ಇದು ಕಿತ್ತೂರು ವಿಜಯೋತ್ಸವ ರಾಣಿ ಚೆನ್ನಮ್ಮನ ಜಯಂತಿ ಅಲ್ಲ

 ಇದು ಕಿತ್ತೂರು ವಿಜಯೋತ್ಸವ ರಾಣಿ ಚೆನ್ನಮ್ಮನ ಜಯಂತಿ ಅಲ್ಲ This is the Kittur victory festival, not the birth anniversary of Queen Chennamma.

ಲೋಕದರ್ಶನ ವರದಿ 

ಇದು ಕಿತ್ತೂರು ವಿಜಯೋತ್ಸವ ರಾಣಿ ಚೆನ್ನಮ್ಮನ ಜಯಂತಿ ಅಲ್ಲ 


ಇಂದಿನ ಒಂದು ದಿನಪತ್ರಿಕೆಯಲ್ಲಿ ಕರ್ನಾಟಕ ಸರಕಾರದ  ‘ಕನ್ನಡ ಮತ್ತು ಸಂಸ್ಕೃತಿ’ ಇಲಾಖೆ ವತಿಯಿಂದ ನೀಡಿದ ಜಾಹಿರಾತಿನಲ್ಲಿ ‘ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ’  ಕಾರ್ಯಕ್ರಮ ಕುರಿತು ಪ್ರಸ್ತಾಪಿಸಲಾಗಿದೆ. ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಪ್ರಶ್ನೆ ಬಂದಾಗ ವೀರ ರಾಣಿ ಕಿತ್ತೂರು ಚೆನ್ನಮ್ಮನವರು ಹೋರಾಟಗಾರರಿಗೆ ಮಹತ್ವದ ಮತ್ತು ಪ್ರೇರಣಾ ವ್ಯಕ್ತಿಯಾಗಿದ್ದಾರೆ.   


      ದಿನಾಂಕ 23-10-1824ರಂದು ಸೂರ್ಯನ ಮುಳುಗದ ಸಾಮ್ರಾಜ್ಯ ಬ್ರಿಟಿಷರ ವಿರುದ್ದ ಹೋರಾಡಿ ವಿಜಯ ಆಚರಿಸಿಕೊಂಡ ‘ಕಿತ್ತೂರು’ ಇಂದು 201ನೇ ವಿಜಯೋತ್ಸವದ ಸಡಗರ ಸಂಭ್ರಮದಲ್ಲಿ ಮುಳುಗಿದೆ.  ಇಂದು ಕಿತ್ತೂರು ವಿಜಯೋತ್ಸವ ಎನ್ನುವ  ಕುರಿತು  ಕಿತ್ತೂರು ಇತಿಹಾಸವನ್ನು ಮೊಟ್ಟ ಮೊದಲು ಬೆಳಕಿಗೆ ತಂದ ಬೈಲಹೊಂಗಲದ ಕಿತ್ತೂರು ಇತಿಹಾಸ ಮಂಡಳಿಯ ದೊಡ್ಡಭಾವೆಪ್ಪ ಮೂಗಿ, ಧಾರವಾಡದ ಇತಿಹಾಸ  ತಜ್ಞರಾದ ಡಾ. ಲಕ್ಷ್ಮಣ ತೆಲಗಾವಿ, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಾ. ಸದಾಶಿವ ಒಡೆಯರ ಮುಂತಾದ ಮಹನೀಯರು ಬರೆದ ಕೃತಿಗಳಲ್ಲದೇ,  2002ರಲ್ಲಿ ಬೆಳಗಾವಿ ಜಿಲ್ಲಾಡಳಿತದಿಂದ ಡಾ. ಮನು ಬಳಿಗಾರವರ ಸಂಪಾದಕತ್ವದಲ್ಲಿ ಪ್ರಕಟಿಸಲಾದ ‘ಕಿತ್ತೂರು ಇತಿಹಾಸ’ -  ಹೀಗೆ ಹತ್ತು ಹಲವಾರು ಕೃತಿಗಳಲ್ಲಿ ಧಾರವಾಡದ ಬ್ರಿಟೀಷ ಪಾಲಿಟಿಕಲ್ ಏಜಂಟ ಮತ್ತು ಕಲೆಕ್ಟರ್ ಜಾನ್ ಥ್ಯಾಕರೆಯು ಕಿತ್ತೂರಿನ ಕೆಂಪಮರಡಿ ಯುದ್ಧಭೂಮಿಯಲ್ಲಿ ಅಮಟೂರು ಬಾಳಪ್ಪನ ಗುಂಡೇಟಿಗೆ ಹತನಾದಾಗಿ,  ರಾಣಿ ಚೆನ್ನಮ್ಮನವರ  ವಿಜಯ ವಿಶ್ವಕ್ಕೆ ಪರಿಚಯವಾಗಿ, ಬ್ರಿಟೀಷರನ್ನು ಒಳಗೊಂಡಂತೆ ಭಾರತೀಯರು ವಿಶ್ವದ ನಕ್ಷೆಯಲ್ಲಿ ಕಿತ್ತೂರು ಸಂಸ್ಥಾನವನ್ನು ಬೆರಗು ಗಣ್ಣಿನಿಂದ ಶೋಧಿಸಿ ನಿಬ್ಬೆರಗಾದರು. ಕಿತ್ತೂರು ಸಂಸ್ಥಾನ ಮತ್ತು ರಾಣಿ ಚೆನ್ನಮ್ಮನವರ ಕುರಿತು ನಾನು ಈ ವರೆಗೆ ಬರೆದ ಸುಮಾರು ಹತ್ತು ಕೃತಿಗಳಲ್ಲಿ ಇದನ್ನೇ ಪುನರುಚ್ಚರಿಸಿದ್ದೇನೆಯಲ್ಲದೆ, ಕಿತ್ತೂರು ನಾಡಿನ ಎಲ್ಲ ಜನರಿಗೆ ಅಕ್ಟೋಬರ್ 23 ‘ಕಿತ್ತೂರು ವಿಜಯೋತ್ಸವ’ ಎನ್ನುವ ತಿಳುವಳಿಕೆ ಇದೆ.  


ನಾವು ಭಾರತೀಯರು ಪುರಾಣಪ್ರಿಯರು, ಇತಿಹಾಸಪ್ರಿಯರಲ್ಲ, ಕನ್ನಡದಲ್ಲಿ ಒಂದು ಗಾದೆ ಮಾತಿದೆ ‘ಮೊದಲೇ ಉಪವಾಸ, ಅದರಲ್ಲಿ ಶಿವರಾತ್ರಿ’ ಎನ್ನುವಂತೆ, ಇತಿಹಾಸ ವಿಷಯದಲ್ಲಿ ಅವಜ್ಞ ಹೊಂದಿದ ಪ್ರಸ್ತುತ ಪೀಳಿಗೆಗೆ ಸರಕಾರದಿಂದ ಇಂತಹ ತಪ್ಪು ಸಂದೇಶ ಹೋಗಬಾರದು. ಇದನ್ನೆ ನಂಬಿದರೆ ನಿಶ್ಚಯವಾಗಿ ಚರಿತ್ರೆಗೆ ಬಗೆಯುವ ಅಪಮಾನವೇ ಆಗಿದೆ. ಬ್ರಿಟೀಷ ಬೃಹತ್ ಸಾಮ್ರಾಜ್ಯದೊಡನೆ ಹೋಲಿಸಿದರೆ, ಕಿತ್ತೂರು ಸಂಸ್ಥಾನ ಒಂದು ಸ್ವಾಭಿಮಾನಿ ಮತ್ತು ಸ್ವಾತಂತ್ರ್ಯಪ್ರಿಯ ನೆಲ.  ಇಂತಹ ಸಾಮ್ರಾಜ್ಯದೊಂದಿಗೆ ಎದೆ ಸೆಟೆಸಿ ನಿಲ್ಲಲು ಎಂತೆಂತಹ ಸಾಮ್ರಾಟರ ಕೈಕಾಲು ನಡುಗಿ,  ಹಿಂಜರಿಯುತ್ತಿದ್ದ ಸಂದರ್ಭದಲ್ಲಿ ತನ್ನದೇ ಆದ ನೆಲದ ಪ್ರೇಮ, ದಿಟ್ಟತನ,  ಧೈರ್ಯದಿಂದ ಮುಖ್ಯವಾಗಿ ಸರದಾರರಾದ ಅವರಾದಿ ವೀರ​‍್ಪ, ಗುರುಸಿದ್ದಪ್ಪ, ಸಂಗೊಳ್ಳಿ ರಾಯ್ಣ, ಅಮಟೂರು ಬಾಳಪ್ಪ, ಬಿಚ್ಚುಗತ್ತಿ ಚೆನ್ನಬಸಪ್ಪ, ಗಜವೀರ ಮುಂತಾದ ಶೂರರನ್ನು ಬೆನ್ನಿಗೆ ಕಟ್ಟಿಕೊಂಡು ಹೋರಾಡಿದ ವೀರ ರಾಣಿ ಚೆನ್ನಮ್ಮ ಕನ್ನಡಿಗರ ಅಸ್ಮಿತೆ, ಮಹಿಳಾ ಸಬಲೀಕರಣ ಪ್ರತಿರೂಪ. 


ಈ ಕುರಿತು ದಿನಾಂಕ 16-10-2017ರಂದು ಮಾನ್ಯ ಮುಖ್ಯ ಮಂತ್ರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಕಾಕತಿಯಲ್ಲಿರುವ  ಕಿತ್ತೂರು ಉತ್ಸವ ಸಮಿತಿ ಹಾಗೂ ನಾನು ಕೂಡಿ ಮನವಿ ಸಲ್ಲಿಸಿದ್ದೆವು. ಆದರೆ ಈ ಮನವಿಗೆ ಇಲ್ಲಿಯ ತನಕ ಯಾರೂ ಪ್ರತಿಕ್ರಿಯೆ ನೀಡಿಲ್ಲ. ಕಾಕತಿ-ಬೆಳಗಾವಿಯಿಂದ ಕೂಗಳತೆಯ ದೂರದಲ್ಲಿರುವ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದವರು ಈ ಕುರಿತು ಗಮನ ಹರಿಸಬೇಕಾಗಿತ್ತು.  ನಾಳೆ ನಡೆಯುವ ವಿಚಾರ ಸಂಕಿರಣದಲ್ಲಿ ಭಾಗವಹಿಸುವ ಉಪನ್ಯಾಸಕರಿಗೂ ಸಹ ಈ ಕುರಿತು ಗಮನವಿಲ್ಲ. ಈಗಲೂ ಕಾಲ ಮಿಂಚಿಲ್ಲ, ರಾಣಿ ಚೆನ್ನಮ್ಮನವರ ಅಭಿಮಾನಿ ಮನಸ್ಸುಗಳು, ಚುನಾಯಿತ ಪ್ರತಿನಿಧಿಗಳು, ಮಹಿಳಾ ಸಂಘಟನೆಗಳು, ಸರಕಾರದ ಮೇಲೆ ಒತ್ತಡ ತರಲಿ. ಬಸವಣ್ಣನವರು, ರಾಣಿ ಚೆನ್ನಮ್ಮನವರು ಹಾಗೂ ಸಂಗೊಳ್ಳಿ ರಾಯಣ್ಣನವರ ಬಗ್ಗೆ ಉತ್ಕಟ ಅಭಿಮಾನ ಹೊಂದಿದ ಮುಖ್ಯ ಮಂತ್ರಿಗಳು ಈ ಕುರಿತು ಗಮನ ಹರಿಸಲಿ.  

‘ಅಕ್ಟೋಬರ್ 23 ಕಿತ್ತೂರು ವಿಜಯೋತ್ಸವ’ ಇದು ‘ರಾಣಿ ಚೆನ್ನಮ್ಮನ ಜಯಂತಿ’ ಅಲ್ಲವೆನ್ನುವ ತಿಳುವಳಿಕೆಯನ್ನು ಕೂಡಲೇ ಸರಿಪಡಿಸಿ ಸರಕಾರ ಸ್ಪಷ್ಟೀಕರಣ ನೀಡುವುದು ಇಂದಿನ ತುರ್ತು ಅಗತ್ಯವಿದೆಯೆಂದು ರಾಣಿ ಚೆನ್ನಮ್ಮನವರ ಅಭಿಮಾನಿ ಮನಸ್ಸುಗಳ ಪರವಾಗಿ ವೈಯಕ್ತಿಕವಾಗಿ  ನನ್ನ ಆಶಯವಾಗಿದೆ.    

ಯ.ರು. ಪಾಟೀಲ,  

ಇತಿಹಾಸಕಾರರು ಚಾರಿತ್ರಿಕ ಕಾದಂಬರಿಕಾರರು ಬೆಳಗಾವಿ