ವಾಷಿಂಗ್ಟನ್, ಏ 2, ಕೊರೊನಾ ಸೋಂಕು ಪ್ರಕರಣಗಳು ಅಮೆರಿಕದಲ್ಲಿ ಹೆಚ್ಚುತ್ತಿದ್ದರೂ ದೇಶವ್ಯಾಪಿಯಾಗಿ ಮನೆಯಲ್ಲೇ ಇರುವಂತೆ ಆದೇಶ ನೀಡುವುದಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.ಶ್ವೇತಭವನದ ಕೊರೊನಾ ಕಾರ್ಯಪಡೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಪ್ರದೇಶಗಳಲ್ಲಿ ಸೋಂಕಿನ ಪ್ರಮಾಣ ಭಿನ್ನವಾಗಿದ್ದು ದೇಶವ್ಯಾಪಿಯಾಗಿ ಒಂದೇ ನಿರ್ಣಯ ಪ್ರಕಟಿಸಲಾಗುವುದಿಲ್ಲ ಎಂದರು. ಫ್ಲಾರಿಡಾ ಗವರ್ನರ್ ರಾನ್ ಡಿ ಸಾಂಟಿಸ್ ಮನೆಯಲ್ಲೇ ಇರಿ, ಸಾಧ್ಯವಾದಷ್ಟು ಓಡಾಟ ಕಡಿಮೆ ಮಾಡಿ ಎನ್ನುವಂತಹ ಆದೇಶ ನೀಡಿದ್ದಾರೆ, ಆದರೆ ಸೋಂಕಿನಿಂದ ಹೆಚ್ಚು ತೊಂದರೆಯಾಗದ ಪ್ರದೇಶಗಳೂ ಇವೆ ಎಂದರು. ಹೀಗಾಗಿ ಪ್ರದೇಶಾವಾರು ಅಗತ್ಯಗಳಿಗೆ ತಕ್ಕಂತೆ ನಿಯಮ ರೂಪಿಸಬೇಕಿದ್ದು ಎಲ್ಲರನ್ನೂ ಸ್ತಬ್ಧಗೊಳಿಸುವುದು ಸರಿಯಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಇದೀಗ ಅಮೆರಿಕದಲ್ಲಿಯೇ ಅತಿ ಹೆಚ್ಚು ಸುಮಾರು ಎರಡು ಲಕ್ಷ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು 4757 ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಬುಧವಾರ ಪ್ರಕಟಿಸಿರುವ ವರದಿ ತಿಳಿಸಿದೆ.