ಅನಂತ್ನಾಗ್, ಅಕ್ಟೋಬರ್ 16: ದಕ್ಷಿಣ ಕಾಶ್ಮೀರ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆ ಕಾರ್ಡನ್ ಮತ್ತು ಶೋಧ ಕಾರ್ಯಚರಣೆ (ಸಿಎಎಸ್ಒ) ವೇಳೆ ನಡೆದ ಎನ್ಕೌಂಟರ್ನಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
70 ದಿನಗಳ ಬಳಿಕ ಕಾಶ್ಮೀರ್ ಕಣಿವೆಯಲ್ಲಿ ಪೋಸ್ಟ್ ಪೇಡ್ ಸೇವೆಗಳನ್ನು ಆರಂಭಿಸಲಾಯಿತು. ಈ ಸೇವೆಯನ್ನು ಆಗಸ್ಟ್ 5 ರಂದು ಸ್ಥಗಿತಗೊಳಿಸಲಾಗಿತ್ತು. ಈ ದಿನ ಕೇಂದ್ರ ಸರ್ಕಾರ 370ನೇ ಕಲಂ ರದ್ದು ಮಾಡಿ ಆದೇಶ ಹೊರಡಿಸಿತ್ತು.
ರಾಷ್ಟ್ರೀಯ ರೈಫಲ್ಸ್ (ಆರ್ಆರ್), ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (ಎಸ್ಒಜಿ) ಮತ್ತು ಸಿಆರ್ಪಿಎಫ್ ಜಂಟಿಯಾಗಿ ಅನಂತ್ ನಾಗ್ ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಉ್ರಗರರು ಸಹ ಗುಂಡಿನ ದಾಳಿ ನಡೆಸಿದರು. ಭದ್ರತಾ ಸಿಬ್ಬಂದಿ ಪ್ರತಿ ದಾಳಿ ನಡೆಸಿದ ವೇಳೆ ಉಗ್ರರರು ಸಾವನ್ನಪ್ಪಿದ್ದಾರೆ.
"ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಭದ್ರತಾ ವ್ಯವಸ್ಥೆ ಬಲ ಪಡಿಸಲಾಗಿದೆ" ಎಂದು ಭದ್ರತಾ ಅಧಿಕಾರಿಗಳು ಹೇಳಿದರು.