ಪಡಿತರ ವಿತರಣೆಯಲ್ಲಿ ಯಾವುದೇ ಲೋಪ ಉಂಟಾಗಬಾರದು: ಕೆ.ಗೋಪಾಲಯ್ಯ ಸೂಚನೆ

ಕೋಲಾರ, ಮೇ 7,ಕೊರೋನಾ  ಮಹಾಮಾರಿಯಿಂದ ದೇಶಾದ್ಯಂತ ಲಾಕ್‍ಡೌನ್ ಜಾರಿಯಾಲಿದ್ದು, ಈ ಸಂದರ್ಭದಲ್ಲಿ ಆಹಾರದ ಕೊರತೆ  ಉಂಟಾಗಬಾರದು ಎಂದು ಬಿ.ಪಿ.ಎಲ್ ಮತ್ತು ಎ.ಪಿ.ಎಲ್. ಪಡಿತರ ಚೀಟಿ ಹೊಂದಿರುವ  ಕುಟುಂಬಗಳಿಗೆ ಈಗಾಗಲೇ 2 ತಿಂಗಳ ಪಡಿತರ ವಿತರಿಸಿದ್ದು, ಪ್ರಸ್ತುತ ಕೇಂದ್ರ ಸರ್ಕಾರದ  ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿಯಲ್ಲಿ 2 ತಿಂಗಳ ಪಡಿತರ  ವಿತರಿಸಲಾಗುತ್ತಿದೆ.  ಪಡಿತರ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು  ಎಚ್ಚರಿಕೆ ವಹಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ  ಇಲಾಖೆಯ ಸಚಿವರಾದ ಕೆ.ಗೋಪಾಲಯ್ಯ ಸೂಚಿಸಿದ್ದಾರೆ.
ಇಂದು  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಆಹಾರ, ನಾಗರಿಕ ಸರಬರಾಜು ಹಾಗೂ  ಕಾನೂನು ಮಾಪನಶಾಸ್ತ್ರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಹಾಗೂ ಪ್ರಧಾನ ಮಂತ್ರಿ ಗರೀಬ್  ಕಲ್ಯಾಣ ಅನ್ನ ಯೋಜನೆಯಡಿ ಪಡಿತರ ವಿತರಣೆ ಸಿದ್ಧತೆ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ  ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪಡಿತರ  ವಿತರಣೆಯ ತೂಕ ಮತ್ತು ಅಳತೆಯಲ್ಲಿ ಯಾವುದೇ ಮೋಸ ಆಗಬಾರದು. ಕಂದಾಯ ಇಲಾಖೆ, ಆಹಾರ ಇಲಾಖೆ  ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆಗಳನ್ನೊಳಗೊಂಡ ಅಧಿಕಾರಿಗಳ 20 ತಂಡಗಳನ್ನು ರಚಿಸಿ,  ಪರಿಶೀಲನೆ ನಡೆಸಬೇಕು. ಇದರಿಂದ ನ್ಯಾಯಬೆಲೆ ಅಂಗಡಿಗಳ ಪಡಿತರ ವಿತರಕರು ಎಚ್ಚೆತ್ತುಕೊಂಡು  ನ್ಯಾಯಯುತ ಪಡಿತರವನ್ನು ಫಲಾನುಭವಿಗಳಿಗೆ ವಿತರಿಸುತ್ತಾರೆ. ಲೋಪ ಕಂಡುಬಂದ ನ್ಯಾಯಬೆಲೆ  ಅಂಗಡಿಗಳ ಲೈಸನ್ಸ್‍ನ್ನು ರದ್ದುಪಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಿಮೆಂಟ್,  ಕಬ್ಬಿಣ ಸೇರಿದಂತೆ ಇತರೆ ಅಂಗಡಿಗಳಲ್ಲೂ ತೂಕ ಮತ್ತು ಅಳತೆಯಲ್ಲಿ ಮೋಸ ಮಾಡುತ್ತಾರೆ.  ಈ  ಬಗ್ಗೆ ಕಾನೂನು ಮಾಪನಶಾಸ್ತ್ರ ಇಲಾಖೆ ಅನಿರೀಕ್ಷಿತ ಭೇಟಿಗಳನ್ನು ನೀಡಿ ಸಂಬಂಧಪಟ್ಟವರ  ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ಯಾವುದೇ ವಸ್ತುವಿನ ತೂಕ, ಅಳತೆ ಮತ್ತು ಗುಣಮಟ್ಟದಲ್ಲಿ  ಲೋಪವಾಗಬಾರದು ಎಂದು ತಿಳಿಸಿದರು.ಕೋಲಾರ ವಿಧಾನಸಭಾ  ಕ್ಷೇತ್ರದ ಶಾಸಕ ಕೆ.ಶ್ರೀನಿವಾಸಗೌಡ  ಮಾತನಾಡಿ ಕೊರೋನಾ ಬಂದ ಮೇಲೆ ಜನರ ಬದುಕು  ದುಸ್ತರವಾಗಿದೆ. ಈ ಸಂದರ್ಭದಲ್ಲಿ ಸರ್ಕಾರವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು  ಅಗತ್ಯ ಪಡಿತರಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ. ಈ ಪಡಿತರ ವಿತರಣೆಯು ಸಮಾಜದ  ಕಟ್ಟಕಡೆಯ  ವ್ಯಕ್ತಿಗೂ ತಲುಪಬೇಕು.  ಹಳ್ಳಿಗಳಲ್ಲಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತ  ಬೆಲೆ ಸಿಗುತ್ತಿಲ್ಲ ಹಾಗೂ ಕೂಲಿಯೂ ಸಿಗದೆ ಜೀವನ ಕಷ್ಟವಾಗಿದೆ ಎಂದು ತಿಳಿಸಿದರು.
ಮಾಲೂರು  ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ವೈ.ನಂಜೇಗೌಡ ಮಾತನಾಡಿ ಮಾಲೂರು  ತಾಲ್ಲೂಕಿನಲ್ಲಿ 300ಕ್ಕೂ ಹೆಚ್ಚು ಹಳ್ಳಿಗಳಿದ್ದು, 94 ನ್ಯಾಯಬೆಲೆ ಅಂಗಡಿಗಳಿವೆ.  ಇದರಿಂದ ಪಡಿತರವನ್ನು ಪಡೆಯಲು 4 ರಿಂದ 5 ಕಿ.ಮೀ. ಹೋಗಬೇಕು.  ಆದ್ದರಿಂದ ಹೆಚ್ಚಿನ  ಜನಸಂಖ್ಯೆ ಇರುವ ಹಳ್ಳಿಗಳಿಗೆ ಹೋಗಿ ನ್ಯಾಯಬೆಲೆ ಅಂಗಡಿಯವರು ಪಡಿತರವನ್ನು ವಿತರಣೆ  ಮಾಡುವಂತೆ ವ್ಯವಸ್ಥೆ ಮಾಡಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಜಿಲ್ಲಾ  ಪಂಚಾಯತ್ ಅಧ್ಯಕ್ಷ  ಸಿ.ಎಸ್.ವೆಂಕಟೇಶ್ ಮಾತನಾಡಿ, ಮುಖ್ಯಮಂತ್ರಿಗಳ ಅನಿಲ  ಭಾಗ್ಯ ಯೋಜನೆಯಡಿಯಲ್ಲಿ ಪರಿಶಿಷ್ಠ ಜಾತಿ ಮತು ಪರಿಶಿಷ್ಠ ಪಂಗಡಗಳ ಫಲಾನುಭವಿಗಳಿಗೆ  ಗ್ಯಾಸ್ ಸ್ಟೌವ್ ಮತ್ತು ಸಿಲಿಂಡರ್‍ನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು,  ಜಿಲ್ಲೆಯಲ್ಲಿ ನೋಂದಣಿಯಾದ 800 ಫಲಾನುಭವಿಗಳಿಗೆ ಗ್ಯಾಸ್‍ಸ್ಟೌವ್ ಮತ್ತು ಸಿಲಿಂಡರ್  ವಿತರಣೆಯಾಗಿರುವುದಿಲ್ಲ, ಕೂಡಲೇ ಅವರ ಅರ್ಜಿಗಳನ್ನು ವಿಲೇವಾರಿ ಮಾಡಿ ಅರ್ಹ  ಫಲಾನಭವಿಗಳಿಗೆ ಸೌಲಭ್ಯ ವಿತರಣೆಯಾಗಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳಾದ  ಸಿ.ಸತ್ಯಭಾಮ ಮಾತನಾಡಿ, 2 ತಿಂಗಳ ಹಿಂದೆ ಜಿಲ್ಲೆಯ ಪಡಿತರ ವಿತರಣೆಯಲ್ಲಿ  ರಾಜ್ಯದಲ್ಲಿ ಜಿಲ್ಲೆಯೂ 2 ನೇ ಸ್ಥಾನದಲ್ಲಿತ್ತು. ಕರೋನಾ ಬಂದ ನಂತರ ಬೇಳೆ ಪೂರೈಕೆಯಲ್ಲಿ  ಸ್ವಲ್ಪ ಕೊರತೆಯಾಗಿದೆ.  ಲಾಕ್‍ಡೌನ್ ಜಾರಿಯಾದ ಅವಧಿಯಲ್ಲಿ ಜಿಲ್ಲೆಯಲ್ಲಿ 4000 ವಲಸೆ  ಕಾರ್ಮಿಕರಿಗೆ ಆಹಾರದ ಕೊರತೆ ಇರುವುದನ್ನು ಗಮನಿಸಿ ಜಿಲ್ಲಾಡಳಿತ ವತಿಯಿಂದ ಅವರಿಗೆ ಹಲವು  ದಿನಗಳ ಕಾಲ ಆಹಾರ ವಿತರಣೆ ಮಾಡಲಾಗಿದೆ.  ಪ್ರಸ್ತುತ ಜಿಲ್ಲೆಯಲ್ಲಿರುವ ಬಹುತೇಕ  ಕೈಗಾರಿಕೆಗಳು ಪ್ರಾರಂಭವಾಗಿದ್ದು, ಕಾರ್ಮಿಕರ ಆಹಾರ ಮತ್ತು ವಸತಿ ಸೌಲಭ್ಯವನ್ನು  ಕೈಗಾರಿಕಾ ಮಾಲೀಕರು ನೋಡಿಕೊಳ್ಳುವಂತೆ ವ್ಯವಸ್ಥೆ ಮಾಡಿಸಲಾಗಿದೆ ಎಂದು ಮಾಹಿತಿ  ನೀಡಿದರು. ಕೆ.ಗೋಪಾಲಯ್ಯ   ಗದ್ದೆಕಣ್ಣೂರಿನಲ್ಲಿರುವ ಆಹಾರ ದಾಸ್ತಾನು ಮಳಿಗೆಗೆ ಭೇಟಿ ನೀಡಿ ದಾಸ್ತಾನು ಗುಣಮಟ್ಟ,  ತೂಕ ಮತ್ತು ಅಳತೆಯನ್ನು ಪರಿಶೀಲಿಸಿದರು.
ಸಭೆಯಲ್ಲಿ ಅಬಕಾರಿ  ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ನಾಗೇಶ್, ಶ್ರೀನಿವಾಸಪುರ ವಿಧಾನಸಭಾ  ಕ್ಷೇತ್ರದ ಶಾಸಕ ಕೆ.ಆರ್. ರಮೇಶ್‍ಕುಮಾರ್, ವಿಧಾನ ಪರಿಷತ್ ಸದಸ್ಯ ನಜೀರ್  ಅಹ್ಮದ್, ತೂಪಲ್ಲಿ ಆರ್.ಚೌಡರೆಡ್ಡಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಯಶೋಧಮ್ಮ  ಕೃಷ್ಣಮೂರ್ತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಹೆಚ್.ವಿ.  ದರ್ಶನ್, ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.