ಬೆಂಗಳೂರು, ಸೆ 22 ಕರ್ನಾಟಕಕ್ಕೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಹೇಳಿದ್ದಾರೆ.
ಉಪಚುನಾವಣೆಗೆ ಪಕ್ಷ ಸಂಘಟನೆ ಕುರಿತು ರಾಜ್ಯದ ಬಿಜೆಪಿ ನಾಯಕರ ಜೊತೆ ಚರ್ಚೆ, ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ನಿರ್ಧಾರದ ಮಹತ್ವ ಕುರಿತ ಉಪನ್ಯಾಸ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಜೆ.ಪಿ.ನಡ್ಡಾ ಭಾನುವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಶಾಸಕರಾದ ಎಸ್.ಆರ್ ವಿಶ್ವನಾಥ್, ಪಕ್ಷದ ನೂರಾರು ಕಾರ್ಯಕರ್ತರು ಅವರನ್ನು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಜೆ.ಪಿ.ನಡ್ಡಾ, ಕೆಂಪೇಗೌಡರ ವೀರಭೂಮಿಗೆ ನಮನಗಳನ್ನು ಸಲ್ಲಿಸಿ ತಮ್ಮನ್ನು ಸ್ವಾಗತಿಸಲು ಹೆಚ್ಚು ಉತ್ಸಾಹದಲ್ಲಿ ಕಾರ್ಯಕರ್ತರು ಸೇರಿದ್ದು ಪಕ್ಷ ಸಂಘಟನೆಗೆ ಹೆಚ್ಚು ಆದ್ಯತೆ ನೀಡುವಂತೆ ಕರೆ ನೀಡಿದರು. ಕರ್ನಾಟಕ ಮುಂದೆ ಒಳ್ಳೆಯ ದಿನಗಳನ್ನು ಕಾಣಲಿದೆ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ , ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಸಹಾಯ ಮಾಡಿದವರನ್ನು ಬಿಡಲು ಸಾಧ್ಯವೇ ಇಲ್ಲ. ಸುಪ್ರೀಂಕೋರ್ಟ್ನಲ್ಲಿ ಸೋಮವಾರ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯಲಿದೆ. ನ್ಯಾಯಾಲಯ ತೀಪು ಪ್ರಕಟಿಸಿದ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಜೆ.ಪಿ.ನಡ್ಡಾ ಸ್ವಾಗತಕ್ಕೆ ಆರ್.ಅಶೋಕ್ ವಿಮಾನ ನಿಲ್ದಾಣಕ್ಕೆ ಬಂದಿದ್ದರಾದರೂ, ನಡ್ಡಾ ಆಗಮನ ತಡವಾದ ಹಿನ್ನೆಲೆಯಲ್ಲಿ ಅವರು ಹಿಂದಿರುಗಿದರು.