ಚಿತ್ರದುರ್ಗ, ಏ.9, ಜಿಲ್ಲೆಯಲ್ಲಿ ಈಗಾಗಲೇ ಎರಡು ಕಡೆ ಕೋವಿಡ್-19 ಸೋಂಕು ನಿವಾರಕ ಮಾರ್ಗ ಅಳವಡಿಸಲಾಗಿದ್ದು, ಹೆಚ್ಚು ಜನಸಂದಣಿ ಇರುವ ಇನ್ನಷ್ಟು ಕಡೆಗಳಲ್ಲಿ ಸೋಂಕು ನಿವಾರಕ ಮಾರ್ಗ ಅಳವಡಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ಜಿಲ್ಲಾಡಳಿತ ಮತ್ತು ನಗರಸಭೆ ವತಿಯಿಂದ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಸಿದ್ಧಪಡಿಸಿರುವ ಸೋಂಕು ನಿವಾರಕ ಮಾರ್ಗಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದ ಅವರು,
ಚಿತ್ರದುರ್ಗ ನಗರದಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆ ವತಿಯಿಂದ ಅತಿ ಕಡಿಮೆ ವೆಚ್ಚದಲ್ಲಿ ಸೋಂಕು ನಿವಾರಕ ಮಾರ್ಗ ನಿರ್ಮಿಸಲಾಗಿದೆ. ಜಿಲ್ಲೆಯ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಮೂಲಕ ಕೋವಿಡ್-19 ಹರಡುವಿಕೆ ತಡೆಗಟ್ಟಲು ಸಹಕರಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಶಾಸಕರು, ಸೋಂಕು ನಿವಾರಕ ಮಾರ್ಗ ಆರಂಭಿಸಿದವರಲ್ಲಿ ಚಿತ್ರದುರ್ಗ ಮೂರನೇಯದು. ತಮಿಳುನಾಡು, ಮೈಸೂರು ನಂತರ ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸೋಂಕು ನಿವಾರಕ ಮಾರ್ಗ ಅಳವಡಿಸಲಾಗಿದೆ ಎಂದು ಹೇಳಿದರು.
ಜಿಲ್ಲಾಸ್ಪತ್ರೆಯಲ್ಲಿ ಎರಡು ಸೊಂಕು ನಿವಾರಕ ಮಾರ್ಗ ನಿರ್ಮಿಸುವಂತೆ ಬೇಡಿಕೆ ಇದೆ. ಈ ಕುರಿತು ನಗರಸಭೆಯೊಂದಿಗೆ ಚರ್ಚಿಸಲಾಗಿದೆ. ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ನಿರ್ಮಿಸಿದ ಸೋಂಕು ನಿವಾರಕ ಮಾರ್ಗದ ವಿಶೇಷವೆಂದರೆ ಜಿಲ್ಲಾಧಿಕಾರಿ, ನಗರಸಭೆ ಹಾಗೂ ಇಂಜಿನಿಯರ್‍ಗಳ ಸಹಕಾರದೊಂದಿಗೆ ಕೇವಲ ರೂ.35 ಸಾವಿರ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದರು.
ಕೋವಿಡ್-19 ಕುರಿತಂತೆ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಸೋಂಕು ಪತ್ತೆಯಾಗಿಲ್ಲ. ಸಾರ್ವಜನಿಕರು ಕೊರೊನಾ ಹರಡುವಿಕೆ ತಡೆಗಟ್ಟಲು ಅಗತ್ಯಕ್ರಮ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಜೊತೆಗೆ ಲಾಕ್‍ಡೌನ್ ಎಲ್ಲರೂ ಬೆಂಬಲಿಸುವುದರ ಮೂಲಕ ಚಿತ್ರದುರ್ಗ ಜಿಲ್ಲೆಯನ್ನು ಸೋಂಕು ರಹಿತ ಜಿಲ್ಲೆಯನ್ನಾಗಿಸೋಣ ಎಂದು ಆಶಯ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಮಾತನಾಡಿ, ಕೋವಿಡ್-19 ಸಂಬಂಧಪಟ್ಟಂತೆ ಇದುವರೆಗೂ ಜಿಲ್ಲೆಯಲ್ಲಿ ಯಾವುದೇ ಸೋಂಕು ಪತ್ತೆಯಾಗಿಲ್ಲ. ಆದಾಗ್ಯೂ ಮುಂಜಾಗ್ರತಾ ಕ್ರಮವಾಗಿ ಸೋಂಕು ನಿವಾರಕ ಮಾರ್ಗ ಮಾಡಲಾಗಿದೆ. ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಖರೀದಿಗಾಗಿ ಕೆಲವರು ಮಾತ್ರ ಹೊರಗಡೆ ಬರುತ್ತಿದ್ದಾರೆ. ಸಾರ್ವಜನಿಕರು ಆದಷ್ಟು ಮನೆಯಲ್ಲಿ ಇರುವುದು ಉತ್ತಮ ಎಂದು ಹೇಳಿದರು. ಗ್ರಾಮೀಣ ಮತ್ತು ನಗರದ ಪ್ರದೇಶದ ವಾರ್ಡ್ ವ್ಯಾಪ್ತಿಗಳಲ್ಲಿ ಶಿಕ್ಷಕರನ್ನು ನಿಯೋಜನೆ ಮಾಡಿ, ಅಲ್ಲಿನ ಪ್ರದೇಶಗಳ ಕುಂದು ಕೊರತೆಗಳ ಮಾಹಿತಿ ಸಂಗ್ರಹಿಸಿ, ಸಮಸ್ಯೆಗಳ ನಿವಾರಣೆಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ನಗರಸಭೆ ಪೌರಾಯುಕ್ತ ಜೆ.ಟಿ.ಹನುಮಂತರಾಜು ಮಾತನಾಡಿ, ಮಾರುಕಟ್ಟೆಗಳಲ್ಲಿ ಹೆಚ್ಚು ಜನಸಂದಣಿ ಇರುವುದರಿಂದ ಸೋಂಕು ನಿವಾರಕ ಮಾರ್ಗ ಅಳವಡಿಸಲಾಗಿದೆ. ಸಾರ್ವಜನಿಕರು ಇದೇ ಮಾರ್ಗದ ಮೂಲಕ ಓಡಾಡುವಂತೆ ವ್ಯವಸ್ಥೆ ಮಾಡಲಾಗಿದೆ. ಸೋಡಿಯಂ ಹೈಪೊಕ್ಲೋರೈಡ್ ಹಾಗೂ ನೀರು ಇವುಗಳ ಮಿಶ್ರಣದಿಂದ ಸೋಂಕು ನಿವಾರಕ ದ್ರಾವಣವನ್ನು ಸಿದ್ಧಪಡಿಸಲಾಗಿದೆ. ಸೋಂಕು ನಿವಾರಕ ಮಾರ್ಗ ಬೆಳಗಿನ ಜಾವ 4 ರಿಂದ 9 ರವರೆಗೆ ಕಾರ್ಯನಿರ್ವಹಿಸಲಿದೆ. ಕೋವಿಡ್-19 ಹರಡುವಿಕೆ ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಕಾರವು ಅಗತ್ಯವಿದೆ ಎಂದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್ ಹಾಗೂ ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.