ಇಂದಿನ ಯುವಕರು ವಿವೇಕಾನಂದ ಆದರ್ಶ ಅಳವಡಿಸಿಕೊಳ್ಳಬೇಕು: ಗೊಂಬಿ

ಮಹಾಲಿಂಗಪುರ16 : ವಿವೇಕಾನಂದರು ಜಗತ್ತಿನ ಆದರ್ಶ. ಅವರ ಆದರ್ಶಗಳನ್ನು ಇಂದಿನ ಯುವಕರು ಅಳವಡಿಸಿಕೊಳ್ಳಬೇಕು ಎಂದು ಪುರಸಭಾ ಮಾಜಿ ಅಧ್ಯಕ್ಷ ಜಿ.ಎಸ್.ಗೊಂಬಿ ಹೇಳಿದರು.  

ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಶಿವನಗೌಡ ಪಾಟೀಲ ಅವರ ನೇತೃತ್ವದಲ್ಲಿ ಸ್ವಾಮಿ ವಿವೇಕಾನಂದ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 157 ನೇ ಜಯಂತಿ ಕಾರ್ಯಕ್ರಮದಲ್ಲಿ 25 ಅಡಿ ಎತ್ತರದ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದ ಅವರು, ವಿವೇಕಾನಂದರು ಧೈರ್ಯ, ದೇಶಪ್ರೇಮ, ಸ್ವಾಭಿಮಾನಗಳ ಪ್ರತೀಕವಾಗಿದ್ದರು. ಅವರು ಯುವ ಶಕ್ತಿಯ ಮೇಲೆ ಅಪಾರ ನಂಬಿಕೆ ಇಟ್ಟು, ದೇಶಸೇವೆ ಮತ್ತು ಹಿಂದೂ ಧರ್ಮದ ಸಾರವನ್ನು ಜಗತ್ತಿಗೆ ಸಾರಿ,  ಭಾರತೀಯರ ಬಗೆಗಿದ್ದ ಜಗದ ನಿಕೃಷ್ಟ ಮನೋಭಾವವನ್ನು ತೊಲಗಿಸಿ,  ಭಾರತದ ಭವ್ಯ ಸಂಸ್ಕೃತಿ, ಆಧ್ಯಾತ್ಮ ಶಕ್ತಿ, ಜ್ಞಾನದ ಸತ್ವ, ದೇಶಾಭಿಮಾನವನ್ನು ಸಾರಿ,  ಇಡೀ ವಿಶ್ವವೇ ಭಾರತದ ಭವ್ಯತೆಯನ್ನು ಪೂಜಿಸುವಂತೆ ಮಾಡಿದ ವಿವೇಕಾನಂದರು ಕೇವಲ ವ್ಯಕ್ತಿಯಲ್ಲ,  ಸಾಕ್ಷಾತ್ ಶ್ರೀಕೃಷ್ಣನ ಅವತಾರ. ಅವರ ವಿಚಾರಗಳು ಜಗತ್ತಿಗೇ ದಾರಿದೀಪ ಎಂದರು.  

ಭಾಜಪ ನಗರ ಘಟಕದ ಅಧ್ಯಕ್ಷ ಮಹಾಲಿಂಗಪ್ಪ ಕುಳ್ಳೊಳ್ಳಿ, ಪುರಸಭಾ ಮಾಜಿ ಉಪಾಧ್ಯಕ್ಷ ಚನ್ನಬಸು ಹುರಕಡ್ಲಿ,  ಪುರಸಭಾ ಸದಸ್ಯರಾದ ರಾಜು ಚಮಕೇರಿ, ಚನ್ನಬಸು ಯರಗಟ್ಟಿ, ಶೇಖರ ಅಂಗಡಿ, ಶಂಕರಗೌಡ ಪಾಟೀಲ, ಚನ್ನಪ್ಪ ಪಟ್ಟಣಶೆಟ್ಟಿ, ಬಸವರಾಜ ಚಮಕೇರಿ, ಪ್ರವೀಣ ಕಟ್ಟಿ , ಶಿವಾನಂದ ಹುಣಶ್ಯಾಳ ,ಬಸವರಾಜ ಗಿರಿಸಾಗರ ಇತರರು ಇದ್ದರು.