ರಾಜ್ಯದಲ್ಲಿ ರಕ್ಷಣಾ ಉತ್ಪಾದನಾ ಕ್ಲಸ್ಟರ್‌ ತೆರೆಯಲು ಚಿಂತನೆ: ಶ್ರೀ ಜಗದೀಶ್‌ ಶೆಟ್ಟರ್

ಬೆಂಗಳೂರು, ಫೆ 5:ರಕ್ಷಣಾ ಮತ್ತು ಏರೋನಾಟಿಕಲ್ ಉಪಕರಣಗಳ ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ  ರಾಜ್ಯದಲ್ಲಿ "ರಕ್ಷಣಾ ಉತ್ಪಾದನಾ ಕ್ಲಸ್ಟರ್" ಅನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ.

ಲಖನೌ ನಲ್ಲಿ ಆರಂಭವಾಗಿರುವ ಡಿಫೆಕ್ಸ್‌ ಪೋ – 2020 ನಲ್ಲಿ ನಿರ್ಮಿಸಲಾಗಿರುವ "ಇನ್ವೆಸ್ಟ್‌ ಕರ್ನಾಟಕ ಪೆವಿಲಿಯನ್‌" ಉದ್ಘಾಟಿಸಿ ಮಾತನಾಡಿದ ಅವರು, ಡಿಫೆಕ್ಸ್‌ ಪೋ 2020 ನಲ್ಲಿ ಇನ್ವೆಸ್ಟ್‌ ಕರ್ನಾಟಕ ಪೆವಿಲಿಯನ್‌ ಉದ್ಘಾಟನೆ ನೆರವೇರಿಸಿದ್ದು ಸಂತಸ ತಂದಿದೆ. ಕರ್ನಾಟಕದಲ್ಲಿನ ಅವಕಾಶಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಇದಾಗಿದೆ ಎಂದು ಹೇಳಿದರು.

 ನಂತರ ಸಿಐಐ ಹಾಗೂ ಇನ್‌ವೆಸ್ಟ್‌ ಕರ್ನಾಟಕ ಫೋರಂ ಆಯೋಜಿಸಿದ್ದ “ಡಿಫೆಕ್ಸೋ – 2020 ಸಿಇಓ ಸಮಾವೇಶ” ದಲ್ಲಿ ಕೈಗಾರಿಕಾ ಸಚಿವ ಶೆಟ್ಟರ್‌ ಮಾತನಾಡಿ, ದೇಶದ ಪ್ರಮುಖ ಕೈಗಾರಿಕಾ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕದಲ್ಲಿ ದೇಶೀಯ ರಕ್ಷಣಾ ಕೈಗಾರಿಕಾ ನೆಲೆ ನಿರ್ಮಿಸಲಾಗುತ್ತಿದೆ. ವಿಶೇಷವಾಗಿ ರಾಜ್ಯದಲ್ಲಿ ರಕ್ಷಣಾ ಸಾಧನಗಳ ತಯಾರಿಕೆ ಹೆಚ್ಚಿಸುವತ್ತ ಗಮನ ಹರಿಸಿದ್ದೇವೆ ಎಂದು ಹೇಳಿದರು.

 ಕರ್ನಾಟಕವು ಏರೋಸ್ಪೇಸ್ ಮತ್ತು ರಕ್ಷಣಾ ಸಲಕರಣೆ ತಯಾರಿಕೆಯ ನೆಲೆಯಾಗಿದೆ.  ದೇಶದ ಏರೋಸ್ಪೇಸ್‌ನ ಸಂಬಂಧಿತ ಬಂಡವಾಳ ಹೂಡಿಕೆಯಲ್ಲಿ ಶೇಕಡಾ 65 ರಷ್ಟು ಬಂಡವಾಳ ರಾಜ್ಯದಲ್ಲಿ ಹೂಡಿಕೆಯಾಗಿದೆ, ಶೇಕಡಾ 70 ರಷ್ಟು ಬಿಡಿಭಾಗ ಸರಬರಾಜುದಾರರಿದ್ದು,  ಅಲ್ಲದೆ, ಶೇಕಡಾ 67 ರಷ್ಟು ಏರ್‌ಕ್ರಾಫ್ಟ್‌ ಹಾಗೂ ಹೆಲಿಕ್ಯಾಪ್ಟರ್‌ ಉತ್ಪಾದಕರಿದ್ದಾರೆ. ಈ ಮೂಲಕ ಕರ್ನಾಟಕ ಭಾರತದ ಅತಿದೊಡ್ಡ ಏರೋಸ್ಪೇಸ್ ಹಬ್ ಆಗಿದ್ದು, ಎಚ್‌ಎಎಲ್ ನಂತಹ ಕಂಪನಿಗಳು ನಮ್ಮಲ್ಲಿ ನೆಲೆಯೂರಿವೆ. ಜೊತೆಗೆ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಬಿಡಿಭಾಗಗಳು ನಮ್ಮ ರಾಜ್ಯದಿಂದ ತಯಾರಾಗುತ್ತಿವೆ ಎಂದು ವಿವರಣೆ ನೀಡಿದರು.

 ಬೆಂಗಳೂರು ಇಂದು, ಏರ್‌ಬಸ್, ಬೋಯಿಂಗ್, ಹನಿವೆಲ್, ಯುಟಿಸಿ (ಕಾಲಿನ್ಸ್), ಜಿಇ ಮತ್ತು ರೋಲ್ಸ್ ರಾಯ್ಸ್ ಸೇರಿದಂತೆ ಹಲವಾರು ಜಾಗತಿಕ ಏರೋಸ್ಪೇಸ್ ಕಂಪನಿಗಳು ಕರ್ನಾಟಕದಲ್ಲಿ ನೆಲೆಯೂರಿವೆ. ಈ ಮೂಲಕ ಕರ್ನಾಟಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ಗುರುತಿಸಿಕೊಂಡಿದೆ. ಇಂದು, ಕರ್ನಾಟಕ ರಕ್ಷಣಾ ಮತ್ತು ಏರೋಸ್ಪೇಸ್ ಉದ್ಯಮದಲ್ಲಿ ಬೇಡಿಕೆ ಹೊಂದಿದ್ದು, ಉತ್ತಮ ಭವಿಷ್ಯವನ್ನು ಹೊರಸೂಸುತ್ತಿದೆ ಎಂದರು. 

 ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ದಾವೋಸ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಭಾಗವಹಿಸಿದ್ದು, ಜಾಗತಿಕ ಹೂಡಿಕೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ‌. ಕರ್ನಾಟಕದಲ್ಲಿ ಹೂಡಿಕೆಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸೆಂಟರ್  ಫಾರ್‌ ಎಕ್ಸಲೆನ್ಸ್‌ ಅನ್ನು ತೆರೆಯುವ ಸಂಬಂಧ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

 ಇನ್ನು, ರಕ್ಷಣಾ ಕ್ಷಿಪಣಿ ಸೇರಿದಂತೆ ರಕ್ಷಣಾ ಕ್ಷೇತ್ರದಲ್ಲಿ ವಿಶ್ವ ದರ್ಜೆಯ ಎಂಆರ್‌ಒ ಮೂಲಸೌಕರ್ಯದೊಂದಿಗೆ ಬೆಂಗಳೂರನ್ನು ಜಾಗತಿಕ ಎಂಆರ್‌ಒ ಹಬ್ ಆಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ. ಜೊತೆಗೆ, ಈಸ್ ಆಫ್ ಡೂಯಿಂಗ್ ಬಿಸಿನೆಸ್‌ ಅನ್ನು  ಸರಳೀಕರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಬಾರಿ ವರ್ಲ್ಡ್‌ ರ್ಯಾಂಕಿಂಗ್‌‌ಗೆ ಪರಿಗಣಿಸುವ ನಾಲ್ಕು ನಗರಗಳಲ್ಲಿ ಬೆಂಗಳೂರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು. 

 ಕರ್ನಾಟಕದಲ್ಲಿ ಉದ್ಯೋಗ ಅವಕಾಶ ಹಾಗೂ ಕೈಗಾರಿಕೋದ್ಯಮವನ್ನು ಸಮಾನವಾಗಿ ವಿಸ್ತರಿಸಲು  ಕರ್ನಾಟಕದ 2 ಮತ್ತು 3ನೇ ದರ್ಜೆಯ ನಗರಗಳಿಗೆ ಹೂಡಿಕೆದಾರರನ್ನು ಆಕರ್ಷಿಸುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಇನ್ವೆಸ್ಟ್‌ ಕರ್ನಾಟಕ ಸಮಾವೇಶ ಆಯೋಜಿಸಿದ್ದೇವೆ. ಈ ಮೂಲಕ ಉತ್ತರ ಕರ್ನಾಟಕ ಮತ್ತು ಹುಬ್ಬಳ್ಳಿ -ಧಾರವಾಡ ಪ್ರದೇಶದಲ್ಲಿರುವ ಅವಕಾಶಗಳನ್ನು ಮುಖ್ಯವಾಹಿನಿಗೆ ತರಲಾಗುವುದು ಎಂದರು.

 ಫೆಬ್ರವರಿ 14 ರಂದು ಹುಬ್ಬಳ್ಳಿ ಸಮಾವೇಶ ಹಾಗೂ ನವೆಂಬರ್‌3 ರಿಂದ 5ರ ವರೆಗೆ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸಿದರು.

 ಕೈಗಾರಿಕೋದ್ಯಮಿಗಳೊಂದಿಗೆ ಸರಣಿ ಸಭೆ: ಸಿಇಓ ಸಮಾವೇಶಕ್ಕೂ ಮುನ್ನ ಸಚಿವರು ಪ್ರಾಟ್‌ ‍ವೈಟ್ನಿ ವ್ಯವಸ್ಥಾಪಕ ನಿರ್ದೇಶಕಿ ಅಶ್ಮಿತಾ ಸೇಥಿ, ಸ್ಯಾಫ್ರನ್‌ ಗ್ರೂಪ್‌ ನ ಸಿಇಒ ಪಿರ್ರೆ ಡಿಕೆಲಿ, ಪಿಬಿಎಸ್‌ ಎರೋಸ್ಪೇಸ್‌ - ಏರೋಸ್ಪೇಸ್‌ ಟೆಕ್ನಾಲಜಿಯ ಮುಖ್ಯಸ್ಥರಾದ ಝಾಡ್ನೆಕ್‌ ಲಿಸ್ಕಾ, ರೋಲ್ಸ್‌ ರಾಯ್ಸ್‌ ನ ಸಿಇಒ ಕಿಶೋರ್‌ ಜಯರಾಮ್‌, ಕೊಚಿನ್‌ ಶಿಪ್‌ಯಾರ್ಡ್‌ ಲಿಮಿಟೆಡ್‌ ನ ಸಿಎಮ್‌ಡಿ ಮಧು ಎಸ್‌ ನಾಯರ್‌, ಸಾಬ್‌ ಗ್ರೂಪ್‌ ನ ಮುಖ್ಯಸ್ಥರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಓಲಾ ರಿಗ್ನೆಲ್‌ ಅವರ ಜೊತೆ ಸರಣಿ ಸಭೆಗಳನ್ನು ನಡೆಸಿದರು.

 ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತಾ, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್‌ ಕೃಷ್ಣ, ಸಿಐಐ ಕರ್ನಾಟಕದ ಅಧ್ಯಕ್ಷರಾದ ಅಮನ್‌ ಚೌಧರಿ ನ ಅವರು ಈ ಸಂಧರ್ಭದಲ್ಲಿ ಪಾಲ್ಗೊಂಡಿದ್ದರು. ಇನ್‌ವೆಸ್ಟ್‌ ಕರ್ನಾಟಕ ಫೋರಂ ನ ಸಿಓಓ ‍ಶ್ರೀಮತಿ ಸ್ವರೂಪಾ ಟಿ.ಕೆ, ಕೈಗಾರಿಕ ಸಚಿವರ ಆಪ್ತ ಕಾರ್ಯದರ್ಶಿ ಧವಳೇಶ್ವರ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.