ಸಿಎಂ ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆಯಾಗಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ಸುವರ್ಣಸೌಧ 12: ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತವಾಗಿಲ್ಲ, ರಾಜ್ಯದಲ್ಲಿ 2023-24 ರಲ್ಲಿ ಅಭಿವೃದ್ಧಿ ವೆಚ್ಚಗಳಿಗಾಗಿ 2,14,292 ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಇಂದು ವಿಧಾನ ಪರಿಷತ್ತಿನಲ್ಲಿ ಸದಸ್ಯ ಕೆ. ಎ. ತಿಪ್ಪೇಸ್ವಾಮಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.
ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಸದ್ರಿ ಯೋಜನೆಗಳಿಗೆ ಆಯವ್ಯಯ ದಲ್ಲಿ 52,009 ಕೋಟಿ ರೂ ಗಳನ್ನು ಒದಗಿಸಿದೆ.
ರಾಜ್ಯ ಸರ್ಕಾರವು 2023-24 ರಲ್ಲಿ 90,280 ಕೋಟಿ ರೂ ಗಳನ್ನು ಸಾಲ ಪಡೆದಿದ್ದು, ರಾಜ್ಯದ ವಿತ್ತೀಯ ಕೊರತೆ 2.6ಅ ಇದ್ದು, ರಾಜ್ಯ ಸರ್ಕಾರವು ಪಡೆದ ಒಟ್ಟು ಸಾಲ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಮಾನದಂಡ ಮತ್ತು ಕೇಂದ್ರ ಸರ್ಕಾರ ನಿಗಧಿಪಡಿಸಿರುವ ಸಾಲಮಿತಿಗೆ ಒಳಪಟ್ಟಿದೆ ಎಂದರು.
ರಾಜ್ಯ ಸರ್ಕಾರವು ರಾಜಸ್ವ ಹಾಗು ಬಂಡವಾಳ ಸ್ವೀಕೃತಿಗಳಿಂದ ಮತ್ತು ಕೇಂದ್ರ ಸರ್ಕಾರ ನಿಗದಿಪಡಿಸುವ ಮಿತಿಯೊಳಗೆ ಸಾಲವನ್ನು ಪಡೆಯುವ ಮೂಲಕ ಆಯವ್ಯಯದಲ್ಲಿ ಅಂದಾಜಿಸಿರುವ ವೆಚ್ಚವನ್ನು ಭರಿಸುತ್ತದೆ. ಈ ಸ್ವೀಕೃತಿಗಳನ್ನು ಮೀರಿ ಈವರೆಗೂ ಯಾವುದೇ ವೆಚ್ಚದ ಹೊರೆ ರಾಜ್ಯ ಸರ್ಕಾರಕ್ಕೆ ಉಂಟಾಗಿರುವುದಿಲ್ಲ ಎಂದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಅಭಿವೃದ್ಧಿ ಕುಂಠಿತವಾಗಿದೆ ಎಂಬ ವಿರೋಧ ಪಕ್ಷಗಳ ಆರೋಪ ಸುಳ್ಳು ಹಾಗೂ ಸತ್ಯಕ್ಕೆ ದೂರವಾಗಿದ್ದು ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದರು.
*******
ಪಿಡಿಓ ಹುದ್ದೆಗಳ ನೇಮಕ ಸಮಗ್ರ ತನಿಖೆಗೆ
ತ್ರಿಸದಸ್ಯರ ಸಮಿತಿ ವರದಿ ಆಧರಿಸಿ ಕ್ರಮ: ಸಿಎಂ
ಸುವರ್ಣಸೌಧ 12: ಕಲ್ಯಾಣ ಕರ್ನಾಟಕ ಭಾಗದ 97 ಪಿಡಿಓ ಹುದ್ದೆಗಳ ನೇಮಕಾತಿಗಾಗಿ ಸಿಂಧನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪರೀಕ್ಷೆಯ ವೇಳೆ ಪ್ರಶ್ನೆಪತ್ರಿಕೆ ವಿತರಿಸಲು ಅರ್ಧಗಂಟೆ ತಡವಾಗಿರುವ ಕುರಿತು ಅಭ್ಯರ್ಥಿಗಳು ನಡೆಸಿದ ಪ್ರತಿಭಟನೆ ಕುರಿತಂತೆ ಸಮಗ್ರ ತನಿಖೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗವು 3 ಸದಸ್ಯರ ಉಪ ಸಮಿತಿಯನ್ನು ರಚಿಸಿದ್ದು, ಸಮಿತಿ ಸಲ್ಲಿಸುವ ಅಂತಿಮ ವರದಿಯನ್ನು ಪರೀಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಸದಸ್ಯ ಶಶಿಲ್ ನಮೋಶಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದರು. ಕಲ್ಯಾಣ ಕರ್ನಾಟಕ ಭಾಗದ 97 ಪಿಡಿಒ ಹುದ್ದೆಗಳ ಪರೀಕ್ಷೆಯನ್ನು ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದು, ಈ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿಲ್ಲ ಮತ್ತು ಪ್ರಶ್ನೆಪತ್ರಿಕೆ ವಿತರಿಸಲು ವಿಳಂಬವಾಗಿಲ್ಲ. ಈ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಈಗಾಗಲೇ ಆಯೋಗದಲ್ಲಿ ಉಪ ಸಮಿತಿಯನ್ನು ರಚಿಸಲಾಗಿದ್ದು, ವರದಿ ಸ್ವೀಕೃತವಾದ ನಂತರ ಪರಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.