ಅದೇನೋ ಗೊತ್ತಿಲ್ಲ...! ಕೆಲವೊಮ್ಮೆ ನಾವು ಹಾಡುವ ಹಾಡುಗಳು ಕೂಡ ನಮ್ಮ ಬದುಕಿನ ಬಾಗಿಲನ್ನು ತೆರೆಯುವ ಕೀ ಕೈಗಳಾಗುತ್ತವೆ. ಸುಮ್ಮನೆ ಹಾಡುತ್ತ ಸಾಗುವವನ ಬಾಳಿನಲ್ಲಿ ಭರವಸೆಯ ಬೆಳಕನ್ನು ಹರಿಸುತ್ತವೆ. ಸೋತ ಮನಸ್ಸುಗಳಿಗೆ ಚೈತನ್ಯ ತುಂಬಿ ಗೆಲ್ಲುವ ದಾರಿಯಲ್ಲಿ ಸಾಗುವುದಕ್ಕೆ ಪ್ರೇರಣೆ ನೀಡುತ್ತವೆ. ಆ ಹಾಡು ಕೇವಲ ಹಾಡುವ ಹಾಡುಗಾರನ ಬದುಕನ್ನು ಬದಲಿಸುವುದು ಮಾತ್ರವಲ್ಲದೆ ಆ ಹಾಡನ್ನು ಆಲಿಸುವ ಜನಗಳ ಬಾಳಿನಲ್ಲಿಯೂ ಪರಿವರ್ತನೆಯ ಗಾಳಿ ಬೀಸುವುದಕ್ಕೆ ಕಾರಣವಾಗುತ್ತವೆ. ಇದನ್ನು ನೀವು ಎಷ್ಟರ ಮಟ್ಟಿಗೆ ನಂಬುತ್ತೀರೋ? ಇಲ್ಲವೋ? ನನಗಂತೂ ಗೊತ್ತಿಲ್ಲ. ಹಾಗೆಯೇ ನಂಬಲೇ ಬೇಕು ಎನ್ನುವ ಒತ್ತಾಯವೂ ನನ್ನದಲ್ಲ. ಆದರೆ ಕೆಲವರ ಬಾಳಿನಲ್ಲಿ ಪವಾಡದ ರೀತಿಯ ಬದಲಾವಣೆಗೆ ಕಾರಣವಾಗುವ ಹಾಡುಗಳನ್ನು ಕೇಳಿದಾಗ ಎಲ್ಲೋ ಮನದ ಮೂಲೆಯಲ್ಲಿ ಮಿಂಚಿನ ಸಂಚಾರವಾದಂತೆ ಭಾಸವಾಗುತ್ತದೆ. ಆ ರೀತಿ ಇಲ್ಲೋರ್ವ ವ್ಯಕ್ತಿ ಒಂದು ಹಾಡನ್ನು ನಿತ್ಯ ನಿರಂತರವಾಗಿ ಪಠಿಸುತ್ತ, ತಾನು ಮುಗಿಲೆತ್ತರಕ್ಕೆ ಬೆಳೆಯುತ್ತ, ತನ್ನವರನ್ನು ಕೂಡ ತನ್ನ ಜೊತೆಯಲ್ಲಿಯೇ ಕರೆದುಕೊಂಡು ಸಾಗುತ್ತಿದ್ದಾನೆ. ಅದರಲ್ಲೂ ಆ ವ್ಯಕ್ತಿ ಹಾಡುವ ಹಾಡಿನ ಸಾಲುಗಳು ಜಡವಾದ ಮನಸ್ಸನ್ನು ಬಡಿದೆಬ್ಬಿಸುತ್ತದೆ. ಸೋತ ಮನಸ್ಸಿಗೆ ಗೆಲ್ಲುವ ಶಕ್ತಿ ತುಂಬುತ್ತದೆ. ಒಂಟಿ ಎಂದುಕೊಂಡವನ ಜೊತೆಯಲ್ಲಿ ನಾನಿದ್ದೇನೆ ಎನ್ನುವ ಭರವಸೆ ನೀಡುತ್ತದೆ. ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ನಿನ್ನಲ್ಲಿನ ಒಳೆಯತನ ಎನ್ನುವ ಮಟ್ಟದಲ್ಲಿ ನಮ್ಮಲ್ಲಿ ಹುರುಪು ತುಂಬಿ, ಬದುಕಿನ ಓಟದ ಸ್ಪರ್ಧೆಯಲ್ಲಿ ಸೋಲರಿಯದ ಸಿಂಹಗಳಂತೆ ಘರ್ಜಿಸುವ ಹಾಗೆ ಮಾಡುತ್ತದೆ. ಅಷ್ಟಕ್ಕೂ ನಾನು ಹೇಳುತ್ತಿರುವ ಹಾಡು ಯಾವುದು? ಆ ಹಾಡನ್ನು ಹಾಡುತ್ತಿರುವ ವ್ಯಕ್ತಿ ಯಾರೂ? ಎನ್ನುವ ಪ್ರಶ್ನೆ ಸಧ್ಯಕ್ಕಂತೂ ತಮ್ಮ ಎದೆ ಹೊಕ್ಕು ಕಾಡುತ್ತಿದೆ ಎನ್ನುವುದಂತೂ ಸ್ಪಷ್ಟ. ಅದಕುತ್ತರ ಇಲ್ಲಿದೆ ನೋಡಿ.
“ಒಮ್ಮೆ ನಿನ್ನ ವೀಣೆಯನ್ನು ನುಡಿಸಲಾರೆಯಾ
ಸುಮ್ಮನಿರುವ ತಂತಿಯನ್ನು ಮೀಟಲಾರೆಯಾ
ಗಾನ ಲಹರಿ ಜಗವನೆಲ್ಲ ತುಂಬಿ ಕುಣಿಸಲಿ
ಧ್ಯಾನದಲ್ಲಿ ಲೀನವಾಗಿ ಜೀವ ನಲಿಯಲಿ
ನಾನು ಎಂಬ ಭಾವವಿಂದೆ ಕರಗಿ ಹೋಗಲಿ
ನೀನೆ ತನುವ ಮನವ ತುಂಬಿ ಬಾಳು ಬೆಳಗಲಿ”
ವಾಹ್...! ಅದೆಷ್ಟು ಅದ್ಭುತವಾದಂಥಹ ಸಾಲುಗಳು. ಸುಮ್ಮನೆ ಒಮ್ಮೆ ಕೇಳಿದರೆ ಸಾಕು ಸುಖಾ ಸುಮ್ಮನೆ ನಮ್ಮನ್ನು ಕೆಣಕುವ ಕಾರ್ಯ ಮಾಡುತ್ತವೆ. ಮನವೆಂಬ ವಿರಾಟ ವೀಣೆಯನ್ನು ನುಡಿಸಲಾರದೆ, ಅದರಲ್ಲಿನ ಭಾವನೆಗಳೆಂಬ ತಂತಿಗಳನ್ನು ಮೀಡಲಾರದೆ ಹೋದರೆ ವೀಣೆ ಇದ್ದರೂ ಅದಕ್ಕೆ ಬೆಲೆ ಬರುವುದಿಲ್ಲ. ಒಮ್ಮೆ ವೀಣೆ ನುಡಿದಾಗ, ಅದರಲ್ಲಿನ ನಾದ ಹೊರಹೊಮ್ಮಿ ಪ್ರಕೃತಿಯಲ್ಲಿ ಲೀನವಾದಾಗ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ. ಇದನ್ನೇ ತಾನೇ ನಮ್ಮ ದ.ರಾ.ಬೇಂದ್ರ ಅವರು ನಾನು, ನೀನು, ಆನು, ತಾನು ನಾಕು ನಾಕೇ ತಂತಿ ಎಂದು ಹೇಳುತ್ತ ಈ ಜಗವೆಂಬ ವಿರಾಟ ವೀಣೆ ನುಡಿದಾಗ ಮಾತ್ರ ವಿಶ್ವ ಬದುಕಲು ಸಾಧ್ಯ ಎಂದು ಹೇಳಿದ್ದು. ಇಂಥ ಅದ್ಭುತವಾದ ವಿಚಾರವನ್ನೇ ತಮ್ಮ ಸಾಧನೆಯ ದಾರಿಯ ಬೀಜಮಂತ್ರವನ್ನಾಗಿ ಮಾಡಿಕೊಂಡು, ಈ ರೀತಿಯ ಬದುಕು ಬದಲಿಸುವ ಹಾಡಿಗೆ ಸದಾ ಧ್ವನಿಯಾಗುತ್ತ. ಸೋತವನ ಬಾಳಿನಲ್ಲಿ ಗೆಲ್ಲುವ ಭರವಸೆಯನ್ನು ಹುಟ್ಟು ಹಾಕುತ್ತ ಸ್ಫರ್ಧಾತ್ಮಕ ಪ್ರಪಂಚದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತ, ಅಂತರ್ಜಾಲ ಆಧಾರಿತ ಶಿಕ್ಷಣ ಕ್ಷೇತ್ರದಲ್ಲಿ ಒಂದು ಹೊಸ ಅಲೆಯನ್ನೇ ಸೃಷ್ಠಿ ಮಾಡುತ್ತ, ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ದೂರದಲ್ಲಿದ್ದುಕೊಂಡೇ ನೆರವು ನೀಡುತ್ತ, ಹಗಲು ರಾತ್ರಿ ಎಂದೆನದೆ ಜ್ಞಾನದ ದಾಹವನ್ನು ತಣಿಸುವ ಕಾರ್ಯ ಮಾಡುತ್ತ, ಕನ್ನಡ ನಾಡಿನ ಯುವಕರ ಪಾಲಿನ ಕಣ್ಮಣಿಯಾಗಿ ಗುರುತಿಸಿಕೊಂಡಿರುವ ಸ್ಪರ್ಧಾಲೋಕದ ಸೂಪರ್ ಹೀರೋ ಶರಣಯ್ಯ ಬಂಡಾರಿಮಠ. ನೋವು ನಲಿವುಗಳ ಹಾದಿಯಲ್ಲಿ ಹೆಜ್ಜೆ ಹಾಕುತ್ತ, ಅವಮಾನಗಳನ್ನು ಬಹುಮಾನಗಳಂತೆ ಸ್ವೀಕರಿಸುತ್ತ ನಡೆದ ಈ ಸಾಧಕನು ಪ್ರಪಂಚವನ್ನು ನೋಡಬೇಕು ಎಂದು ಹೊರಟ. ಆದರೆ ಅವನ ಸಾಧನೆಯ ವೇಗಕ್ಕೆ ಇಂದು ಪ್ರಪಂಚವೇ ಅವನೆಡೆಗೆ ತಿರುಗಿ ನೋಡುವಂತಾಗಿದ್ದು ವಿಸ್ಮಯಕ್ಕೆ ಒಂದು ಉದಾಹರಣೆ ಎನ್ನುವಂತಾಗಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬನ್ನೆಟ್ಟಿ ಎನ್ನುವ ಕುಗ್ರಾಮದ ಬಂಡಾರಿಮಠ ಎನ್ನುವ ಜಂಗಮರ ಮನೆಯಲ್ಲಿ ಜನಿಸಿದ ಶರಣಯ್ಯ ಅಲಿಯಾಸ್ ಶ್ರವಣಕುಮಾರ ಬಂಡಾರಿಮಠ ಎನ್ನುವ ಈ ಸಾಧಕ ಮೊದಲಿಗೆ ಫಕೀರನ ರೀತಿಯಲ್ಲಿಯೇ ಬದುಕು ಪ್ರಾರಂಭಿಸಿದರು. ಹುಟ್ಟಿದಾಗ ಇಲ್ಲದ ಬಡತನ ಬೆಳೆಯುತ್ತ ಬೆಳೆಯುತ್ತ ಕಾಣಿಸಿಕೊಂಡಿತು. ಶರಣಯ್ಯನವರ ತಂದೆ ಕೃಷಿ ಹಾಗೂ ದನಗಳ ವ್ಯಾಪರವನ್ನು ಮಾಡುತ್ತ ಬದುಕು ಸಾಗಿಸುತ್ತಿದ್ದರು. ಹೊಟ್ಟೆ ಬಟ್ಟೆಗೆ ಭರವಿಲ್ಲದಿದ್ದರೂ ಆಡಂಭರದ ಬದುಕು ಇವರದ್ದಾಗಿರಲಿಲ್ಲ. ವಂಶಪಾರಂಪರ್ಯವಾಗಿ ಬಂದ ಹಿಟ್ಟುಮಾಡುವ ಕಾಯಕವನ್ನು ನಿಷ್ಠೆಯಿಂದ ಮಾಡಿಕೊಂಡು ಬರುತ್ತಲಿದ್ದ ಕುಟುಂಬ “ಪ್ರೀತಿನೆ ಆ ಧ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ, ಹಸಿವಿನಲ್ಲೂ ಹಬ್ಬಾನೆ ದಿನವು ನಿತ್ಯ ಯುಗಾದಿನೇ ನನ್ನ ನಿಮ್ಮ ಬಾಳಿಗೆ” ಎನ್ನವಂತೆ ಇರುವುದರಲ್ಲಿ ತೃಪ್ತಿಯಿಂದ ಬದುಕು ನಡೆಸುತ್ತಿತ್ತು. ಮನೆಯ ವಾತಾವರಣವನ್ನು ಅರಿತುಕೊಂಡಿದ್ದ ಶರಣಯ್ಯ ತಂದೆ ತಾಯಿಗಳ ಪಾಲಿಗೆ ಶ್ರವಣಕುಮಾರನಂತೆ ಹೇಳುವ ಕೆಲಸವನ್ನು ಕಾಯಕ ನಿಷ್ಠೆಯಿಂದ ಮಾಡಿ ಮುಗಿಸುತ್ತಿದ್ದ. ಜಂಗಮನಿಗೆ ದೇವರು ಜೋಳಿಗೆಯನ್ನು ಜೊತೆಯಾಗಿ ಕೊಟ್ಟಿರುತ್ತಾನೆ. ಅದನ್ನು ಹಿಡಿದು ಬದುಕು ಮಾಡಬೇಕು ಎಂದು ಹೇಳಿ ಕಳುಹಿಸಿರುತ್ತಾನೆ. ಜೋಳಿಗೆಗೆ ಮಾಡುವ ಅವಮಾನ ತಿನ್ನುವ ಹೋಳಿಗೆಗೆ ಮಾಡುವ ಅವಮಾನಕ್ಕೆ ಸಮಾನ ಎಂದು ಹಿರಿಯರು ಹೇಳಿದ್ದನ್ನು ಕೇಳಿಕೊಂಡು ಬೆಳೆದಿದ್ದ ಶರಣಯ್ಯ ಜೋಳಿಗೆಯೊಡ್ಡಿ ಹಿಟ್ಟನ್ನು ಪಡೆದುಕೊಂಡು ಬರುವ ಕಾಯಕವನ್ನು ಮಾಡುವುದಕ್ಕೆ ಎಂದೂ ಮುಜಗರ ಪಟ್ಟುಕೊಂಡವನಲ್ಲ. ಹೀಗಾಗಿಯೇ ಎಲ್ಲಾಲಿಂಗನ ಜೋಳಿಗಿ ಲೋಕಕ್ಕೆಲ್ಲ ಹೋಲಿಗೆ ಎನ್ನುವಂತೆ ಅಂದು ಮಾಡಿದ ಕಾಯಕ ನಿಷ್ಠೆಯಿಂದ ಇಂದು ಸಾವಿರಾರು ವಿದ್ಯಾರ್ಥಿಗಳ ಜ್ಞಾನದ ಹಸಿವನ್ನು ನೀಗಿಸಿ, ನೂರಾರು ಕುಟುಂಬಗಳ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ.
ಈ ಬದುಕೆಂಬುದು ಅರ್ಥ ಮಾಡಿಕೊಳ್ಳದ ನಿಗೂಢ ಪ್ರಶ್ನೆಯಾಗಿದೆ. ಸುಖ ನಮ್ಮ ಜೊತೆ ಊಟಕ್ಕೆ ಕುಳಿತಿದ್ದರೆ ದುಃಖ ಎನ್ನುವುದು ನಮ್ಮ ಹಾಸಿಗೆಯಲ್ಲಿ ಮಲಗಿಕೊಂಡಿರುತ್ತದೆ. ಇನ್ನೇನು ಉಟ ಮುಗಿಯಿತು ಎಂದು ಹಾಸಿಗೆಯಲ್ಲಿ ಕಾಲು ಚಾಚಿದರೆ ಸಾಕು ನಮ್ಮನ್ನು ಬರಸೆಳೆದು ಅಪ್ಪಿಕೊಂಡು ಬಿಡುತ್ತದೆ. ಅಲ್ಲಿಗೆ ಕ್ಷಣ ಮಾತ್ರದ ಹಿಂದೆ ಇದ್ದ ಸುಖ ಈಗ ದುಃಖವಾಗಿ ಬದಲಾಗಿರುತ್ತದೆ. ಶರಣಯ್ಯನವರ ಕುಟುಂಬದ ಸ್ಥಿತಿಯೂ ಸಹ ಹಾಗೆಯೇ ಆಗಿತ್ತು. ದನದ ವ್ಯಾಪಾರ ಮಾಡುತ್ತಿದ್ದ ಶರಣಯ್ಯನವರ ತಂದೆ ಅದರಲ್ಲಿ ಅಪಾರವಾದ ನಷ್ಟ ಅನುಭವಿಸಿದ್ದರ ಪರಿಣಾಮವಾಗಿ ಸಂಸಾರ ಸಾಲವೆಂಬ ಸೂಲದಲ್ಲಿ ನೇತಾಡಲು ಪ್ರಾರಂಭಿಸಿತು. ಹೇಗಾದರು ಮಾಡಿ ಸಾಲದ ಬಾಧೆಯಿಂದ ಹೊರ ಬರಬೇಕು ಎಂದುಕೊಂಡ ಶರಣಯ್ಯನವರ ತಂದೆ ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಗೆ ಗುಳೆ ಹೋಗಲು ನಿರ್ಧರಿಸಿದರು. ಎರಡೂ ಮಕ್ಕಳನ್ನು ತಮ್ಮೊಟ್ಟಿಗೆ ಕರೆದುಕೊಂಡು ಹೋದ ತಂದೆ ಅಲ್ಲಿಯೇ ಕೂಲಿ ನಾಲಿ ಮಾಡಿ ಸಾಲದಿಂದ ಮುಕ್ತರಾಗಲು ಹವಣಿಸಿದ್ದರು. ತಂದೆಯ ಕಷ್ಟಗಳನ್ನು ಕಣ್ಣಾರೆ ಕಂಡು ಮರುಗುತ್ತಿದ್ದ ಶರಣಯ್ಯ ಹೇಗಾದರೂ ಮಾಡಿ ತಂದೆಗೆ ನೆರವಾಗಬೇಕು ಎಂದು ತಾವು ಕೂಡ ಕೆಲಸಕ್ಕೆ ಸೇರಲು ಬಯಸಿದರು. ಆದರೆ 5ನೇ ತರಗತಿಯಲ್ಲಿ ಓದುತ್ತಿದ್ದ ಆ ಪುಟ್ಟ ಬಾಲಕನ ಗಾತ್ರವನ್ನು ನೋಡಿ ಯಾರೂ ಕೆಲಸಕ್ಕೆ ಸೇರಿಸಿಕೊಳ್ಳಲಿಲ್ಲ. ಹೀಗಾಗಿ ರತ್ನಾಗಿರಿಯಲ್ಲಿಯೇ ಆಡುತ್ತ ಬೆಳೆಯುತ್ತಿದ್ದ ಶರಣಯ್ಯ ಬಾಲ್ಯದಿಂದಲೂ ಓದಿನಲ್ಲಿ ಚುರುಕು. ಬರವಣಿಗೆಯಂತೂ ಮುತ್ತುಗಳನ್ನು ಅನಾಮತ್ತಾಗಿ ಎತ್ತಿಕೊಂಡು ಜೋಡಿಸಿದ ಸಾಲುಗಳ ಹಾಗಿತ್ತು. ಹೀಗಾಗಿ ರತ್ನಾಗಿರಿಯಲ್ಲಿ ಕನ್ನಡದ ಅಕ್ಷರಗಳನ್ನು ಬರೆಯುವ ಈ ಹುಡುಗನ ಮೇಲೆ ಅಲ್ಲಿನ ಕನ್ನಡಿಗರಿಗೆ ವಿಶೇಷವಾದ ಅಕ್ಕರೆ ಇತ್ತು. ಆದರೆ ಆ ಜ್ಞಾನ ಅಲ್ಲಿ ಕೆಲಸಕ್ಕೆ ಬಾರದಂತಾಗಿಯಿತು. ಕೆಲಸಕ್ಕೆ ಬಿಡುವು ಮಾಡಿಕೊಂಡು ಉರಿನ ಕಡೆ ಮುಖ ಮಾಡಿದ ಈ ಕುಟುಂಬ ಮತ್ತೆ ವಾಪಸ್ಸು ರತ್ನಾಗಿರಿಗೆ ಹೊರಡುವ ವೇಳೆಯಲ್ಲಿ ಬನ್ನೆಟ್ಟಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಎಸ್.ಎಚ್.ಬಾಲಗಾಂವ್ ಗುರುಗಳು ಶರಣಯ್ಯನಲ್ಲಿದ್ದ ಕುಶಾಗ್ರಮತಿಯನ್ನು ಕಂಡು ಅವನನ್ನು ರತ್ನಾಗಿರಿಗೆ ಕರೆದುಕೊಂಡು ಹೋಗುವ ಬದಲು ಇಲ್ಲೇ ಶಾಲೆಗೆ ಸೇರಿಸಬೇಕು ಎಂದು ಸಲಹೆ ನೀಡಿದರು. ಮೊದಲೇ ಬದುಕಿನ ಬಂಡಿಗೆ ಕಷ್ಟದ ಎತ್ತುಗಳನ್ನು ಕಟ್ಟಿ ಎಳೆದುಕೊಂಡು ಹೋಗುವಾಗ ಹಸಿವಿನ ಹೊರೆ ಇಳಿಸುವ ಅವಕಾಶ ಸಿಕ್ಕರೆ ಬಿಟ್ಟಾರೆಯೇ? ಗುರುಗಳ ಮಾತಿನಂತೆ ಅವರನ್ನು ಊರಲ್ಲಿಯೇ ಬಿಟ್ಟು ಹೋಗಲು ನಿರ್ಧರಿಸಿದರು. ಊರಲ್ಲಿ ಇರುವುದಕ್ಕೆ ಇಷ್ಟವಿದಲ್ಲದಿದ್ದರೂ ಅನಿವಾರ್ಯವಾಗಿ ಉಳಿಯಬೇಕಾದ ಸ್ಥಿತಿ ಶರಣಯ್ಯರ ಪಾಲಿಗೆ ಒಲಿದು ಬಂದಿತು. ಮುಂದೆ ಆ ಸನ್ನಿವೇಶವೇ ಇವರನ್ನು ಇಷ್ಟು ಎತ್ತರಕ್ಕೆ ಬೆಳೆಯುವುದಕ್ಕೆ ಪ್ರೇರಣೆಯಾಗುತ್ತದೆ ಎಂದು ಸ್ವತಃ ಶರಣಯ್ಯನವರೆ ಅಂದುಕೊಂಡಿದ್ದಿಲ್ಲ. ಕಾಲ ನಿಂತ ನೀರಲ್ಲ. ಅದು ನಿರಂತರವಾಗಿ ಮುನ್ನುಗ್ಗುವ ನದಿ. ಆದರೆ ಶರಣಯ್ಯನವರ ಸಾಧನೆಯನ್ನು ಕಂಡಾಗ ಕಾಲ ಅವರ ಪಾಲಿಗೆ ನದಿಯಾಗುವ ಬದಲು ಬೋರ್ಗರೆದು ಉಕ್ಕುವ ಪ್ರವಾಹದಂತೆ ಅತೀ ವೇಗದಲ್ಲಿ ಅವಕಾಶದ ಬಾಗಿಲನ್ನು ತೆರೆಯುವ ಕಾರ್ಯ ಮಾಡಿದ್ದು ನಿಜಕ್ಕೂ ಅದ್ಭುತವೇ ಸರಿ.
ಪ್ರಾಥಮಿಕ ಶಾಲೆಯಲ್ಲಿ ತಮ್ಮ ಆಟ ಪಾಠ ಹಾಗೂ ಹಾಡುಗಳಿಂದ ಗುರುಗಳ ಕೃಪೆಗೆ ಪಾತ್ರವಾದ ಶರಣಯ್ಯ ಹಂತ ಹಂತವಾಗಿ ಓದಿನಲ್ಲಿ ಆಸಕ್ತಿಯನ್ನು ದುಪ್ಪಟ್ಟು ಮಾಡಿಕೊಂಡು ಹೆಜ್ಜೆ ಹಾಕುತ್ತ ಸಾಗಿದರು. ತಮ್ಮೂರಿನಿಂದ ಕೊಂಚವೇ ದೂರವಿದ್ದ ಕಲಕೇರಿ ಗ್ರಾಮದಲ್ಲಿ ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಪೂರೈಸಿದ ಭಂಡಾರಿಮಠ ಅವರು ತಮ್ಮಲ್ಲಿನ ಪ್ರತಿಭೆಯಿಂದ ಸರ್ವರ ಮೆಚ್ಚುಗೆಗೆ ಪಾತ್ರವಾಗಿದ್ದರು. ಅದೆಷ್ಟರ ಮಟ್ಟಿಗೆ ತಮ್ಮ ಪ್ರಭಾವಲಯವನ್ನು ಬೆಳೆಸಿಕೊಂಡಿದ್ದರೆಂದರೆ ಹಾದಿಯಲ್ಲಿ ಹೋಗುವ ಚಿಂದಿ ಆಯುವ ವ್ಯಕ್ತಿಯೂ ಕೂಡ ಶರಣಯ್ಯನನ್ನು ತಡೆದು ನಿಲ್ಲಿಸಿ ಮಾತನಾಡಿ ಕಳುಹಿಸುತ್ತಿದ್ದರು. ಮಾತೆಂಬುದು ಜ್ಯೋತಿರ್ಲಿಂಗ ಎಂದು ನಮ್ಮ ಹಿರಿಯರು ಸುಮ್ಮನೆ ಹೇಳಿಲ್ಲ. ಅಂಥ ಜ್ಯೋತಿರ್ಲಿಂಗವನ್ನೇ ಶರಣಯ್ಯ ಒಲಿಸಿಕೊಂಡಿದ್ದ. ಹಿತವಾಗಿ ಮಾತನಾಡುತ್ತಿದ್ದ ಶರಣಯ್ಯ ಕಾಲೇಜು ಕಲಿಯುವಾಗಲೇ ನಾಯಕತ್ವದ ಗುಣವನ್ನು ಬೆಳೆಸಿಕೊಂಡಿದ್ದರು. ಎಲ್ಲದರಲ್ಲೂ ಒಂದು ಹೆಜ್ಜೆ ಮುಂದಿರಬೇಕು ಎಂದು ಹಂಬಲಿಸುತ್ತಲಿದ್ದ ಇವರಿಗೆ ಮುಂದೆ ಈ ಗುಣ ಡಿ.ಎಡ್ ಶಿಕ್ಷಣವನ್ನು ಕಲಿಯುವಾಗ ನೆರವಿಗೆ ಬಂದಿತು. ತಾಳಿಕೋಟೆಯ ಬಳಿ ಇರುವ ಹಿರೂರು ಗ್ರಾಮದಲ್ಲಿ ಡಿ.ಎಡ್ ಮುಗಿಸಿದ ಶರಣಯ್ಯ ಮುಂದೆ ಸರ್ಕಾರಿ ನೌಕರಿಗಾಗಿ ಕಾದು ಕೂರಲಿಲ್ಲಿ. ಬದಲಿಗೆ ಸ್ನಾತಕ ಪದವಿಯನ್ನಾದರು ಪಡೆದುಕೊಳ್ಳೋಣವೆಂದು ನಿರ್ಧಾರ ಮಾಡಿ ಸಿಂದಗಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಂಡು ತಮ್ಮ ಅಧ್ಯಯನದ ಮತ್ತೊಂದು ಇನ್ನಿಂಗ್ಸ್ ಪ್ರಾರಂಭಿಸಿದರು. ವಿಚಿತ್ರ ಎಂದರೆ ಇಲ್ಲಿ ವಿದ್ಯಾರ್ಥಿಯಾಗಿ ದಾಖಲಾತಿ ಪಡೆದುಕೊಂಡ ಶರಣಯ್ಯ ತಮಗಿಂತ ಕಿರಿಯ ಪದವಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಕಾರ್ಯ ಮಾಡುತ್ತಿದ್ದ. ಇವರ ಪಾಠ ಅದೆಷ್ಟು ವಿದ್ಯಾರ್ಥಿಗಳಿಗೆ ಇಷ್ಟವಾಯಿತೆಂದರೆ ಶರಣಯ್ಯನವರ ತರಗತಿಗೆ ಬರುತ್ತಾರೆಂದರ ವಿದ್ಯಾರ್ಥಿಗಳು ಹಬ್ಬಕ್ಕೆ ಬರುತ್ತಿದ್ದಾರೇನೋ ಎನ್ನುವಷ್ಟರ ಮಟ್ಟಿಗೆ ಸಂತಸ ಪಡುತ್ತಿದ್ದರು. ಹೀಗೆ ಪಾಠ ಕಲಿಯಲು ಬಂದು ಪಾಠ ಬೋಧನೆ ಮಾಡುತ್ತ ಪದವಿಯನ್ನು ಪಡೆದುಕೊಂಡ ಶರಣಯ್ಯ ಬಂಡಾರಿಮಠ ಅವರು ಸಿಂದಗಿ ನಗರದಲ್ಲಿಯೇ ಪ್ರಥಮ ಬಾರಿಗೆ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಟ್ಯೋಷನ್ ಹೇಳುವ ಕಾರ್ಯಕ್ಕೆ ಮುಂದಾದರು. ಕಾವಿಯೊಳಗಿನ ಕ್ರಾಂತಿಕಾರಿ ಸಿಂಹ ಸ್ವಾಮಿ ವಿವೇಕಾನಂದರ ಹೆಸರಲ್ಲಿ ಕ್ಲಾಸ್ ಪ್ರಾರಂಭಿಸಿ ಯಶಸ್ವಿಯಾದರು. ಎಲ್ಲ ವಿಷಯವನ್ನು ಒಬ್ಬರೇ ಬೋಧಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದ ಶರಣಯ್ಯನವರ ಕ್ಲಾಸ್‌ಗೆ ನೂರಾರು ವಿದ್ಯಾರ್ಥಿಗಳು ಹುಡುಕಿಕೊಂಡು ಬಂದು ದಾಖಲಾತಿ ಪಡೆದುಕೊಂಡಿದ್ದು ಅವರ ಬೋಧನಾ ಕೌಶಲ್ಯಕ್ಕೆ ಕನ್ನಡಿ ಹಿಡಿಯುತ್ತದೆ. ಹೀಗೆ ಬದುಕಿನ ಒಂದೊಂದೇ ಹಂತಗಳನ್ನು ಮುಗಿಸುತ್ತ ಸಾಗಿದ ಶರಣಯ್ಯ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆದುಕೊಳ್ಳುವ ಇಚ್ಛೇಯಿಂದ ಸಿಂದಗಿ ನಗರದಿಂದ ವಿಜಯಪುರಕ್ಕೆ ಪದಾರೆ್ಣ ಮಾಡಿ, ಚಾಣಕ್ಯ ಕರಿಯರ್ ಅಕಾಡೆಮಿಯಲ್ಲಿ ದಾಖಲಾತಿ ಪಡೆದುಕೊಂಡರು. ಬದುಕು ಎನ್ನುವುದು ವಿಚಿತ್ರ ತಿರುವುಗಳನ್ನು ತಂದು ತೋರಿಸುವ ನಾಟಕವೆಂದು ಕವಿಯೊಬ್ಬ ಹೇಳಿದ ಮಾತು ನಿಜಕ್ಕೂ ಸತ್ಯ. ಪದವಿ ಕಲಿಯಲು ಹೋಗಿ ಪಾಠ ಮಾಡಿದ ವ್ಯಕ್ತಿ, ಕಲಾ ವಿಭಾಗದಲ್ಲಿ ಪ್ರಥಮ ಬಾರಿಗೆ ಟ್ಯೂಷನ್ ಕ್ಲಾಸ್ ಪ್ರಾರಂಭಿಸಿ ಭರ್ಜರಿ ಯಶಸ್ಸು ಪಡೆದ ವ್ಯಕ್ತಿ, ಈಗ ತಾನೇ ತರಬೇತಿ ಪಡೆದುಕೊಳ್ಳುವುದಕ್ಕೆ ಬೇರೊಂದು ಸ್ಥಳಕ್ಕೆ ತೆರಳುತ್ತಾರೆ. ಆದರೆ ಆ ಸ್ಥಳವೇ ಅವರ ಪಾಲಿಗೆ ಸಾಧನೆಯ ಮೊದಲ ಬಾಗಿಲನ್ನು ತೆರೆಯುವ ಅಲ್ಲಾವುದ್ಧಿನ್‌ನ ಅದ್ಭುತ ದ್ವೀಪವಾಗುತ್ತದೆ ಎನ್ನುವುದನ್ನು ಮಾತ್ರ ಯಾವತ್ತೂ ಊಹಿಸಿರಲಿಲ್ಲ.
“ನೋಡಿ ತಿಳಿ ಮಾಡಿ ಕಲಿ” ಎನ್ನುವ ಮಾತನ್ನು ನಾವು ಕೇಳಿರುತ್ತೇವೆ. ಹಾಗೆಯೇ ಶರಣಯ್ಯನವರು ಸಹ ಚಾಣಕ್ಯ ತರಬೇತಿ ಕೇಂದ್ರದಲ್ಲಿ ಅದರ ಸಂಸ್ಥಾಪಕ ಅಧ್ಯಕ್ಷರಾದ ಎನ್.ಎಂ.ಬಿರಾದಾರ ಅವರ ಪರಿಶ್ರಮದ ಕಾರ್ಯವನ್ನು ಕಣ್ಣಾರೆ ಕಂಡು ಅವರ ಹಾದಿಯಲ್ಲಿಯೇ ತಾನು ಸಾಗಬೇಕು ಎಂದು ನಿರ್ಧರಿಸಿದರು. ಶ್ರದ್ಧೇಯಿಂದ ಅಧ್ಯಯನ ಕಾರ್ಯದಲ್ಲಿ ತೊಡಗಿಕೊಂಡು, ಕೊನೆಗೆ ತಾನು ಕಲಿತ ಅದೇ ಕರಿಯರ್ ಅಕಾಡೆಮಿಯಲ್ಲಿ ಕಾರ್ಯ ನಿರ್ವಹಣೆ ಮಾಡಿ ಅದ್ಭುತ ಉಪನ್ಯಾಸಕನಾಗಿ ಹೊರ ಹೊಮ್ಮಿದರು. ಅದು ಇಂದಿಗೆ ಇತಿಹಾಸವಾದರೂ ಸಹ “ಹತ್ತಿದ ಏಣಿಯನ್ನು ಒದೆಯಬಾರದು ಸವಸಿದ ದಾರಿಯನ್ನು ಮರೆಯಬಾರದು” ಎನ್ನುವ ಮಾತಿನಂತೆ ತನ್ನೆಲ್ಲ ಏಳ್ಗೆಗೆ ರೋಲ್ ಮಾಡೆಲ್ ಎಂದರೆ ಅದು ಎನ್.ಎಂ.ಬಿರಾದಾರ ಎಂದು ಹೇಳಿಕೊಳ್ಳುವ ಶರಣಯ್ಯನವರು ಇಂಥ ಸರಳತೆಯಿಂದಲೇ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರಾರಾಗಿದ್ದಾರೆ. ಇತಿಹಾಸವನ್ನು ಮರೆತವನು ಇತಿಹಾಸವನ್ನು ಸೃಷ್ಠಿಸುವುದಕ್ಕೆ ಸಾಧ್ಯವಿಲ್ಲ ಎಂದು ಅಂಬೇಡ್ಕರ ಹೇಳಿದ್ದಾರೆ. ಹಾಗೆಯೇ ತನ್ನ ಬದುಕಿನುದ್ದಕ್ಕೂ ಕಂಡುಕೊಂಡ ಸತ್ಯವನ್ನು ಹಾಗೂ ಸನುಭವಿಸಿದ ಯಾತನೆಯನ್ನು ಸವಾಲಾಗಿ ಸ್ವೀಕರಿಸುತ್ತ ಸಾಗಿದ ಶರಣಯ್ಯ ಯಾವುದೇ ಕಷ್ಟ ಬಂದರೂ ಎದೆಗುಂದಲಿಲ್ಲ. ಮುಂದೆ ಇಟ್ಟ ಹೆಜ್ಜೆಯನ್ನು ಹಿಂದಿಡಲಿಲ್ಲ. ಒಂದು ಗಂಟೆಯ ತರಗತಿ ತೆಗೆದುಕೊಳ್ಳುವುದಕ್ಕೆ 60 ಕಿ.ಮಿ ದೂರದಿಂದ ಮಳೆ ಗಾಳಿಯಲ್ಲಿ ಬರುವಾಗ ಎಷ್ಟೋ ಸಲ ತಮ್ಮಷ್ಟಕ್ಕೆ ತಾವೇ “ಈ ಕಷ್ಟವಾದರೂ ಏಕೆ ಬೇಕು ಸುಮ್ಮನೆ ಒಂದು ಸರ್ಕಾರಿ ನೌಕರಿ ಸಿಕ್ಕರೆ ಸಾಕು” ಎಂದುಕೊಳ್ಳುತ್ತಿದ್ದರು. ಆದರೆ ಇಂದು ಹತ್ತಾರೂ ಸರ್ಕಾರಿ ನೌಕರಿ ಅವರನ್ನು ಹುಡುಕಿಕೊಂಡು ಬಂದರೂ ಕೂಡ ಅವರ ಗುರುಗಳಂತೆ ಸ್ವತಂತ್ರವಾಗಿಯೇ ಬದುಕು ಕಟ್ಟಿಕೊಳ್ಳಬೇಕು ಎಂದು ಹಂಬಲಿಸಿ ಅದೇ ದಾರಿಯಲ್ಲಿಯೇ ಕ್ರಮಿಸುತ್ತಿದ್ದಾರೆ.
ಈ ಜಗತ್ತನ್ನು ಗೆಲ್ಲುವುದಕ್ಕೆ ಬುದ್ಧ ಬಳಸಿದ್ದು ಕೇವಲ ತನ್ನ ನಿಷ್ಕಲ್ಮಷ ನಗುವನ್ನು ಮಾತ್ರ. ಹಾಗೆಯೇ ತನ್ನೆದುರಿದ್ದವರನ್ನು ಗೆಲ್ಲುವುದಕ್ಕೆ ಶರಣಯ್ಯ ಬಳಸುವುದು ಕೂಡ ಅದೇ ನಗುವನ್ನು. ಯಾರೇ ಮಾತನಾಡಿಸಿದರು ಅವರ ಬಾಯಿಂದ ಪದಗಳು ಹೊರಡುವ ಮುನ್ನ ತುಟಿಯಿಂದ ನಗು ಹೊರ ಹೊಮ್ಮುತ್ತದೆ. ಅದು ಎಂಥಹ ವ್ಯಕ್ತಿಯೇ ಇದ್ದರೂ ಕೂಡ ಆಕರ್ಷಿಸುತ್ತದೆ. ಈ ಕಾರಣದಿಂದಲೇ ಅವರ ವಿದ್ಯಾರ್ಥಿಗಳಿಗೆ ಶರಣಯ್ಯನವರೆಂದರೆ ಬಹಳ ಇಷ್ಟ. “ಬದುಕನಲ್ಲಿ ಕೇವಲ ಒಂದೇ ಬಾರಿ ಅತ್ತ ನೆನಪಿದೆ. ಅದನ್ನು ಬಿಟ್ಟರೆ ಎಂಥದೆ ಸಂದರ್ಭದಲ್ಲಿಯೂ ನಾನು ಕಣ್ಣೀರು ಸುರಿಸಿಲ್ಲ. ಕಾರಣ ಕಣ್ಣೀರಿನ ಬೆಲೆ ಬಹಳ ದುಬಾರಿಯಾಗಿದೆ ಎನ್ನುವುದು ನನಗೆ ಗೊತ್ತು” ಎಂದು ಹೇಳುವ ಶರಣಯ್ಯ “ಅಳುವವನು ಎಂದುಗೂ ಆಳುವುದಕ್ಕೆ ಸಾಧ್ಯವಿಲ್ಲ” ಎನ್ನುವ ಸತ್ಯವನ್ನು ಅರಿತುಕೊಂಡಿದ್ದಾರೆ. ಅದೇ ಕಾರಣಕ್ಕಾಗಿಯೇ ಅವಮಾನವಾದ ಜಾಗದಲ್ಲಿ ಬಹುಮಾನ ಪಡೆದುಕೊಳ್ಳಬೇಕು. ಅವಮಾನ ಮಾಡಿಸಿಕೊಂಡವನಿಂದಲೇ ಸನ್ಮಾನ ಪಡೆದುಕೊಳ್ಳಬೇಕು. ಬದುಕಿದರೆ ಆ ರೀತಿಯೇ ಬದುಕಬೇಕು ಎಂದುಕೊಳ್ಳುತ್ತಾರೆ. ಯಾರೇ ಅವಮಾನಿಸಿದರೂ ಅದಕ್ಕೆ ಮಾತಿನಿಂದ ಮರು ಉತ್ತರ ನೀಡುವುದಕ್ಕೆ ಮುಂದಾಗದ ಶರಣಯ್ಯ ತಮ್ಮ ಕಾರ್ಯದಿಂದಲೇ ಉತ್ತರವಿತ್ತಿದ್ದಾರೆ. ಅದಕ್ಕೆ ಉದಾಹರಣೆಯಾಗಿ ಅವಮಾನದ ಪ್ರತಿಫಲವಾಗಿ ಅವರ ಲೇಖನಿಯಿಂದ ಹೊರ ಬಂದ ‘ಭೂಗೋಳ ಸಂಜೀವಿನಿ’ ಕೃತಿಯು ಇಂದು ಲಕ್ಷಾಂತರ ಮಾರಾಟವಾಗಿ ಕೋಟ್ಯಾಂತರ ಹಣವನ್ನು ತಂದುಕೊಟ್ಟಿದೆ. ಒಳ್ಳೆಯ ಕೆಲಸ ಮಾಡುವುದಕ್ಕೆ ಹೊರಟಾಗ ಬೆಕ್ಕುಗಳಿಗಿಂತ ಮನುಷ್ಯರೇ ಅಡ್ಡ ಬರುತ್ತಾರೆ. ಹಾಗೆಂದು ಎಲ್ಲರೂ ಅಡ್ಡ ಬರುವವರೇ ಆಗಿರುತ್ತಾರೆಂದು ತಿಳಿದು ಒಳ್ಳೆಯ ಕಾರ್ಯಕ್ಕೆ ಹೊರಡುವುದನ್ನೇ ಬಿಟ್ಟು ನಿಂತರೆ ಬದುಕು ನಡೆಯುತ್ತದೆಯೇ? ಖಂಡಿತ ಇಲ್ಲ. ಹಾಗೆಯೇ ಶರಣಯ್ಯನವರ ಬದುಕಲ್ಲಿ ವಿರೋಧಗಳು ಬಂದಾಗೊಮ್ಮೆ ನಗುತ್ತ ಒಂದು ಕೈ ನೋಡೇ ಬಿಡೋಣ ಎಂದು ಸಾಗುತ್ತಿರುವ ಸನ್ನಿವೇಶದಲ್ಲಿ ಪರಿಚಿತರಾದ ಅಶೋಕ ಮಿರ್ಜಿ ಅವರು ಶರಣಯ್ಯರಿಗೆ ಅಂತರ್ಜಾಲ ಪಾಠದ ಮಾರ್ಗವನ್ನು ಹಾಕಿಕೊಟ್ಟರು. ಅಲ್ಲಿಂದ ಬದಲಾದ ಶರಣಯ್ಯರ ಬದುಕು ಇಂದಿಗೂ ಕೂಡ ರಾಕೇಟ್ ವೇಗದಲ್ಲಿ ಮುನ್ನುಗ್ಗುತ್ತಿದೆ. ರಾಜ್ಯದ ವಿವಿಧ ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳಲ್ಲಿ ಹಲವಾರು ವಿಷಯಗಳನ್ನು ಬೋಧಿಸಿದ ಶರಣಯ್ಯರಿಗೆ ದೊಡ್ಡ ಹೆಸರು ತಂದುಕೊಟ್ಟಿದ್ದು ಅನ್ ಅಕಾಡೆಮಿ ಆನ್‌ಲೈನ್ ತರಬೇತಿ. 2009 ರಲ್ಲಿ ಕೊರೋನಾ ಹೊಡೆತ ಇಡೀ ಜಗತ್ತಿಗೆ ಶಾಪವಾಗಿ ಕಾಡಿದರೆ ಶರಣಯ್ಯರ ಪಾಲಿಗೆ ವರವಾಗಿ ಪರಿಣಮಿಸಿತು. ಶಿಕ್ಷಣ ಹಾಗೂ ತರಬೇತಿಯಿಂದ ವಂಚಿತರಾಗುತ್ತಿದ್ದ ಸ್ಪರ್ಧಾರ್ಥಿಗಳಿಗೆ ಆನ್‌ಲೈನ್ ತರಬೇತಿ ನೀಡಲು ಅನ್ ಅಕಾಡೆಮಿಯ ಸೇವೆಗೆ ಸೇರಿದ ಬಂಡಾರಿಮಠ ಅವರು ಅಲ್ಲಿಂದ ಇಡೀ ರಾಜ್ಯದ ಸ್ಪರ್ಧಾರ್ಥಿಗಳ ಪಾಲಿಗೆ ಹೀರೋ ಆಗಿ ಬಿಡುತ್ತಾರೆ. ತಮ್ಮ ಹಾಸ್ಯಶೈಲಿಯ ವಿಷಯ ಬೋಧನೆಯಿಂದ ಅಪಾರವಾದ ಹಿಂಬಾಲಕರನ್ನು ಪಡೆದುಕೊಂಡು ದೇಶದ ನಂಬರ್ ಒನ್ ಎಜ್ಯುಕೇಟರ್ ಸ್ಥಾನವನ್ನು 6 ಬಾರಿ ಪಡೆದುಕೊಂಡು ಒಂದಕ್ಕೆ ಎರಡೂವರೆ ಲಕ್ಷದಂತೆ 15 ಲಕ್ಷ ರೂಪಾಯಿಗಳನ್ನು ಅನ್ ಕಾಡೆಮಿಯಿಂದ ಬಹುಮಾನದ ರೂಪದಲ್ಲಿ ಪಡೆದುಕೊಳ್ಳುತ್ತಾರೆಂದರೆ ಇವರ ಕೌಶಲ್ಯವಾದರೂ ಹೇಗಿರಬೇಕು ನೀವೇ ಊಹಿಸಿ.
ಆನ್‌ಲೈನ್ ಜೊತೆಗೆ ಆಪ್‌ಲೈನ್ ತರಗತಿ ನೀಡಲು 2021 ಅಕ್ಟೋಬರ್ 10ರಂದು ವಿಜಯಪುರ ನಗರದಲ್ಲಿ ಪ್ರಾರಂಭ ಮಾಡಿದ ಎಸ್.ಬಿ.ವಿಜಡಂ ಇಂದು ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿದೆ. ನುರಿತ ಬೋಧಕರ ತಂಡವನ್ನು ಕಟ್ಟಿಕೊಂಡು ಹೆಜ್ಜೆ ಹಾಕುತ್ತಿರುವ ಈ ಸಂಸ್ಥೆ ಸರ್ಕಾರಿ ನೌಕರಿಯನ್ನು ಪಡೆದುಕೊಳ್ಳವ ಕನಸನ್ನು ನನಸಾಗಿಸುವ ಕಾರ್ಯ ಮಾಡುತ್ತಿದೆ. ನೀ ಮಾಡು ಎಂದು ಹೇಳುವ ಜನಗಳ ಎದುರು ನಾನು ಮಾಡಿದ್ದೇನೆ. ನಾನು ಮಾಡಿದ್ದನ್ನು ನೀನು ಮಾಡು ಎನ್ನುವ ಮಟ್ಟದಲ್ಲಿ ಸಾಧನೆ ಮಾಡುತ್ತ ಸಾಗುತ್ತಿರುವ ಶರಣಯ್ಯ ಬಡ ವಿದ್ಯಾರ್ಥಿಗಳಿಗೆ ನೆರವಾಗಲಿ ಎನ್ನುವ ದೃಷ್ಠಿಯಿಂದ ಪ್ರತಿ ದಿನ 2 ಗಂಟೆಗಳ ಉಚಿತ ಆನ್‌ಲೈನ್ ತರಬೇತಿಯನ್ನು ಸಹ ನೀಡುತ್ತಾರೆ. ಮುಂದಿನ ದಿನಗಳಲ್ಲಿ ಉತ್ತಮ ನೈತಿಕ ಮೌಲ್ಯವನ್ನು ಒಳಗೊಂಡಿರುವ ಶಾಲೆಯನ್ನು ಪ್ರಾರಂಭಿಸಿ, ಸಂಸ್ಕಾರವಂತ ಯುವಕರನ್ನು ಸಂಘಟಿಸಿ, ಸದೃಢ ಭಾರತ ನಿರ್ಮಾಣದ ಕನಸು ಹೊತ್ತಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಎಷ್ಟೇ ಸಾಧನೆ ಮಾಡಿದರೂ ಕೂಡ ವ್ಯಕ್ತಿತ್ವದಲ್ಲಿ ಕೊಂಚವೂ ಬದಲಾವಣೆ ಮಾಡಿಕೊಳ್ಳದೇ, ತುಟಿಯ ಮೇಲೆ ಅದೇ ನಗುವನ್ನು ಹೊತ್ತುಕೊಂಡು, ಎದುರು ಬಂದವರಿಗೆ ನಗುಮೊಗದ ಸ್ವಾಗತ ಕೋರುವ ಈ ಸಾಹುಕಾರ ಮೌಲ್ಯವು ಶಿಕ್ಷಣವಾಗಬೇಕು, ಶಿಕ್ಷಕ ಮಾದರಿಯಾಗಬೇಕು ಎಂದು ಹೇಳುವುದು ಸಾವಿರ ಪಾಲು ಸತ್ಯವಾದ ಮಾತು. ಹೀಗೆ ಹಳ್ಳಿಯಲ್ಲಿ ಹುಟ್ಟಿ ನಗರವೂ ನಾಚುವಂತೆ ಬೆಳೆಯುತ್ತಿರುವ, ಝೀರೋದಿಂದ ಹೀರೋ ಆಗಿ ಯುವಕರಿಗೆ ಮಾದರಿಯಾಗುತ್ತಿರುವ, ಗುರುವಿನ ದಾರಿಯಲ್ಲಿ ಹೆಜ್ಜೆ ಹಾಕಿ ಗುರಿಯತ್ತ ದಾಪುಗಾಲಿಡುತ್ತಿರುವ, ಸಾವಿರಾರು ಯುವಕರ ಬೆಂಬಲವನ್ನು ಪಡೆಯುತ್ತಿರುವ, ಬೇರೊಬ್ಬರ ಬಾಳಿಗೆ ನೆರವಾಗುತ್ತಿರುವ, ವಿಜಯಪುರ ನಗರದಲ್ಲಿ ವಿಜಯಪಥಾಕೆ ಹಾರಿಸಲು ಸಜ್ಜಾಗುತ್ತಿರುವ ಇವರ ಸಾಧನೆಗೆ ಒಂದು ಸಲಾಂ ಹೇಳುತ್ತ ಇವರ ಕನಸು ನನಸಾಗಲಿ ಎಂದು ಹಾರೈಸೋಣ.
- * * * -