ಬೆಂಗಳೂರು, ಸೆ 13 ನ್ಯಾಯಾಲಯದಲ್ಲಿ ನಮ್ಮ ಪ್ರಕರಣ ವಿಚಾರಣೆ ಬರುವ ಸಾಧ್ಯತೆಯಿದ್ದು ನಮ್ಮೆಲ್ಲರಿಗೂ ನ್ಯಾಯ ಸಿಗುತ್ತದೆ ಎಂದು ಭರವಸೆ ಇದೆ ಎಂದು ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲರು ಇಂದು ಸಭೆ ಸೇರುವ ಬಗ್ಗೆ ಯಾವ ಮಾಹಿತಿಯೂ ಇರಲಿಲ್ಲ. ನ್ಯಾಯಾಲಯದಲ್ಲಿ ನಮ್ಮಪ್ರಕರಣ ವಿಚಾರಣೆಗೆ ಬರುವುದು ವಿಳಂಬವಾಗುತ್ತಿರುವ ಬಗ್ಗೆ ಮಾತ್ರ ಆತಂಕವಿದೆ. ಸೆಪ್ಟಂಬರ್ 16ರಂದು ಪ್ರಕರಣ ವಿಚಾರಣೆಗೆ ಬರುವ ಸಾಧ್ಯತೆ ಇದೆ. ನಮಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದರು. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಕ್ಕಿ ಮತ್ತೆ ಚುನಾವಣೆಗೆ ನಿಲ್ಲುವ ಭರವಸೆ ಇದೆ. ಅದೇ ಭರವಸೆಯಲ್ಲಿ ಕ್ಷೇತ್ರದ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿವೆ. ಕ್ಷೇತ್ರದ ಅಭಿವೃದ್ದಿ ಕೆಲಸ ಕಾರ್ಯಗಳಿಗೆ ಸಾಕಷ್ಟು ಅನುದಾನ ಪಡೆಯಲಾಗಿದೆ. ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೆ ಸಿಎಂ ಯಡಿಯೂರಪ್ಪ ಕೂಡ ಯಾವುದೇ ಭರವಸೆ ನೀಡಲು ಸಾಧ್ಯವಿಲ್ಲ ಎಂದು ಪ್ರತಾಪಗೌಡ ಪಾಟೀಲ್ ನುಡಿದರು. 14 ತಿಂಗಳು ಕಾಲ ನಡೆದಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಪ್ರತಾಪಗೌಡ ಪಾಟೀಲ್ ಸೇರಿದಂತೆ ಒಟ್ಟು 17 ಎರಡೂ ಪಕ್ಷಗಳ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ಮೈತ್ರಿ ಸರ್ಕಾರ ಮುರಿದು ಬಿದ್ದಿತ್ತು. ಇದರ ಬೆನ್ನಲ್ಲೆ ಆಗಿನ ಸ್ಪೀಕರ್ ರಮೇಶ್ ಕುಮಾರ್ ಅವರು 17 ಅತೃಪ್ತ ಶಾಸಕರನ್ನು ಅನರ್ಹತೆಗೊಳಿಸಿ ಆದೇಶ ಹೊರಡಿಸಿದ್ದರು. ಇದರಿಂದ ಅಸಮಾಧಾನಿತರಾದ ಪ್ರತಾಪಗೌಡ ಪಾಟೀಲ್, ಎಚ್. ವಿಶ್ವನಾಥ್, ಎಂ.ಟಿ.ಬಿ ನಾಗರಾಜ್ ಸೇರಿದಂತೆ ಹಲವರು ಅನರ್ಹಗೊಳಿಸಿದ ಸ್ಪೀಕರ್ ಆದೇಶವನ್ನು ಪರಿಶೀಲಿಸುವಂತೆ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.