿದ್ದರು. ಆದರೆ ಅಂದು ಅವರ ಪ್ರಾರ್ಥನೆ, ಬೇಡಿಕೆ ಫಲಕಾರಿಯಾಗಿರಲಿಲ್ಲ.