ಇಸ್ಲಮಾಬಾದ್, ಆ17 ಪಾಕಿಸ್ತಾನ ದೇಶದಲ್ಲಿನ ಬದುಕು ಮತ್ತು ಪಾಕ್ ಕ್ರಿಕೆಟ್ ಮಂಡಳಿಯಲ್ಲಿನ ಸುಮಾರು ಐದು ವರ್ಷಗಳ ಕಾಲ ಕಳೆದ ಅನುಭವದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್ ಬಾಯ್ಬಿಟ್ಟಿದ್ದಾರೆ.
ಪಿಸಿಬಿಯು ಫ್ಲವರ್ ಜೊತೆಗಿನ ಒಪ್ಪಂದ ಮುಂದುವರಿಸದಿರಲು ನಿರ್ಧರಿಸಿದ ಬಳಿಕ ಫ್ಲವರ್, ಪಾಕ್ ಬಗ್ಗೆ ಮೊದಲ ಬಾರಿ ತುಟಿ ಬಿಚ್ಚಿದ್ದು, ಸ್ನೇಹಿ ಜನರು ಪಾಕಿಸ್ತಾನ ದೇಶದಲ್ಲಿರುವುದು ಒಳ್ಳೆಯ ವಿಚಾರ. ಹಾಗೇ ಸ್ವಾತಂತ್ರ್ಯದ ಕೊರತೆ ಮತ್ತು ಭದ್ರತೆ ವಿಚಾರ ಪಾಕಿಸ್ತಾನದಲ್ಲಿ ಬದುಕುವ ನಿಟ್ಟಿನಲ್ಲಿ ಇರುವ ತುಂಬಾನೇ ನಿರಾಶಾದಾಯಕವಾದ ಸಂಗತಿ ಎಂದು ಹೇಳಿದರು.
2014ರಿಂದಲೂ ಪಾಕಿಸ್ತಾನ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ಫ್ಲವರ್ ಅವರೊಂದಿಗಿನ ಒಪ್ಪಂದವನ್ನು ನವೀಕರಿಸುವ ಜತೆಗೆ ಇಡೀ ಕೋಚಿಂಗ್ ವಿಭಾಗ ಮತ್ತು ಬೆಂಬಲ ಸಿಬ್ಬಂದಿ ವರ್ಗವನ್ನು ಬದಲಾಯಿಸಲು ಪಿಸಿಬಿ ಬಯಸಿದೆ. 2019ರ ವಿಶ್ವಕಪ್ನಲ್ಲಿ ಪಾಕ್ ತಂಡ ಸೆಮಿಫೈನಲ್ ಪ್ರವೇಶಿಸಲು ವಿಫಲವಾದ ಕಾರಣಕ್ಕೆ ಪಿಸಿಬಿ ಈ ನಿರ್ಧಾರ ತೆಗೆದುಕೊಂಡಿದೆ.
ಸಂದರ್ಶನವೊಂದರಲ್ಲಿ ಪಾಕಿಸ್ತಾನದಲ್ಲಿ ಬದುಕಲು ನಿರಾಶಾದಾಯಕ ವಿಚಾರವೇನು ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಭದ್ರತೆಯ ವಿಷಯ ಮತ್ತು ಸ್ವತಂತ್ರದ ಕೊರತೆ' ಇದೆ ಎಂದು ಬಹಿರಂಗ ಪಡಿಸಿದ್ದಾರೆ. 2009ರಲ್ಲಿ ಶ್ರೀಲಂಕಾ ಆಟಗಾರರಿದ್ದ ಬಸ್ನ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಬಳಿಕ ಕೆಲವೇ ಕೆಲವು ಅಂತಾರಾಷ್ಟ್ರೀಯ ತಂಡಗಳು ಮಾತ್ರ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿವೆ.
ಪಿಸಿಬಿ ಈಗ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಪಾಕ್ನಲ್ಲಿ ನಡೆಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ತಂಡ ಭಾರತದ ವಿರುದ್ಧ ಗೆಲುವು ಸಾಧಿಸಿದ್ದು ಆ ತಂಡದ ಅತ್ಯುತ್ತಮ ಸಾಧನೆ ಎಂದು ಪ್ರತಿಕ್ರಿಯಿಸಿದರು.