ಅಫ್ಘಾನ್ ಸೇನೆಯ ವೈಮಾನಿಕ ದಾಳಿ : ಮೂವರು ತಾಲಿಬಾನ್ ಉಗ್ರರು ಹತ

ಕಾಬೂಲ್, ಫೆಬ್ರವರಿ 7,ಉತ್ತರ ಬಾಲ್ಕ್ ಪ್ರಾಂತ್ಯದಲ್ಲಿ ಅಫ್ಘಾನ್ ಸೇನೆಯ ವೈಮಾನಿಕ ದಾಳಿಯಲ್ಲಿ ತಾಲಿಬಾನ್ ಸಂಘಟನೆಯ ಜಿಲ್ಲಾ ಮುಖ್ಯಸ್ಥ ಸೇರಿದಂತೆ ಮೂವರು ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದಾರೆ ಎಂದು ವಿಶೇಷ ಪಡೆಗಳ ಪ್ರಕಟಣೆ ಶುಕ್ರವಾರ ತಿಳಿಸಿದೆ."ಅಫ್ಘಾನ್ ವಾಯುಪಡೆಯ ವೈಮಾನಿಕ ದಾಳಿಯು ಗುರುವಾರ ರಾತ್ರಿ ಬಾಲ್ಕ್ ಪ್ರಾಂತ್ಯದ ಚಿಮ್ಟಾಲ್ ಜಿಲ್ಲೆಯ ಪ್ರದೇಶವನ್ನು ಗುರಿಯಾಗಿಸಿತ್ತು. ಈ ದಾಳಿಯಲ್ಲಿ ತಾಲಿಬಾನ್ ಸಂಘಟನೆಗೆ ಸೇರಿದ ಜಿಲ್ಲಾ ಮುಖ್ಯಸ್ಥ ಶಾ ಮೊಹಮ್ಮದ್ ಜಬರ್ ಮತ್ತು ಇಬ್ಬರು ತಾಲಿಬಾನ್ ವಿಭಾಗೀಯ ಕಮಾಂಡರ್ಗಳಾದ ಮಾವ್ಲಾವಿ ಖದೀಮ್ ಮತ್ತು ಹೆನ್ನಾಯತ್ ಸಾವನ್ನಪ್ಪಿದ್ದಾರೆ" ಎಂದು ಅಫಘಾನ್ ರಾಷ್ಟ್ರೀಯ ಸೇನಾ ವಿಶೇಷ ಕಾರ್ಯಾಚರಣೆ ನಿಗಮ ಪ್ರಕಟಣೆಯಲ್ಲಿ ಹೇಳಿದೆ.

 ಈ ಉಗ್ರರು ದೇಶದ ರಾಜಧಾನಿ ಕಾಬೂಲ್‌ನಿಂದ ಉತ್ತರಕ್ಕೆ 305 ಕಿ.ಮೀ ದೂರದಲ್ಲಿರುವ ಪ್ರಾಂತ್ಯದ ಪಶ್ಚಿಮ ಭಾಗದಲ್ಲಿ ಜಿಲ್ಲೆಯ ಭದ್ರತಾ ಪಡೆಗಳನ್ನು ಗುರಿಯಾಗಿಸಲು ಮುಖ್ಯ ರಸ್ತೆಯ ಉದ್ದಕ್ಕೂ ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಹುದುಗಿಸುತ್ತಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.ಭದ್ರತಾ ಪಡೆಗಳನ್ನು ಗುರಿಯಾಗಿಸಲು ಉಗ್ರರು ಹೆಚ್ಚಾಗಿ ರಸ್ತೆಬದಿಯ ಬಾಂಬುಗಳು ಮತ್ತು ಲ್ಯಾಂಡ್‌ಮೈನ್‌ಗಳನ್ನು ತಯಾರಿಸಲು ಮನೆಯಲ್ಲಿ ತಯಾರಿಸಿದ ಐಇಡಿಗಳನ್ನು ಬಳಸುತ್ತಾರೆ.  ಮೂವರ ಹತ್ಯೆಯ ವರದಿಗಳ ಕುರಿತು ತಾಲಿಬಾನ್ ಉಗ್ರಗಾಮಿ ಗುಂಪು  ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.