ಮೂವರು ಸಮುದ್ರ ಪಾಲು; ಗೋಕರ್ಣ ಕಡಲಲ್ಲಿ ದುರಂತ
ದೇವರ ದರ್ಶನಕ್ಕೆ ಬಂದು ಶವವಾದರು
ಕಾರವಾರ, ಜ. 21 : ಸಮುದ್ರದಲ್ಲಿ ಈಜಲು ತೆರಳಿದ ಓರ್ವನನ್ನು ರಕ್ಷಿಸಲು ಧಾವಿಸಿದ ನಾಲ್ವರ ಪೈಕಿ ಇಬ್ಬರೂ ಕಡಲ ಅಲೆಯ ಪಾಲಾಗಿದ್ದು, ಮೂವರು ಸಾವನ್ನಪ್ಪಿದರು. ಈರ್ವರನ್ನು ಮೀನುಗಾರರು ರಕ್ಷಿಸಿದ ಘಟನೆ ಗೋಕರ್ಣದಲ್ಲಿ ನಡೆದಿದೆ.
ಬೆಂಗಳೂರು ಪ್ರವಾಸಿಗ ತಿಪ್ಪೇಶನನ್ನು ಸಮುದ್ರದಲ್ಲಿ ರಕ್ಷಿಸಲು ಹೋದ ಯುವತಿ ಸುಮಾ, ಯುವಕ ರವಿ ಸಮುದ್ರಪಾಲಾಗಿದ್ದಾರೆ .ಮೂವರ ಶವಗಳು ಬುಧುವಾರ ಸಂಜೆ ದೊರೆತಿವೆ.
ಬೆಂಗಳೂರಿನಿಂದ ಇಂದು 16 ಜನ ದೇವರ ದರ್ಶನ ಪಡೆಯಲು ಗೋಕರ್ಣಕ್ಕೆ ಆಗಮಿಸಿದ್ದರು. ಊಟ ಮಾಡಿ ದೇವರ ದರ್ಶನ ಪಡೆದ ನಂತರ ಯುವಕ ತಿಪ್ಪೇಶ್ ಸಮುದ್ರಕ್ಕಿಳಿದಿದ್ದ.ಅಲೆಯ ಅಬ್ಬರ ಆತನನ್ನು ನೀರಿನ ಒಳಕ್ಕೆ ಸೆಳೆಯಿತು. ಇದನ್ನು ಗಮನಿಸಿದ ಸುಮಾ ಎಂಬ ಯುವತಿ ಆತನ ರಕ್ಷಣೆಗಾಗಿ ದಾವಿಸಿದಳು. ಆಕೆಯನ್ನು ಅಲೆಯು ಸೆಳೆಯಿತು. ಇದನ್ನು ಗಮನಿಸಿದ ರವಿ ಹಾಗೂ ರತ್ನಮ್ಮ ,ಪವಿತ್ರ ಸುಮಳನ್ನು ರಕ್ಷಿಸಲು ಮುಂದಾದರು. ದುರಾದೃಷ್ಟವಶಾತ್ ಸುಮಾ , ರವಿ ಕೂಡ ಸಮುದ್ರದ ಅಲೆಗೆ ಸಿಲುಕಿದರು. ಈ ವೇಳೆಗೆ ಧಾವಿಸಿದ ಸ್ಥಳೀಯರು ಪವಿತ್ರ ಹಾಗೂ ರತ್ನಮ್ಮ ಎಂಬುವವರನ್ನು ರಕ್ಷಿಸಿದರು. ಸ್ಥಳೀಯ ಮೀನುಗಾರರು ರಕ್ಷಣೆಗೆ ಸಹಾಯ ಮಾಡಿದ್ದಾರೆ.ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಿಪ್ಪೇಶ . ಸುಮಾ, ರವಿ ಮೂವರು ಯುವಕರ ಶವಗಳು ಪತ್ತೆಯಾಗಿವೆ ಎಂದು ಗೋಕರ್ಣ ಪಿಎಸ್ ಐ ನವೀನ್ ನಾಯ್ಕ ತಿಳಿಸಿದ್ದಾರೆ.