ಇಂದು ಮಹಾತ್ಮಾ ಗಾಂಧೀಜಿ ಎಂದರೆ ಕೇವಲ ಮಾತನಾಡುವುದಕ್ಕೆ ಇರುವ ಒಂದು ವಿಷಯ ಅಷ್ಟೇ...!

      ಹುತಾತ್ಮ ದಿನವನ್ನು ಆಚರಣೆ ಮಾಡುವ ನಮಗೆ ಮಹಾತ್ಮನ ಕೆಲವು ಆದರ್ಶಗಳನ್ನು ಅಳವಡಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲವೇ?

ನಾನು ಇಲ್ಲಿ ಬರೆಯುವ ವಿಷಯಗಳನ್ನು ಕೆಲವರು ಮನಸಾರೆ ಒಪ್ಪಿಕೊಳ್ಳುತ್ತಾರೆ. ಮತ್ತೆ ಕೆಲವರು ಮುಲಾಜಿಲ್ಲದೆ ವಿರೋಧಿಸುತ್ತಾರೆ. ಏಕೆಂದರೆ ನಾನು ಉಲ್ಲೇಖಿಸುತ್ತಿರುವ ಈ ವ್ಯಕ್ತಿಯ ವ್ಯಕ್ತಿತ್ವವೇ ಆ ರೀತಿ ಇದೆ. ಅದರಲ್ಲೂ ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳು ಹಾಗೂ ಇಟ್ಟಂತ ಹೆಜ್ಜೆಗಳು ಎರಡು ಬಗೆಯ ಧೋರಣೆಯನ್ನು ತೋರಿಸುತ್ತದೆ. ಒಂದೆಡೆ ಹೇ ರಾಮ್ ಎನ್ನುವ ಅವರ ಮಾತುಗಳು ಹಾಗೂ ಇಸ್ಲಾಂ ಧರ್ಮದ ಬಗ್ಗೆ ತೋರಿದ ಅವರ ಮೃದು ನಿಲುವುಗಳು ಇವರಲ್ಲಿನ ವ್ಯಕ್ತಿತ್ವವನ್ನು ನಿಗೂಢವಾಗಿಸುತ್ತದೆ. ಅದರಲ್ಲೂ ಅಹಿಂಸೆಯನ್ನು ಬೋಧಿಸುವ ಮಹಾತ್ಮಾ ಗಾಂಧೀಜಿ ಅವರು ಧರ್ಮದ ದಳ್ಳುರಿಯಲ್ಲಿ ಜನಗಳು ಸಾಯುವಾಗ ಒಂದು ಕಡೆಗೆ ತಮ್ಮ ನಿಷ್ಠೆಯನ್ನು ಪ್ರದರ್ಶನ ಮಾಡಿದ್ದನ್ನು ಬಹಳಷ್ಟು ಜನ ಈಗಲು ವಿರೋಧಿಸುತ್ತಾರೆ. ಭಗತ್ ಸಿಂಗ್ ಸಾವಿನಲ್ಲಿ ಅವರು ನಡೆದುಕೊಂಡ ರೀತಿಯನ್ನು ತಿಳಿದು ಯುವಕರು ಗಾಂಧೀಜಿಯನ್ನು ವಿರೋಧಿಸುವಂತೆ ಮಾಡಿತು. ಆದರೆ ಹತ್ತು ಹಲವು ತಪ್ಪುಗಳ ಆಚೆಯೂ ಕೂಡ ಅವರ ಕೆಲವು ನಿಲುವುಗಳು ಮನುಕುಲಕ್ಕೆ ಅದರಲ್ಲೂ ಆದರ್ಶದ ಬದುಕಿಗೆ ಅವಶ್ಯಕ ಎನಿಸುತ್ತದೆ. ಅವರ ಮೇಲಿನ ಆರೋಪಗಳೋ ಅಥವಾ ನಿಜವಾಗಲೂ ಅವರು ಮಾಡಿದ್ದು ತಪ್ಪಾಗಿದ್ದವೋ ಅಥವಾ ಆ ಸಂದರ್ಭಕ್ಕೆ ಅವರ ಆ ನಡೆ ಅನಿವಾರ್ಯವಾಗಿತ್ತೋ ಎನ್ನುವುದನ್ನು ಕೊಂಚ ಬದಿಗಿಟ್ಟು ಆಲೋಚನೆ ಮಾಡಿದರೆ ಅವುಗಳಾಚೆಗೂ ಸಹ ಅವರು ಬೋಧಿಸಿದ ಕೆಲವು ವಿಚಾರಗಳು ಇಂದಿಗೂ ಅವಶ್ಯಕವಾಗಬೇಕಿತ್ತು ಎನಿಸುತ್ತದೆ. ಆದರೆ ಅದು ಬೇರೆಯೇ ಆಗಿದೆ. ಮಹಾತ್ಮನೆಂದು ಕರೆಸಿಕೊಂಡ ಆ ಪುಣ್ಯಾತ್ಮನ ಸಾವಿನ ಜೊತೆಯಲ್ಲಿಯೇ ಆತನ ತತ್ವಗಳು ಏನಾದವು ಎನ್ನುವುದರ ಕುರಿತು ಒಂಚೂರು ಆಲೋಚನೆ ಮಾಡುವ ನಿಟ್ಟಿನಲ್ಲಿ ಕಣ್ಣಾಡಿಸೋಣ. ಅದರಲ್ಲೂ ಗಾಂಧೀಜಿ ಅವರ ಪುಣ್ಯಸ್ಮರಣೆಯ ಜೊತೆಗೆ ಅವರ ತತ್ವಗಳು ಚಿಂತನೆಗಳ ಕಥೆ ಏನಾದವು ಎನ್ನುವುದರ ಕುರಿತು ನಾವೊಂದಿಷ್ಟು ಚಿಂತನೆ ಮಾಡೋಣ ಬನ್ನಿ. 

ಸಾವು ಎಲ್ಲರಿಗೂ ಕಟ್ಟಿಟ್ಟ ಬುತ್ತಿ ಅದರಿಂದ ಯಾರೂ ಹೊರತಾಗಿಲ್ಲ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಲೇ ಬೇಕು. ಒಪ್ಪಿದರೇನು ಬಿಟ್ಟರೇನು ಅದು ಜೀವನದ ಅಂತಿಮ ಸತ್ಯ. ಆದರೆ ಕೆಲವು ಸಾವುಗಳು ಮಾತ್ರ ಈ ಜಗತ್ತಿಗೆ ತುಂಬಲಾರದ ನಷ್ಟವನ್ನುಂಟು ಮಾಡುತ್ತವೆ. ಹುಟ್ಟಿದಾಗ ಉಸಿರಿದ್ದು, ಹೆಸರು ಇರದೇ ಇರುವ ಸನ್ನಿವೇಶದಿಂದ ಹಿಡಿದು ಸತ್ತಾಗ ಹೆಸರಿದ್ದು ಉಸಿರಿಲ್ಲದೆ ಇರುವ ಸನ್ನಿವೇಶದ ತನಕ ಕೆಲವರು ನಮ್ಮನ್ನು ಕಾಡುತ್ತಾರೆ. ತಮ್ಮ ಆದರ್ಶಮಯ ಬದುಕಿನಿಂದ ನಮ್ಮನ್ನು ಕೆಣಕುತ್ತಾರೆ. ಆ ಕಾರಣದಿಂದಲೇ ಅವರ ಜನ್ಮ ನಮಗೆಷ್ಟು ಖುಷಿ ನೀಡುತ್ತದೆಯೋ ಅವರ ಸಾವು ಕೂಡ ನಮ್ಮನ್ನು ಅಷ್ಟೆ ಕಾಡುತ್ತದೆ. ಹಾಗೆ ಜೀವನದುದ್ದಕ್ಕೂ ಮೌಲ್ಯಗಳನ್ನು ಬಿತ್ತುತ್ತ ತಾವು ಬೋಧಿಸುವ ದಾರಿಯಲ್ಲಿಯೇ ಮೊತ್ತ ಮೊದಲು ತಾವು ನಡೆಯುತ್ತ, ನಮ್ಮನ್ನು ಸಹ ಅದೇ ದಾರಿಯಲ್ಲಿ ನಡೆಯಿರಿ ಎನ್ನುವ ಆದರ್ಶ ಮಾರ್ಗವನ್ನು ಬೋಧಿಸಿದ ಮಹಾನ್ ಚೇತನವೇ ಮಹಾತ್ಮಾ ಗಾಂಧಿ. ನಾನು ಮೊದಲೇ ಹೇಳಿದ್ದೇನೆ ಸಿದ್ಧಾಂತಗಳ ವೈರೂಧ್ಯದ ಮಧ್ಯದಲ್ಲಿ ನಾವು ಎಲ್ಲವನ್ನು ವಿರೋಧಿಸುವ ಮಟ್ಟಕ್ಕೆ ಹೋದಲ್ಲಿ ಕೆಲವು ವಿಚಾರಗಳನ್ನು ನಾವು ಅರ್ಥೈಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಹೋಗಬಹುದು. ಅದಕ್ಕೆ ಈ ಲೇಖನ ಓದಿ ಮುಗಿಸುವ ವರೆಗೂ ಯಾವ ಸಿದ್ಧಾಂತಕ್ಕೂ ಅಂಟಿಕೊಳ್ಳದೇ ಅದರಾಚೆ ಬಂದು ಓದಿ. ಆಮೇಲೆ ತಮಗೆ ಏನು ಎನಿಸಿದರೂ ಅದು ತಮ್ಮ ವೈಯಕ್ತಿಕ ಅಭಿಪ್ರಾಯ. ಏಕೆಂದರೆ 21ನೇ ಶತಮಾನದಲ್ಲಿ ಮನುಕುಲ ಕಂಡ ಮಹಾನ್ ವ್ಯಕ್ತಿತ್ವದಲ್ಲಿ ಮೇರು ಪಂಕ್ತಿಯ ಮಹಾನ್ ವ್ಯಕ್ತಿ ಈ ಸಾಬರಮತಿಯ ಸಂತ. ಸ್ವಾತಂತ್ರ್ಯ ಸಂಗ್ರಾಮದ ದಾರಿಯಲ್ಲಿ ತನ್ನದೇ ಆದ ಮಾರ್ಗಗಳನ್ನು ಅನುಸರಿಸುವ ಮೂಲಕ ಇಂದು ಎಲ್ಲರಿಗಿಂತ ಭಿನ್ನವಾಗಿ ಗುರುತಿಸಿಕೊಳ್ಳುವ ಮಹಾತ್ಮಾ ಗಾಂಧೀಜಿಯವರು ಕೆಲವರ ಪಾಲಿಗೆ ಆದರ್ಶಗಳ ಖಣಿ ಮತ್ತೆ ಕೆಲವರ ಪಾಲಿಗೆ ಪ್ರಮಾದಗಳ ಗಣಿ. ಕೆಲವರ ಹಲವು ಸಮಸ್ಯೆಗಳಿಗೆ ಉತ್ತರ. ಮತ್ತೆ ಕೆಲವರ ಪಾಲಿಗೆ ಅವರು ಎಂದು ಉತ್ತರಿಸಲಾಗದೇ ಉಳಿದ ಪ್ರಶ್ನೆ. ಆದರೆ ಸಿದ್ಧಾಂತಗಳ ವೈರುದ್ಯವೇನೇ ಇದ್ದರೂ ಬಾಪೂ ಎನ್ನವ ಬರಿಮೈ ಪಕೀರ ಮಾತ್ರ ಒಂದು ಮೌಲ್ಯಯುತ ಬದುಕಿನ ಮಾರ್ಗದರ್ಶಿಯಾಗಿದ್ದಾರೆ ಎಂದು ಯಾವ ಅಳುಕಿಲ್ಲದೇ ಹೇಳಬಹುದು. 
ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗಿ ಹಲವು ಸವಂತ್ಸರಗಳು ಗತಿಸಿ ಹೋಗಿದ್ದವು. ಸಾವಿರಾರು ಜನರ ಪ್ರಾಣಹರಣದಂತಹ ಘಟನೆಗಳು ಘಟಿಸಿ ಹೋಗಿದ್ದವು. ಲಾಲ, ಬಾಲ, ಪಾಲರಂತವರು ಧುಮುಕಿ ಈಜುತ್ತಲಿದ್ದ ಸ್ವಾತಂತ್ರದ ಗಂಗೆಯಲ್ಲಿ ಗಾಂಧಿ ಧುಮುಕಿದ್ದು ನಂತರದ ಕಾಲಘಟ್ಟದಲ್ಲಿಯೇ ಆದರೂ ಕೂಡ ಅವರ ಬೆಳವಣಿಗೆಯ ವೇಗಕ್ಕೆ ಕನ್ನಡಿ ಹಿಡಿಯುವುದು ಮಾತ್ರ ಅವರ ಆದರ್ಶಮಯವಾದ ಬದುಕು. ತಮ್ಮ ಆದರ್ಶವುಳ್ಳ ಹಾಗೂ ಅಂಜಿಕೆ ಇಲ್ಲದ ನಡೆಯಿಂದಲೇ ಇಂದಿಗೂ ಕೂಡ ಜಗತ್ತಿನಲ್ಲಿ ಶಾಶ್ವತವಾಗಿದ್ದಾರೆ. ದೇಹದಿಂದ ದೂರವಾದರೂ ಆದರ್ಶಗಳಿಂದ ಜೀವಂತವಾಗಿದ್ದಾರೆ. ಸತ್ತಮೇಲೂ ಬದುಕುವ ಕೆಲವೇ ಕೆಲವು ಜನಗಳಲ್ಲಿ ಗಾಂಧೀಜಿ ಕೂಡ ಒಬ್ಬರಾಗಿ ಇಂದು ನಮ್ಮಲ್ಲಿ ಗುರುತಿಸಿಕೊಂಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧೀ ಎಲ್ಲರಿಗೂ ಗೊತ್ತು, ಆದರೆ ಆದರ್ಶವುಳ್ಳ ಗಾಂಧೀಜಿಯನ್ನು ನಾವು ತಿಳಿಯಬೇಕೆಂದರೆ ಅವರ ಕುರಿತು ಅಧ್ಯಯನ ಮಾಡುವುದು ಅನಿವಾರ್ಯ ಹಾಗೂ ಅವಶ್ಯಕವಾಗುತ್ತದೆ. ಅಧ್ಯಯನ ಕಡಿಮೆ ಇದ್ದವರು ಮಾತ್ರ ಅವರ ಕೆಲವು ವಿಚಾರಗಳನ್ನು ಮುಂದಿಟ್ಟುಕೊಂಡು ಅಡ್ಡಾದಿಡ್ಡಿ ಮಾತನಾಡಬಹುದು. ಆದರೆ ಅವರಂತೆ ಬದುಕಿ ತೋರಿಸಿ ಎಂದರೆ ಯಾರೂ ಮುಂದೆ ಬರುವುದಿಲ್ಲ. ಒಂದು ವೇಳೆ ಮುಂದೆ ಬಂದರೂ ಕೂಡ ಬದುಕುವುದಕ್ಕೆ ಸಾಧ್ಯವಾಗುವುದಿಲ್ಲ.  ಕಾರಣ ಗಾಂಧಿ ಆರಿಸಿಕೊಂಡ ಬದುಕಿನ ದಾರಿ ಸಾಮನ್ಯನೊಬ್ಬನಿಂದ ಸವೆಸಲು ಸಾಧ್ಯವೇ ಇಲ್ಲ. ಒಂದು ವೇಳೆ ಆ ದಾರಿಗೆ ಹೆಜ್ಜೆ ಇಟ್ಟರೆ ಕೊನೆ ಮುಟ್ಟುವುದು ಕೂಡ ಸುಲಭವಿಲ್ಲ. ಅದಕ್ಕೆ ಹೇಳಿದ್ದು ಗಾಂಧಿ ಮಾರ್ಗ ಗಾಂಧಿಗಲ್ಲದೇ ಬೇರಾ​‍್ಯರಿಗೂ ಒಲಿಯಲೇ ಇಲ್ಲ. ಕೆಲವು ಜನ ಅವರ ಆದರ್ಶಗಳಲ್ಲಿ ನಾವು ನಡೆಯುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತ ಬಂಡ ಬಾಳು ಬಾಳುತ್ತಿದ್ದಾರೆ. ಡೋಂಗಿ ಗಾಂಧಿವಾದವನ್ನು ಅಳವಡಿಸಿಕೊಂಡು ಬದುಕುತ್ತಿದ್ದಾರೆ. ನನಗೆ ಗೊತ್ತಿದೆ ಆ ದಿನ ಗಾಂಧೀ ಮಾತ್ರ ಗುಂಡೇಟಿಗೆ ಬಲಿಯಾಗಲಿಲ್ಲ. ಅವರ ಜೊತೆಗ ಗಾಂಧಿ ಮಹಾತ್ಮನ ತತ್ವಗಳು ಕೂಡ ಗುಂಡೇಟಿಗೆ ಬಲಿಯಾದವು. ಅಂದು ಬಾಪೂವಿನ ದೇಹ ಮಾತ್ರ ಚಿತೆ ಏರಲಿಲ್ಲ. ದೇಹದ ಜೊತೆಗೆ ಆದರ್ಶಗಳು ಕೂಡ ಚಿತೆ ಏರಿದವು. ಗಾಂಧೀ ಶರೀರ ಮಾತ್ರ ಸುಟ್ಟು ಬೂದಿಯಾಗಲಿಲ್ಲ ಜೊತೆಗೆ ಅವರ ಚಿಂತನೆಗಳು ಕೂಡ ಸುಟ್ಟು ಬೂದಿಯಾದವು. ಅದರ ಪರಿಣಾಮವೇ ಇಂದು ನಡೆಯುತ್ತಿರುವ ಅರ್ಥವಿಲ್ಲದ ಆಡಳಿತ, ವ್ಯರ್ಥಮಯ ಹೋರಾಟ, ಸ್ವಾರ್ಥಮಯ ಸಂಸಾರ. 
ನಿಜ ನಾಳೆಗೆ ಗಾಂಧೀ ಎನ್ನುವ ಸಾಬರಮತಿಯ ಸಂತ ನಮ್ಮನ್ನಗಲಿ ಬರೋಬ್ಬರಿ 75 ವರ್ಷಗಳು ಗತಿಸುತ್ತವೆ. ತನ್ನ ಆವಿಷ್ಯವನ್ನು ಈ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಅರೆಬೆತ್ತಲೆಯ ಪಕೀರ ಖಾದಿಯನ್ನು ನೂಲುತ್ತ ಸ್ವಾಭಿಮಾನವನ್ನು ಬಿತ್ತಿದ, ಬರಿಮೈಯಲ್ಲಿ ಬದುಕಿ ಸರಳತೆಯನ್ನು ತಿಳಿಸಿದ, ಸಸ್ಯಾಹಾರ ಸೇವಿಸಿ ಸಾತ್ವಿಕ ಬದುಕು ನಡೆಸಿದ, ಅಹಿಂಸೆಯನ್ನು ಬೋಧಿಸಿ ಸಂತನಂತೆ ಜೀವಿಸಿದ, ಸತ್ಯವನ್ನು ಮಾತನಾಡಿ ಹರಿಶ್ಚಂದ್ರನಂತೆ ಬಾಳಿದ. ಆದರೆ ಆತನ ಸಾವಿನ ಜೊತೆಗೆ ಈ ಎಲ್ಲ ಆದರ್ಶಗಳು ಮಣ್ಣುಗೂಡಿದವೇನೊ ಎನಿಸುತ್ತಿದೆ. ಕೇವಲ ಗಾಂಧೀ ಎನ್ನುವ ಹೆಸರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಎನ್ನುವ ಪಕ್ಷವನ್ನು ಮುನ್ನಡೆಸಿದವರು ಇಂದು ಅದೇ ಗಾಂಧಿಯ ತತ್ವಗಳನ್ನಾಗಲಿ, ಆದರ್ಶಗಳನ್ನಾಗಲಿ ಆಚರಿಸಲು ಸುತಾರಾಂ ಸಿದ್ಧವಿಲ್ಲ. ಇನ್ನು ಬಿಜೆಪಿಯ ಕೆಲವರಿಗಂತೂ ಗಾಂಧೀ ಹೆಸರು ಕಂಡರೆ ಆಗುವುದಿಲ್ಲ. ಎಂದ ಮೇಲೆ ಆತ ನಡೆದು ಹೋದ ದಾರಿಯನ್ನು ಅಗೆದು ಹಾಕುತ್ತಿರುವ ಇವರುಗಳಿಂದ ಶಾಂತಿಯ ಸೌಧವನ್ನು ಕಟ್ಟಲು ಸಾಧ್ಯವಾ? ಎನ್ನುವ ಪ್ರಶ್ನೆ ನಮ್ಮನ್ನು ಯಾವತ್ತಿಗೂ ಕಾಡುತ್ತದೆ. ಯಾವಾಗ ಸತ್ಯದ ದರ್ಶನವಾಯಿತೋ ಆವಾಗ ಸಿದ್ಧಾರ್ಥನು ಬುದ್ಧನಾಗುತ್ತಾನೆ. ಮಹಾವೀರನು ಸಂತನಾಗುತ್ತಾನೆ. ಹಾಗೇ ಮಹಾತ್ಮ ಗಾಂಧೀಯೂ ಕೂಡ ಸತ್ಯದ ದರ್ಶನವಾಗುತ್ತಿದ್ದಂತೆ ಆದರ್ಶಮಯ ಬದುಕಿಗೆ ಮಾರು ಹೋಗುತ್ತಾರೆ. ಸತ್ಯಕ್ಕಾಗಿ ತನ್ನನ್ನು ತಾನು ಸಮರ​‍್ಿಸಿಕೊಳ್ಳುತ್ತಾರೆ. ಆದರೆ ಇಂದು ಅದೇ ಗಾಂಧೀ ಮಹಾತ್ಮನ ಸತ್ಯವಾಗಲಿ, ಅವನ ಬದುಕಾಗಲಿ ಎಷ್ಟೋ ಜನರಿಗೆ ಆಡಿಕೊಳ್ಳುವುದಕ್ಕೆ ಇರುವಂತ ಒಂದು ವಿಷಯವಾಗಿರುವುದು ನಿಜಕ್ಕೂ ದುರಂತವೇ ಸರಿ. ತಮ್ಮ ಆತ್ಮಚರಿತ್ರೆಯ ಒಂದೊಂದು ಪುಟದಲ್ಲಿಯೂ ಯಾವುದನ್ನು ಮುಚ್ಚಿಡದೆ ಎಲ್ಲವನ್ನು ಇಂಚಿಂಚು ಬಿಚ್ಚಿಡುವ ಮಹಾತ್ಮ ಸತ್ಯಾನ್ವೇಷಣೆಯ ಪ್ರಯೋಗದ ಜೊತೆಗೆ ನಮ್ಮ ಮನೋವಿಶ್ಲೇಷಣೆಯನ್ನು ಸಹ ಮಾಡಿಸುತ್ತಾರೆ. ಅದನ್ನು ಅರಿಯಬೇಕೆಂದರೆ ಅವರ ಆತ್ಮಚರಿತ್ರೆಯನ್ನೊಮ್ಮೇ ಓದಲೇ ಬೇಕು. ಅದನ್ನು ಓದುತ್ತಲೇ ಅವರ ಮೇಲಿರುವ ನಂಬಿಕೆ ಇಮ್ಮಡಿಯಾಗುತ್ತದೆ, ವಿರೋಧ ಪ್ರೇಮವಾಗಿ ಬದಲಾಗುತ್ತದೆ. ಕೆಲವು ವಿಷಯಗಳಲ್ಲಿ ಗಾಂಧಿ ತೆಗೆದುಕೊಂಡು ನಿರ್ಧಾರದ ವಿರುದ್ಧ ಬಹಳಷ್ಟು ಭಾರತೀಯರಿಗೆ ಕೋಪವಿದೆ. ಬಹಳಷ್ಟು ಜನರಿಗೆ ಅದರ ಕುರಿತು ಬೇಸರವಿದೆ. ಆದರೆ ಉತ್ತರ ಕೊಡಬೇಕಾದ ಮಹಾತ್ಮ ಮಾತ್ರ ನಮ್ಮೊಂದಿಗಿಲ್ಲ. ಹಾಗೆಂದು ಅವರ ದಾರಿಯನ್ನು ತಪ್ಪೆಂದು ಹೇಳುತ್ತ ಅವರನ್ನು ಖಳನಾಯಕನಂತೆ ಬಿಂಬಿಸುವ ಮುನ್ನ ಒಮ್ಮೆ ಹೃದಯದಿಂದ ಯೋಚಿಸಿದರೆ ಅವರಂತ ಬದುಕು ಮತ್ಯಾರು ಈ ಜಗತ್ತಿನಲ್ಲಿ ಬದುಕಿ ಹೋಗಿರುವುದಕ್ಕೆ ಸಾಧ್ಯವೇ ಇಲ್ಲ ಎಂಬ ಸತ್ಯ ನಮಗರಿವಾಗುತ್ತದೆ. ಅಂದು ಅವರು ತೆಗೆದುಕೊಂಡ ಕೆಲವು ಅನಿವಾರ್ಯದ ನಿರ್ಧಾರಗಳನ್ನು ಪ್ರಮಾಧಗಳು ಎನ್ನುವ ಮಟ್ಟಕ್ಕೆ ವಿಚಾರ ಮಾಡಿದರೆ ಅವರು ಹಾಕಿಕೊಟ್ಟ ಸತ್ಯದ ಮಾರ್ಗಕ್ಕೆ ಅರ್ಥವೂ ಇರುವುದಿಲ್ಲ, ಅವರು ಮಾಡಿದ ಕಾರ್ಯಗಳಿಗೆ ಬೆಲೆಯೂ ಇರುವುದಿಲ್ಲ. ಅದನ್ನು ಮೊದಲು ಮನಗಾಣ ಬೇಕಿದೆ. ಸಿದ್ಧಾಂತಗಳ ವೈರುದ್ಯಗಳ ಮಧ್ಯದಲ್ಲಿ ಅವರನ್ನು ವಿರೋಧಿಸಲು ಹೋಗಿ ನಮ್ಮ ಬದುಕಿನ ಬೆಲೆಯನ್ನು ನಾವು ಕಳೆದುಕೊಳ್ಳುತ್ತಿರುವುದು ನಮ್ಮ ಅರಿವಿಗೆ ಬರುತ್ತಿಲ್ಲ ಎನ್ನುವುದೇ ನೈಜ ದುರಂತ. 
ಮಹಾತ್ಮನಿಗೆ ರಾಮನೇ ಆದರ್ಶ. ರಾಮನೆಂದರೆ ಅದಮ್ಯ ಪ್ರೀತಿ. ಆದರೆ ಇಂದು ಅದೇ ರಾಮನನ್ನು ಆರಾಧಿಸುವವರು ಗಾಂಧಿಯನ್ನು ವಿರೋಧಿಸುವರು ಕಾರಣ ಮಹಾತ್ಮನು ಅಂದು ಧರ್ಮದ ಓಲೈಕೆಯಲ್ಲಿ ತಮ್ಮನ್ನು ತಾವು ಕಳೆದುಕೊಂಡರು ಎನ್ನುವುದು ಬಹು ಜನರ ಆರೋಪ. ಪರಸ್ಪರರು ಕತ್ತಿ ಮಸೆಯುವ ಸಂದರ್ಭದಲ್ಲಿ ಅಹಿಂಸಾವಾದಿಯಾದ ಗಾಂಧೀ ಅದ್ಯಾಕೆ ಒಂದೆಡೆ ಜಾರಿದರು ಎನ್ನುವುದು ಒಬ್ಬೊಬ್ಬರ ವಿಶ್ಲೇಷಣೆಯಲ್ಲಿ ಒಂದೊಂದು ಅರ್ಥ ಕೊಡುತ್ತದೆ. ಆದರೆ ನಿಜವಾದ ಉತ್ತರ ಮಹಾತ್ಮನೇ ಕೊಡಬೇಕಷ್ಟೆ. ಆರೋಪ ಎನ್ನುವುದು ಒಂದುಕಡೆ ನೋಡಿದರೆ ಅದು ಸತ್ಯ ಎನಿಸುತ್ತದೆ. ಆದರೆ ಇನ್ನೊಂದು ಕಡೆ ನೋಡಿದರೆ ಅದು ಅನಿವಾರ್ಯವೂ ಇತ್ತು ಅನಿಸುತ್ತದೆ. ಹಾಗೆಂದು ಅದು ತಪ್ಪಾಗಿದ್ದರೆ ಅದನ್ನು ಒಪ್ಪಿಕೊಳ್ಳಬೇಕು ಎಂದೇನಿಲ್ಲ. ತಪ್ಪು ಯಾರು ಮಾಡಿದರು ತಪ್ಪೇ. ಅದನ್ನು ಒಪ್ಪಿಕೊಳ್ಳುವ ಗುಣ ಯಾರ ಬಳಿ ಇದೆಯೋ ಅವರು ಮುಂದಿನ ದಿನಗಳಲ್ಲಿ ಬದಲಾವಣೆಗೆ ತೆರೆದುಕೊಳ್ಳುತ್ತಾರೆ ಎನ್ನುವುದಕ್ಕೆ ಮಹಾತ್ಮಾ ಗಾಂಧೀ ಅವರ ಬದುಕು ನಮಗೆ ತೋರಿಸಿಕೊಡುತ್ತದೆ. ಅಂದು ಸ್ವಾತಂತ್ರ್ಯ ಸಂಗ್ರಾಮದ ಚುಕ್ಕಾಣಿಯನ್ನು ತಮ್ಮ ಕೈಗೆತ್ತಿಕೊಂಡ ಗಾಂಧೀಜಿ ಹೋರಾಟದ ದಾರಿಯನ್ನೇ ಬದಲಿಸಿದರು. ರಕ್ತಕ್ಕೆ ಬದಲಾಗಿ ಶಾಂತಿಯನ್ನು ಬೋಧಿಸಿದರು. ಕಠೀಣ ಹೃದಯವನ್ನು ಬೇಧಿಸುವುದಕ್ಕಾಗಿ ಉಪವಾಸ ಸತ್ಯಾಗ್ರಹದ ಬಾಣವನ್ನು ಪ್ರಯೋಗಿಸಿದರು. ಕೊನೆಗೆ ಅದರಲ್ಲಿ ಯಶಸ್ವಿ ಕೂಡ ಆದರು. ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ಪ್ರಾಣ ನೀಡಿದ್ದರೂ ಕೂಡ ಗಾಂಧೀಯ ಹೆಸರು ಮಾತ್ರ ಮೊದಲಿಗೆ ಬಂದು ಮಿಕ್ಕವರು ನೇಪಥ್ಯಕ್ಕೆ ಸರಿದರು ಎನ್ನುವುದು ಹಲವರ ವಾದ. ಆದರೆ ಗಾಂಧೀ ಹೋರಾಟ ಮಾಡಿದ್ದು ಸತ್ಯವೆಂದ ಮೇಲೆ ವಾದ ಮಾಡುವುದರಲ್ಲಿ ಅರ್ಥವೇ ಇಲ್ಲ. ಆಟದಲ್ಲಿ ಗೆಲುವು ಪಡೆವಾಗ ಇಡೀ  ತಂಡದ ಪಾತ್ರವಿದ್ದರೂ ಕೂಡ ಗೆಲವಿನ ಶ್ರೇಯ ಸಲ್ಲುವುದು ನಾಯಕನಿಗೆ ಎನ್ನುವಂತೆ ಸ್ವಾತಂತ್ರ್ಯದ ಶ್ರೇಯ ಗಾಂಧಿಗೆ ನಮ್ಮ ಜನ ನೀಡಿದ್ದಾರೆಯೇ ಹೊರತು ಗಾಂಧಿ ಅದನ್ನು ಬಯಸಲಿಲ್ಲ. ಮನಸ್ಸು ಮಾಡಿದ್ದರೆ ಕಾಂಗ್ರೇಸ್‌ನ್ನು ದಾಳವಾಗಿಟ್ಟುಕೊಂಡು ಯಾವ ಹುದ್ದೆಯನ್ನು ಬೇಕಾದರು ಗಾಂಧೀಜಿ ಪಡೆಯಬಹುದಾಗಿತ್ತಲವೇ? ಆದರೂ ಅದನ್ನು ಇಚ್ಚಿಸದ ಅವರು ಅಂದು ಕಾಂಗ್ರೆಸ್‌ನ್ನೇ ವಿಸರ್ಜನೆ ಮಾಡಿ ಎಂದು ಹೇಳಿದರು. ಆದರೆ ಅಧಿಕಾರದ ಆಸೆಯನ್ನಿಟ್ಟುಕೊಂಡು ಅದರ್ಶಗಳ ಸೋಗಲಾಡಿತನವನ್ನು ಪ್ರದರ್ಶಿಸಿದ ಕೆಲವರು ಗಾಂಧಿಯನ್ನೇ ದೂರವಿಟ್ಟು ಬಿಟ್ಟರು. ಆ ಮೂಲಕವೇ ಗಾಂಧಿ ಬದುಕಿರಬೇಕಾದರೆ ಅವರ ಆದರ್ಶಗಳನ್ನು ಕೊಂದು ಹಾಕಿದರು. ಇಂದು ಅವರ ಹೆಸರನ್ನೇ ಬಂಡವಾಳ ಮಾಡಿಕೊಂಡು ಬದುಕು ಕಟ್ಟಿಕೊಳ್ಳುತ್ತಿಲ್ಲವೇ? ಅದಕ್ಕೆ ಹೇಳಿದ್ದು ನಿನ್ನ ವಿಚಾರಗಳು ಇವರಿಗೆ ಬೇಕಿಲ್ಲ ನಿನ್ನ ಹೆಸರು ಮಾತ್ರ ಸಾಕು ಎಂದು. 
ಅಂದು ಗಾಂಧಿ ಸತ್ಯದ ಮಾರ್ಗದಲ್ಲಿ ನಡೆದರು. ಆದರೆ ಇಂದು ಅವರಿದ್ದ ಭಾರತದಲ್ಲಿ ನಾವು ಅಸತ್ಯದ ದಾರಿಯನ್ನು ನಮ್ಮದಾಗಿಸಿಕೊಂಡೆವು. ಅಧಿಕಾರವನ್ನು ಬಯಸದ ಮಹಾತ್ಮ ಆದರ್ಶಮಯವಾಗಿ ಬದುಕಿದರು. ಆದರೆ ಇಂದು ಅಧಿಕಾರಕ್ಕಾಗಿಯೇ ಹೋರಾಟ, ಹಾರಾಟಗಳು ನಡೆಯುತ್ತಿವೆ. ಅಂದು ಗಾಂಧಿ ಅಹಿಂಸೆಯನ್ನು ಪ್ರತಿಪಾದಿಸಿದರು ಆದರೆ ಇಂದು ಎಲ್ಲೆಂದರಲ್ಲಿ ಹಿಂಸೆಯನ್ನೇ ಬಿತ್ತಲಾಗುತ್ತಿದೆ. ಅಂದು ಬಾಪೂ ನಿಸ್ವಾರ್ಥವಾಗಿ ಬಾಳಿದರು. ಆದರೆ ಇಂದು ಸ್ವಾರ್ಥಿಗಳೇ ದೇಶವನ್ನು ಆಳುತ್ತಿದ್ದಾರೆ. ಅಂದು ಬಾಪೂ ಸರಳತೆಯನ್ನು ರೂಢಿಸಿಕೊಂಡರು. ಆದರೆ ಇಂದು ಆಡಂಬರದ ಬದುಕಿನಲ್ಲಿ ನಮ್ಮನ್ನು ನಾವು ಮಾಡಿಕೊಳ್ಳುತ್ತಿದ್ದೇವೆ. ಅಂದು ಸ್ವಾಭಿಮಾನಕ್ಕಾಗಿ ಬಾಪೂ ಚರಕವನ್ನು ಹಿಡಿದರು. ಆದರೆ ಇಂದು ಪರದೇಶಿ ವ್ಯಾಮೋಹಕ್ಕೆ ನಾವು ಸ್ವಾಭಿಮಾನವನ್ನು ಮಾರಿಕೊಳ್ಳುತ್ತಿದ್ದೇವೆ. ಸ್ವದೇಶಿ ಬೋಧನೆಗಾಗಿ ಗಾಂಧಿ ಅಂದು ಖಾದಿ ಬಳಕೆಯನ್ನು ಪ್ರತಿಪಾದಿಸಿದರು. ಆದರೆ ಇಂದು ಖಾದಿ ಎನ್ನುವುದು ಕಳ್ಳರ ಮೈಮೇಲಿನ ಒಳ್ಳೆಯ ಪೋಷಾಕಾಗಿ ಬಳಕೆಯಾಗುತ್ತಿದ್ದೇವೆ. ಅಂದು ಗಾಂಧಿ ಗೋವುಗಳನ್ನು ಮಾತೆಯಾಗಿ ಪೂಜಿಸಿದರು. ಇಂದು ಅದರ ಹತ್ಯೇಯನ್ನು ನಿಲ್ಲಿಸುವುದೇ ದೊಡ್ಡ ವಿವಾದವಾಗಿ ಮಾಡುತ್ತಿದ್ದೇವೆ. ಅಂದು ಗಾಂಧಿ ಬ್ರಷ್ಟಾಚಾರವನ್ನು ವಿರೋಧಿಸಿದರು. ಆದರೆ ಇಂದು ಭ್ರಷ್ಟರ ಕೈಯಲ್ಲಿ ಅಧಿಕಾರ ಕೊಟ್ಟು ನಾವು ಅವರಂತೆಯೇ ನಡೆದುಕೊಳ್ಳುತ್ತಿದ್ದೇವೆ. ಪರರ ತಪ್ಪಿಗಾಗಿ ಅಂದು ಗಾಂಧೀಜಿಯವರು ಉಪವಾಸ ಮಾಡಿ ತಮ್ಮ ದೇಹ ದಂಡಿಸಿಕೊಳ್ಳುತ್ತಿದ್ದರು. ಆದರೆ ಇಂದು ನಮ್ಮ ತಪ್ಪಿಗಾಗಿ ಬೇರೊಬ್ಬರನ್ನು ದಂಡಿಸುತ್ತಿದ್ದೇವೆ. ಅಂದು ಬೇಡಿಕೆಗಳ ಇಡೇರಿಕೆಗೆ ಸತ್ಯಾಗ್ರಹವನ್ನು ಅಸ್ತ್ರವಾಗಿ ಗಾಂಧಿ ಬಳಸಿದರು. ಆದರೆ ಇಂದು ಸ್ವಾರ್ಥ ಸಾಧನೆಗಾಗಿ ಪ್ರತಿಭಟನೆಯನ್ನು ಸೃಷ್ಠಿ ಮಾಡುತ್ತಿದ್ದೆವೆ. ಮತ್ತೇ ವೇದಿಕೆಯ ಮೇಲೆ ನಿಂತುಕೊಂಡು ಗಾಂಧೀಜಿಯ ಹೆಸರನ್ನು ಬಳಸಿ ಪುಂಕಾನುಪುಂಕವಾಗಿ ಭಾಷಣ ಕುಟ್ಟುತ್ತೇವೆ. ಕೇಳಿದವರು ಚಪ್ಪಾಳೆ ತಟ್ಟುತ್ತೇವೆ. ಮನೆಗೆ ಬಂದ ಮೇಲೆ ಗೋಡೆಗೆ ಹಾಕಿದ ಗಾಂಧೀ ಪೋಟೋದ ಪಕ್ಕದಲ್ಲಿಯೇ ಅವರ ವಿಚಾರಗಳನ್ನು ನೇತು ಹಾಕಿ ನಮ್ಮ ಕಾರ್ಯಕ್ಕೆ ನಾವು ಮುಂದಾಗುತ್ತೆವೆ. ಅಲ್ಲಿಗೆ ಗಾಂಧೀಯ ತ್ಯಾಗ, ಹೋರಾಟ, ನಮಗೆ ನೀಡಿದ ಸ್ವಾತಂತ್ರ್ಯ ಮಕಾಡೆ ಮಲಗಿ ಬಿಡುತ್ತವೆ. 
ಜಗತ್ತಿನಲ್ಲಿ ಸಾಕಷ್ಟು ಜನ ಹುಟ್ಟತ್ತಾರೆ, ಸಾಕಷ್ಟು ಜನ ಸಾಯುತ್ತಾರೆ. ಆದರೆ ಹುಟ್ಟಿದವರನ್ನೆಲ್ಲ ಜಗತ್ತು ನೆನೆಯುವುದಿಲ್ಲ. ಸತ್ತವರೆಲ್ಲರನ್ನು ಜಗತ್ತು ಮರೆಯುವುದಿಲ್ಲ. ಕಾರಣ ಅದರಲ್ಲಿ ಕೆಲವರು ಸತ್ತ ಮೇಲು ಬದುಕುತ್ತಾರೆ. ಅದು ಕೇವಲ ತಮ್ಮ ವಿಚಾರಗಳಿಂದ. ಹಾಗೆ ಸತ್ತ ಮೇಲೂ ಬದುಕಬೇಕಾದ ಗಾಂಧಿಜಿಯವರ ವಿಚಾರಗಳು ಇಂದು ಅರ್ಥ ಕಳೆದುಕೊಳ್ಳುತ್ತಿರುವುದನ್ನು ನೋಡಿದರೆ ನಿಜಕ್ಕೂ ವಿಷಾಧನೀಯ ಎನಿಸುತ್ತಿದೆ. ನಮ್ಮನ್ನು ಇನ್ನಿಲ್ಲದಂತೆ ಕಾಡಿ ಮುನ್ನೂರು ವರ್ಷಗಳಿಂದ ಶೋಷಣೆ ಮಾಡಿದ ಬ್ರಿಟೀಷರೇ ಗಾಂಧೀ ಮಾತಿಗೆ ಶರಣಾಗಿ, ತಮ್ಮ ದೇಶದಲ್ಲಿ ಅವರ ಮೂರ್ತಿ ಸ್ಥಾಪಿಸಿ, ಆರಾಧೀಸುತ್ತಿದ್ದಾರೆ. ವಿಶ್ವಸಂಸ್ಥೆಯಲ್ಲಿ ಆವರ ಭಾವಚಿತ್ರದಡಿಯಲ್ಲಿ ಕುಳಿತು ಜಗತ್ತಿನ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದರೆ ಅವರ ವಿಚಾರಗಳು ಅದೆಷ್ಟು ಆಳವಾಗಿ ಜಗತ್ತಿನ ಮೇಲೆ ಪರಿಣಾಮ ಬೀರಿದೆ ಎನ್ನುವುದು ಅರ್ಥವಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಅದೇ ಗಾಂಧೀಜಿಯವರ ಭಾವಚಿತ್ರವನ್ನು ಗೋಡೆಗೆ ನೀತು ಹಾಕಿ ಅದರ ಅಡಿಯಲ್ಲಿಯೇ ಕುಳಿತು ಲಂಚಾವತಾರ ಪ್ರದರ್ಶಿಸುತ್ತೇವೆ. ಕೋರ್ಟಿನಲ್ಲಿ ಅವರ ಭಾವಚಿತ್ರದ ಮುಂದೆ ನಿಂತು ಭಯವಿಲ್ಲದೆ ಸುಳ್ಳು ಹೇಳುತ್ತೇವೆ. ಅವರ ಮೂರ್ತಿಯ ಮುಂದೆ ನಿಂತು ಮಾಂಸ ಭಕ್ಷಣೆ ಮಾಡುತ್ತೇವೆ. ಅವರ ಹೆಸರಿನ ಯೋಜನೆಗಳಲ್ಲಿಯೇ ದುಡ್ಡು ನುಂಗುತ್ತೇವೆ. ಅವರ ಹೆಸರನ್ನೇ ಬಳಸಿಕೊಂಡು ಗದ್ದುಗೆ ಹಿಡಯುತ್ತೇವೆ. ಅವರ ಹೆಸರನ್ನೇ ಬಳಸಿಕೊಂಡು ಗುದ್ದಾಡುತ್ತೇವೆ. ಅಲ್ಲಿಗೆ ಅವರ ಆದರ್ಶಗಳು ನಮಗೆ ಲೆಕ್ಕಕ್ಕೇ ಇಲ್ಲ. ಬದಲಿಗೆ ಅವರ ಹೆಸರೊಂದೆ ಸಾಕು ಎನ್ನುವಂತಾಗಿದೆ. ರಾಜಕೀಯ ಕೆಸರೆರೆಚಾಟದಿಂದ ಹಿಡಿದು, ಸ್ವಾರ್ಥ ಸಾಧನೆಯ ತನಕ ಅವರ ಹೆಸರು ಬಳಕೆಯಾಗುತ್ತದೆ. ಆದರೆ ಬದಲಾವಣೆಯಾಗಲು ಅವಕಾಶ ನೀಡುವ ಅವರ ಆದರ್ಶಗಳು ಹೇಳ ಹೆಸರಿಲ್ಲದ ಹಾಗೆ ಮರೆಯಾಗಿ ಬಿಡುತ್ತವೆ. ಅಲ್ಲಿಗೆ ಗಾಂಧೀಜಿ ಜೊತೆಯಲ್ಲಿಯೇ ಅವರ ಆದರ್ಶಗಳು ಕೂಡ ಚಿತೆ ಏರಿವೆ ಎನಿಸುತ್ತಿದೆ. ನಿನ್ನೆಗೆ ಗಾಂಧೀಜಿ ಎನ್ನುವ ಜ್ಯೋತಿ ಆರಿ ಕತ್ತಲಾದ ದಿನ. ಆದರೆ ಆ ಕತ್ತಲಿನಲ್ಲಿ ನಮ್ಮವರಿಂದು ಬೆತ್ತಲಾಗುತ್ತಿರುವುದನ್ನು ಕಂಡಾಗ ಮಹಾತ್ಮನ ಆತ್ಮ ಅದೆಷ್ಟು ರೋಧಿಸಿರಬೇಕೊ ಗೊತ್ತಿಲ್ಲ. ಕತ್ತಲಿಗೆ ಬೆಳಕು ನೀಡಬಲ್ಲ ವಿಚಾರದ ಮೊಂಬತ್ತಿಯನ್ನು ಹೊತ್ತಿಸಲಾಗದ ನಾವುಗಳು ಕತ್ತಲನ್ನೇ ಇಷ್ಟ ಪಡುತ್ತಿರುವಾಗ ಬದಲಾವಣೆಯ ಬೆಳಕು ಎಲ್ಲಿಂದ ಮೂಡಿ ಬರುತ್ತದೆ ಅಲ್ಲವೇ? ಆದರೂ ಮತ್ತೆ ಮತ್ತೆ ನನಗನಿಸುತ್ತಿದೆ ಅಂದು ಕೇವಲ ಗಾಂಧೀಜಿಯನ್ನು ಮಾತ್ರ ಕೊಲ್ಲಲಿಲ್ಲ ಬದಲಿಗೆ ಅವರ ವಿಚಾರಗಳಿಗೂ ಗುಂಡಿಟ್ಟು ಗುಂಡಿ ತೋಡಿದರು. ಇಂದು ಮುಖವಾಡದ ಬದುಕಿನಲ್ಲಿ ಹುತಾತ್ಮ ದಿನವನ್ನು ಆಚರಿಸಿ ವಿಕೃತಿ ಮೆರೆದರು ಎಂದು. ನೀವೇನಂತಿರಾ...? 
- * * * -