ಲೂಸನ್ (ಸ್ವಿಜರ್ಲೆಂಡ್), ಏ 30,ಆತಿಥೇಯ ನಗರದ ಒಪ್ಪಂದದಲ್ಲಿ ಪ್ರಸ್ತಾಪಿಸಿರುವಂತೆ ಆತಿಥೇಯ ಶುಲ್ಕವನ್ನು ಪಾವತಿಸಲು ವಿಫಲ ಯತ್ನಗಳು ನಡೆದ ಬಳಿಕ ಭಾರತದ ಒಪ್ಪಂದವನ್ನು ವಜಾಗೊಳಿಸುವುದನ್ನು ಬಿಟ್ಟು ಸಂಸ್ಥೆಗೆ ಅನ್ಯ ಆಯ್ಕೆಗಳು ಇಲ್ಲ ಎಂದು ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ) ಗುರುವಾರ ಸ್ಪಷ್ಟಪಡಿಸಿದೆ. ಐಬಾ ಮಂಗಳವಾರ ಬೆಲ್ಗ್ರೇಡ್ ಅನ್ನು 2021 ಐಬಾ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಆತಿಥೇಯ ನಗರ ಎಂದು ಘೋಷಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಭಾರತ ಬಾಕ್ಸಿಂಗ್ ಒಕ್ಕೂಟ (ಬಿಎಫ್‌ಐ), ಈ ನಿರ್ಧಾರವನ್ನು 'ತರಾತುರಿಯಲ್ಲಿ' ತೆಗೆದುಕೊಳ್ಳಲಾಗಿದೆ ಎಂದು ಮಂಗಳವಾರ ಹೇಳಿತ್ತು. ಇದರ ಬೆನ್ನಲ್ಲೇ ಐಬಾ ಈ ಹೇಳಿಕೆ ನೀಡಿದೆ. '' 2017ರಲ್ಲಿ ಟೂರ್ನಿಗೆ ಭಾರತ ಆತಿಥ್ಯ ವಹಿಸಿತ್ತು. 2019ರ ಜನವರಿಯಲ್ಲಿ ಆತಿಥೇಯ ನಗರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದ ಅನ್ವಯ ಆತಿಥೇಯ ಶುಲ್ಕದ ಅರ್ಧದಷ್ಟು ಮೊತ್ತವನ್ನು 2019ರ ಡಿಸೆಂಬರ್ 1ರಂದು ಪಾವತಿಸಬೇಕಿತ್ತು. ಆದರೆ ಭಾರತ (ಹೊಸದಿಲ್ಲಿ) ತನ್ನ ಜವಾಬ್ದಾರಿಗಳನ್ನು ನಿರ್ವಹಿಸದ ಕಾರಣ ಆತಿಥೇಯ ನಗರ ಒಪ್ಪಂದದಲ್ಲಿ ಉಲ್ಲೇಖಿಸಿರುವಂತೆ ಆತಿಥೇಯ ಶುಲ್ಕವನ್ನು ಪಾವತಿಸಲು ಐಬಾ ಹಲವು ಬಾರಿ ಕೋರಿದ್ದ ಹೊರತಾಗಿಯೂ ಮತ್ತು ಅನೇಕ ಆಯ್ಕೆಗಳನ್ನು ನೀಡಿದ ನಂತರವೂ ಹಣ ಪಾವತಿಸಿಲ್ಲ. ಹೀಗಾಗಿ ಐಬಾಗೆ 2020ರ ಏಪ್ರಿಲ್ ನಲ್ಲಿ ಒಪ್ಪಂದವನ್ನು ವಜಾಗೊಳಿಸುವುದನ್ನು ಬಿಟ್ಟು ಬೇರೆ ಮಾರ್ಗಗಳಿಲ್ಲ, '' ಎಂದು ಐಬಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.