ವ್ಯಂಗ್ಯಚಿತ್ರಗಳ ಹಿಂದೆ ಸಮಾಜಕ್ಕೊಂದು ಸಂದೇಶವಿರುತ್ತದೆ : ಎಚ್‌. ಎಸ್‌. ವಿಶ್ವನಾಥ

ವ್ಯಂಗ್ಯಚಿತ್ರಗಳ ಹಿಂದೆ ಸಮಾಜಕ್ಕೊಂದು ಸಂದೇಶವಿರುತ್ತದೆ : ಎಚ್‌. ಎಸ್‌. ವಿಶ್ವನಾಥ There is a message for society behind cartoons: H. S. Vishwanath

ಲೋಕದರ್ಶನ ವರದಿ 

ಬೆಳಗಾವಿ 13: ವ್ಯಂಗ್ಯಚಿತ್ರಗಳು ಮೇಲ್ನೋಟಕ್ಕೆ ನಗುವನ್ನು ತರೆಸಿದರೂ ಒಳ ಅರ್ಥದಲ್ಲಿ ಸಮಾಜಕ್ಕೆ ನೀಡುವ ಸಂದೇಶಗಳಿರುತ್ತವೆ ಅಲ್ಲದೇ ಆಧ್ಯಾತ್ಮದ ಅರ್ಥವನ್ನು ಹೊಂದಿರುತ್ತವೆ.  ಒಂದು ತರಹದಲ್ಲಿ ವ್ಯಂಗ್ಯಚಿತ್ರಗಳು ಹೂರ್ಣ ತುಂಬಿದ ಹೋಳಿಗೆಗಳಿದ್ದಂತೆ. ನಿಜವಾದ ಸಿಹಿ ಒಳಗಿರುತ್ತದೆ ಎಂದು ಖ್ಯಾತ ವ್ಯಂಗ್ಯಚಿತ್ರಕಾರ ಬೆಂಗಳೂರಿನ ಎಚ್‌.ಎಸ್‌. ವಿಶ್ವನಾಥ ಇಂದಿಲ್ಲಿ ಹೇಳಿದರು.  

ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ  ಇದೇ ದಿನಾಂಕ 11 ಶನಿವಾರದಂದು ಸಾ. 4-30 ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ  ಎಚ್‌. ಎಸ್‌. ವಿಶ್ವನಾಥ ಅವರ “ವ್ಯಂಗ್ಯ ಚಿತ್ರ ಪ್ರದರ್ಶನ ಮತ್ತು ನಗೆಮಾತು” ಕಾರ‌್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವ್ಯಂಗ್ಯಚಿತ್ರ ಕಲಾವಿದ ಎಚ್‌. ಎಸ್‌. ವಿಶ್ವನಾಥ ಅವರು ಮೇಲಿನಂತೆ ಅಭಿಪ್ರಾಯ ಪಟ್ಟರು. 

ಮುಂದೆ ಮಾತನಾಡುತ್ತ ವಿಶ್ವನಾಥ ಅವರು ಭಗವಂತ ಮನುಷ್ಯನನ್ನು ಸೃಷ್ಟಿಸಿದ, ಮಾನವ ತನ್ನ ನಿತ್ಯ ಜೀವನದಲ್ಲಿ ನಡೆಯುವ ದುಃಖ, ನೋವುಗಳನ್ನು ಮರೆಯಲು ಹಾಸ್ಯವನ್ನು ಸೃಷ್ಟಿಸಿಕೊಂಡ. ಸಂಸಾರ ಸಾಗರವನ್ನು ಸುಲಭವಾಗಿ ದಾಟಲು ಕಂಡುಕೊಂಡ ಸರಳ ಉಪಾವೆಂದರೆ ಈ ಹಾಸ್ಯ. ಆದ್ದರಿಂದ ಹಾಸ್ಯಕ್ಕೆ ಒಂದು ಘನತೆ, ಗೌರವ, ಗಾಂಭೀರ‌್ಯವಿದೆ ಎಂದು ಹೇಳಿದರು.

ವಿಶ್ವನಾಥ ಅವರ ಮಾತು ಕೇಳುಗರ ನಗೆಯನ್ನು ಮುಗಿಲು ಮುಟ್ಟಿಸಿತ್ತು. ಸುಮಾರು ಮುವತ್ತು ನಿಮಿಷಗಳ ಕಾಲ ಮಾತನಾಡಿದ ಅವರು ಒಂದು ನಿಮಿಷ ಕೂಡ ವ್ಯರ್ಥವಾಗದಂತೆ ಜನರನ್ನು ನಗೆಸುವಲ್ಲಿ ಯಶಸ್ವಿಯಾದರು. 

ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ನ್ಯಾಯವಾದಿಗಳಾದ ಎಸ್‌. ಎಂ. ಕುಲಕರ್ಣಿಯವರು ಮಾತನಾಡುತ್ತ ನನಗೀಗ ಎಂಬತ್ತೇಳು ವರ್ಷ. ಮನುಷ್ಯನ ಆಯುಸ್ಸು ಹೆಚ್ಚಾಗಬೇಕಾದರೆ  ನಗುನಗುತ್ತಿರಬೇಕು. ಸಕಾರಾತ್ಮಕ ವಿಚಾರಗಳನ್ನು ಮಾಡಬೇಕು. ನನ್ನನ್ನು ಮನಸ್ಸು ಬಿಚ್ಚಿ ನಗುವಂತೆ ಮಾಡಿದ ಇಂದಿನ ಕಾರ‌್ಯಕ್ರಮ ನನ್ನ ಆಯುಸ್ಸನ್ನು ಹೆಚ್ಚಿಸಿದೆ ಎಂದು ಹೇಳಿದರು.  

ಪ್ರಾಸ್ತಾವಿಕ ನುಡಿಗಳನ್ನಾಡಿದ ಗುಂಡೇನಟ್ಟಿ ಮಧುಕರ ನೂರಾರು ಪುಟಗಳ ಸಾಹಿತ್ಯವನ್ನು ಒಂದು ವ್ಯಂಗ್ಯಚಿತ್ರ ಹೇಳುತ್ತದೆ ಎಂದು ಹೇಳಿದರು. ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದ ನಟ, ನಿರ್ದೇಶಕ ಶರಣಗೌಡ ಪಾಟೀಲ ಅವರು ಮಾತನಾಡುತ್ತ ಶ್ರದ್ಧೆಯಿಂದ ಮಾಡಿದ ಕೆಲಸಕ್ಕೆ ಯಶಸ್ಸಿದೆ ಎಂಬುದಕ್ಕೆ ಸತತವಾಗಿ 12 ವರ್ಷ ಪುರೈಸಿ 13 ವರ್ಷಕ್ಕೆ ಕಾಲಿಡುತ್ತಿರುವ ಹಾಸ್ಯಕೂಟವೇ ಸಾಕ್ಷಿ ಎಂದು ಪ್ರಶಂಸಿಸಿದರು. 

ಇದೇ ಸಂದರ್ಭದಲ್ಲಿ ಕಲಾವಿದ ಎಚ್‌. ಎಸ್‌. ವಿಶ್ವನಾಥ ಅವರನ್ನು ಶಾಲು ಹೊದಿಸಿ, ಪೇಟ್ ಹಾಕಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಹಾಸ್ಯಕೂಟ ಕಲಾವಿದ ಎಂ. ಬಿ. ಹೊಸಳ್ಳಿ ಅವರ ಹುಟ್ಟುಹಬ್ಬನ್ನು ಆಚರಿಸಲಾಯಿತು. 

ಅರವಿಂದ ಹುನಗುಂದ ಉಪಸ್ಥಿತರಿದ್ದರು. ಹಿರಿಯ ನ್ಯಾಯವಾದಿ ಎಸ್‌.ಎಂ. ಕುಲಕರ್ಣಿಯವರು ಕಲಾವಿದ ವಿಶ್ವನಾಥ ಅವರ ವ್ಯಂಗ್ಯಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದರು. ಚಿತ್ರಕಲಾ ಪ್ರದರ್ಶನದ ನೇತೃತ್ವವನ್ನು ಕಲಾವಿದ ವಿಶ್ವನಾಥ ಗುಗ್ಗರಿಯವರು ವಹಿಸಿದ್ದರು. ಎಂ.ಬಿ. ಹೊಸಳ್ಳಿ ನಿರೂಪಿಸಿದರು. ತಾನಾಜಿ ಪರಿಚಯಿಸಿದರು.