ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳುವವರು ಪರಮಾತ್ಮನಿಗೆ ಸಮೀಪವಿರುತ್ತಾರೆ; ವಿಜಯಮಹಾಂತೇಶ್ವರ ಮಹಾಸ್ವಾಮಿಗಳು

Those who choose good are nearer to God; Vijayamahanteswara Mahaswamy

 ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳುವವರು ಪರಮಾತ್ಮನಿಗೆ ಸಮೀಪವಿರುತ್ತಾರೆ; ವಿಜಯಮಹಾಂತೇಶ್ವರ ಮಹಾಸ್ವಾಮಿಗಳು 

 ಜಮಖಂಡಿ, 27; ಸತ್ಯ-ಅಸತ್ಯ, ಧರ್ಮ-ಅಧರ್ಮ, ನ್ಯಾಯ-ಅನ್ಯಾಯ, ಪವಿತ್ರ-ಅಪವಿತ್ರ, ಒಳ್ಳೆಯದು-ಕೆಟ್ಟದ್ದನ್ನು ಬೇರಿ​‍್ಡಸುವುದೆ ಅಧ್ಯಾತ್ಮ. ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳುವವರು ಪರಮಾತ್ಮನಿಗೆ ಸಮೀಪವಿರುತ್ತಾರೆ. ಅದರಿಂದ ಪರಮಾತ್ಮನ ಪ್ರೀತಿ ಗಳಿಸಲು ಸಾಧ್ಯವಿದೆ ಎಂದು ಮನ್ನಿಕೇರಿಯ ಮಹಾಂತಲಿಂಗೇಶ್ವರ ಮಠದ ವಿಜಯಮಹಾಂತೇಶ್ವರ ಮಹಾಸ್ವಾಮಿಗಳು ಹೇಳಿದರು. 

ತಾಲ್ಲೂಕಿನ ಹುಲ್ಯಾಳ ಗ್ರಾಮದ ವೇದಾಂತ ಕೇಸರಿ ಶ್ರೀಮಲ್ಲಿಕಾರ್ಜುನ ಗುರುದೇವಾಶ್ರಮದಲ್ಲಿ ಮಹಾಶಿವರಾತ್ರಿ ಮಹೋತ್ಸವ ಅಂಗವಾಗಿ ಸಂಜೆ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಅವರು ಅಧ್ಯಾತ್ಮ ಕುರಿತು ಅನುಭಾವ ಹಂಚಿಕೊಂಡರು. 

ಜಮಖಂಡಿಯ ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಬಸವಣ್ಣ-ಭಕ್ತಿ ಮಾರ್ಗ, ಮಹಾವೀರ-ಅಹಿಂಸಾ ಮಾರ್ಗ, ಬುದ್ಧ-ತ್ಯಾಗ ಮಾರ್ಗ, ಯೋಗ ಮಹರ್ಷಿ ಪತಂಜಲಿ-ಯೋಗ ಮಾರ್ಗ, ಮಹಾತ್ಮ ಗಾಂಧೀ-ಸತ್ಯದ ಮಾರ್ಗ ತೋರಿದ್ದಾರೆ. ಅವರೆಲ್ಲೂ ತೋರಿದ ಮಾರ್ಗದಲ್ಲಿ ಸಾಗಬೇಕು ಎಂದು ಆಶೀರ್ವಚನ ನೀಡಿದರು. ಮೈಗೂರಿನ ಶಿವಾನಂದ ಮಠದ ಗುರುಪ್ರಸಾದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಶಿವನನ್ನು ಹುಡುಕುವ ದಿನವೇ ಶಿವರಾತ್ರಿ. ಶಿವನ ಸಾಕ್ಷಾತ್ಕಾರ ಮಾಡಿಕೊಂಡು ಜೀವನ ಪಾವನ ಮಾಡಿಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು. 

ತೇರದಾಳ ಶಾಸಕ ಸಿದ್ದು ಸವದಿ ಮುಖ್ಯ ಅತಿಥಿಯಾಗಿ ಮಾತನಾಡಿ, ಧರ್ಮ ಮತ್ತು ದೇಶ ಉಳಿಯಬೇಕಾದರೆ ಜಾಗರೂಕರಾಗಿರಬೇಕು. ಧರ್ಮದ ಆಚರಣೆ ಮಾಡಿದರೆ ಧರ್ಮ ಕಾಪಾಡುತ್ತದೆ. ಸತ್ಯ, ನ್ಯಾಯ, ನೀತಿಯಿಂದ ನಡೆಯುವುದೆ ಧರ್ಮ ಎಂದರು. 


ಬನಹಟ್ಟಿಯ ಸಾಹಿತಿ ಸಿದ್ಧರಾಜ ಪೂಜಾರಿ ಮುಖ್ಯ ಅತಿಥಿಯಾಗಿ ಮಾತನಾಡಿ, ಮಹಾದೇವ, ಮಹಾದೇವ ಅದರಾಚೆಗೆ ಶಬ್ದಗಳಿಲ್ಲ. ಶಿವರಾತ್ರಿ ದಿನದಂದು ಪರಶಿವನು ಭೂಮಂಡಲದಲ್ಲಿ ಸಂಚಾರ ಮಾಡುತ್ತಾನೆ. ಶಿವನೆ ತ್ರಾಣ, ಪ್ರಾಣ, ದೈವ, ವಿಶ್ವ, ವಿಕಾಸ, ಪ್ರಕಾಶ, ಪೂರ್ಣ, ಪರಮಪವಿತ್ರ. ಈ ಶಿವ ಮಂತ್ರವೆ ಮೋಕ್ಷದ ಸೂತ್ರ ಎಂದರು. 

ಸೇಡಂನ ವಿಶ್ವನಾಥ ಕೋರಿ ಮಾತನಾಡಿದರು.  


ವಿಧಾನ ಪರಿಷತ್ ಮಾಜಿ ಶಾಸಕ ಜಿ.ಎಸ್‌. ನ್ಯಾಮಗೌಡ, ಉದ್ದಿಮೆದಾರ ಸಂಗಮೇಶ ನಿರಾಣಿ, ಬಸವರಾಜ ದಲಾಲ, ಪುಂಡಲೀಕ ಮಹಾರಾಜರು ಇದ್ದರು. 

ವಿಶೇಷ ಸಾಧಕರಾದ ಬಸಪ್ಪ ಶಿವಸಿಂಪಿ ದಂಪತಿ, ಡಾ.ಚಂದ್ರಕಾಂತ ಹೊಸೂರ, ವಿಶ್ವನಾಥ ಕೋರಿ, ಭೀಮಪ್ಪ ತಳವಾರ, ಹಿರಿಯ ಪತ್ರಕರ್ತ ಎಂ.ಸಿ. ಗೊಂದಿ ಅವರನ್ನು ಸನ್ಮಾನಿಸಲಾಯಿತು. 


ಗುರುದೇವ ಸಂಗೀತ ಬಳಗದ ಕಲಾವಿದರಾದ ಗುರುಬಸುಗೌಡ ಪಾಟೀಲ, ಪರಮೇಶ್ವರ ತೇಲಿ, ಶಿವಾನಂದ ಬಾಡನವರ, ರಾಮಚಂದ್ರ ಹೂಗಾರ, ಸಿದ್ದು ಉಪ್ಪಲದಿನ್ನಿ, ಪುಂಡಲೀಕ ಭಜಂತ್ರಿ ಸಂಗೀತ ಸೇವೆ ಸಲ್ಲಿಸಿದರು. 


ಹರ್ಷಾನಂದ ಮಹಾಸ್ವಾಮಿಗಳು ಹಾಗೂ ಗುರುಪ್ರಸಾದ ಮಹಾಸ್ವಾಮಿಗಳು ನೇತೃತ್ವದಲ್ಲಿ ಸಾಮೂಹಿಕ ಜಪಯೋಗ ಜರುಗಿತು. ಸಾಹಿತಿ ಸಿದ್ಧರಾಜ ಪೂಜಾರಿ ಶಿವಸ್ತುತಿ ಹಾಡಿದರು. ಗಣಪತಿ ಗಲಗಲಿ ಸ್ವಾಗತಿಸಿದರು. ಸಂಗಮೇಶ ತೆಲಸಂಗ ನಿರೂಪಿಸಿದರು. ಗುರುದೇವಾಶ್ರಮದ ಹರ್ಷಾನಂದ ಶ್ರೀಗಳು ಶರಣು ಸಮರ​‍್ಿಸಿದರು. 

ಇದಕ್ಕೂ ಮೊದಲು ಮಹಾಪೂಜೆ, ಸಾಮೂಹಿಕ ಲಿಂಗಪೂಜೆ ಹಾಗೂ ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮಗಳು ನಡೆದವು.