ಕೊರೊನೋ ವೈರಸ್ ಅನ್ನು ಜಾಗತಿಕ ತುರ್ತು ಎಂದು ಘೋಷಿಸಲು ಸೂಕ್ತ ಸಮಯವಲ್ಲ; ಡಬ್ಲ್ಯು ಎಚ್ ಒ

ಜಿನೆವಾ, ಜ 24, ಚೀನಾದಲ್ಲಿ ಕಾಣಿಸಿಕೊಂಡಿರುವ ನೋವೆಲ್ ಕೊರೋನಾ ಸೋಂಕನ್ನು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಲು ಇದು ಸೂಕ್ತ ಸಮಯವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ ಒ) ಹೇಳಿದೆ. 

ಗುರುವಾರ ನಡೆದ ತುರ್ತು ಸಮಿತಿಯ ಗೌಪ್ಯ ಸಭೆಯ ನಂತರ ಡಬ್ಲ್ಯು ಎಚ್ ಒ ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧಾನಮ್ ಘೆಬ್ರೆಯೆಸೆಸ್ , ಇಂದು ನಾವು ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸುವುದಿಲ್ಲ. ಸಭೆಯಲ್ಲಿ ಸಮಿತಿಯ ಸದಸ್ಯರು ಈ ಕುರಿತು ಒಮ್ಮತದ ತೀರ್ಮಾನಕ್ಕೆ ಬರಲಾಗಲಿಲ್ಲ ಎಂದು ಹೇಳಿದ್ದಾರೆ. 

ಚೀನಾದಲ್ಲಿ ತುರ್ತು ಪರಿಸ್ಥಿತಿಯಿದ್ದರೂ, ಅದನ್ನು ಜಾಗತಿಕ ಆರೋಗ್ಯ ತುರ್ತು ಎಂದು ಘೋಷಿಸಲು ಇನ್ನೂ ಸಮಯ ಬಂದಿಲ್ಲ. ಈ ಕುರಿತು ಇನ್ನೂ ಪರಿಶೀಲನೆ ನಡೆಯುತ್ತಿದೆ ಎಂದರು. ಜಾಗತಿಕ ಮಟ್ಟದಲ್ಲಿ ಆತಂಕ ಹುಟ್ಟಿಸುವಷ್ಟು ಪರಿಸ್ಥಿತಿ ಗಂಭೀರವಾಗಿಲ್ಲ ಎಂದಿದ್ದಾರೆ. ಡಬ್ಲ್ಯುಎಚ್ ಒ ನಲ್ಲಿ ಇಲ್ಲಿಯವರೆಗೆ 17 ಸಾವು ಸೇರಿದಂತೆ 584 ಪ್ರಕರಣಗಳು ಚೀನಾದಲ್ಲಿ ದಾಖಲಾಗಿದೆ. ಕೆಲವು ಪ್ರಕರಣಗಳು ಜಪಾನ್, ಕೊರಿಯಾ, ಸಿಂಗಾಪುರ, ಥಾಯ್ಲೆಂಡ್, ಅಮೆರಿಕ ಹಾಗೂ ವಿಯೆಟ್ನಾಂ ನಲ್ಲೂ ದಾಖಲಾಗಿವೆ ಎಂದರು. ಎಲ್ಲಾ ದೇಶಗಳು ಕೊರೋನ ವೈರಸ್ ಪ್ರಕರಣಗಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಟೆಡ್ರೋಸ್ ಸಲಹೆ ನೀಡಿದರು.