ಅಮರಾವತಿ, ನ 19 : ತಿರುಪತಿ ತಿಮ್ಮಪ್ಪನ ಹಣವನ್ನು ಇನ್ನೂ ಮುಂದೆ ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಮಾತ್ರ ನಿಶ್ಚಿತ ಠೇವಣಿ ಇರಿಸಬೇಕು ಎಂಬ ಮಹತ್ವದ ನಿರ್ಣಯವನ್ನು ತಿರುಪತಿ ತಿರುಮಲ ದೇವಾಲಯ ಮಂಡಳಿ(ಟಿಟಿಡಿ) ಕೈಗೊಂಡಿದೆ. ಪ್ರಾದೇಶಿಕ ಬ್ಯಾಂಕುಗಳಲ್ಲಿ ಸೂಕ್ತ ಭದ್ರತೆಯಿಲ್ಲದ ಕಾರಣದಿಂದಾಗಿ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಶೀಘ್ರದಲ್ಲಿಯೇ, 1, 500 ಕೋಟಿ ರೂಪಾಯಿ ಹಣವನ್ನು ರಾಷ್ಟ್ರೀಯ ಬ್ಯಾಂಕ್ ನಲ್ಲಿ ಠೇವಣಿ ಇರಿಸಲು ನಿರ್ಧರಿಸಿದೆ. ಆದರೆ, ಈ ಹಿಂದಿನ ತೆಲುಗು ದೇಶಂ ನೇತೃತ್ವದ ರಾಜ್ಯ ಸರ್ಕಾರ ಟಿಟಿಡಿ ಹಣವನ್ನು ಖಾಸಗಿ ಬ್ಯಾಂಕ್ಗಳಲ್ಲಿ ಠೇವಣಿ ಇರಿಸಿದ್ದನ್ನು ಆಕ್ಷೇಪಿಸಿ ಹಲವು ಭಕ್ತರು ಹೈಕೋರ್ಟ್ ಮೊರೆ ಹೋಗಿದ್ದರು. 1400 ಕೋಟಿ ರೂ. ಹಣವನ್ನು ಖಾಸಗಿ ಬ್ಯಾಂಕ್ಗಳಲ್ಲಿ ಠೇವಣಿ ಇರಿಸುವುದನ್ನು ಆಕ್ಷೇಪಿಸಿದ ಭಕ್ತರು ಹೈಕೋರ್ಟ್ಗ್ ಅರ್ಜಿ ಸಲ್ಲಿಸಿದ್ದರು. ಆರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ತಿಮ್ಮಪ್ಪನ ಹಣವನ್ನು ರಾಷ್ಟ್ರೀಯ ಬ್ಯಾಂಕುಗಳಲ್ಲಿ ಮಾತ್ರ ಠೇವಣಿ ಇಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಟಿಟಿಡಿ ಪ್ರತಿವರ್ಷ ಕಾಣಿಕೆಗಳ ರೂಪದಲ್ಲಿ ದೊಡ್ಡ ಪ್ರಮಾಣದ ಹಣ ಸಂಗ್ರಹಸುತ್ತದೆ ಎಂದು ತಿಳಿದಿದೆ. ಈ ಸಂಪತ್ತಿನ ಭದ್ರತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಇನ್ನು ಮುಂದೆ ಪ್ರಾದೇಶಿಕ ಮತ್ತು ಖಾಸಗಿ ಬ್ಯಾಂಕ್ಗಳಲ್ಲಿ ಠೇವಣಿ ಇಡದಿರಲು ಆಡಳಿತ ಮಂಡಳಿಯ ಸದಸ್ಯರು ಸರ್ವಾನುಮತದಿಂದ ನಿರ್ಧರಿಸಿದ್ದಾರೆ. ಟಿಟಿಡಿಯ ನಿರ್ಧಾರದ ಬಗ್ಗೆ ಭಕ್ತರು ಸಂತೋಷ ವ್ಯಕ್ತಪಡಿಸಿದ್ದಾರೆ.