ನವದೆಹಲಿ, ಮೇ 3,ವೆಸ್ಟ್ ಇಂಡೀಸ್ ತಂಡದ ದೈತ್ಯ ಆಲ್‌ರೌಂಡರ್ ಆಂಡ್ರೆ ರಸೆಲ್ ತಮ್ಮ ವೃತ್ತಿ ಜೀವನದ ಕಟ್ಟ ಕಡೆಯ ಪಂದ್ಯವನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರವಾಗಿ ಆಡಬೇಕು ಎಂದು ಹೇಳಿಕೊಂಡಿದ್ದಾರೆ. ಕೆಕೆಆರ್ ತಂಡದ ಆನ್‌ಲೈನ್ ಕಾರ್ಯಕ್ರಮ 'ನೈಟ್ಸ್ ಅನ್‌ಪ್ಲಗ್ಡ್'ದಲ್ಲಿ ಮಾತನಾಡಿದ 32 ವರ್ಷ ಜಮೈಕನ್ ತಾರೆ ರಸೆಲ್, ಐಪಿಎಲ್ ಟೂರ್ನಿ ನೀಡಿದಷ್ಟು ರೋಮಾಂಚನ ಬೇರೆಲ್ಲೂ ತಮಗೆ ಸಿಕ್ಕಿಲ್ಲ ಎಂದಿದ್ದಾರೆ. ಅಂದಹಾಗೆ ಮಾರ್ಚ್ 29ರಂದು ಶುರುವಾಗಬೇಕಿದ್ದ ಐಪಿಎಲ್ 2020 ಟೂರ್ನಿಯು ಕೊರೊನಾ ವೈರಸ್ ಕಾರಣ ಅನಿರ್ದಿಷ್ಟ ಅವಧಿಗೆ ಮುಂದೂಡಲ್ಪಟ್ಟಿದೆ.
"ಒಂದು ಸತ್ಯ ಸಂಗತಿಯನ್ನು ಒಪ್ಪಿಕೊಳ್ಳುತ್ತೇನೆ. ಐಪಿಎಲ್‌ನಲ್ಲಿ ಸಿಕ್ಕಷ್ಟು ರೋಮಾಂಚನ ನನಗೆ ಬೇರೆಲ್ಲೂ ಸಿಕ್ಕಿಲ್ಲ. ಅಂದಹಾಗೆ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್)ನಲ್ಲೂ ಅಂಥದ್ದೇ ಅನುಭವವಾಗುತ್ತದೆ. ಆದರೆ, ಐಪಿಎಲ್ ಮತ್ತು ಈಡನ್ ಗಾರ್ಡನ್ಸ್‌ಗೆ ಹೋಲಿಕೆ ಮಾಡಲು ಖಂಡಿತಾ ಸಾಧ್ಯವಿಲ್ಲ. ನನಗೆ ಸಿಗುವ ಸ್ವಾಗತ ಮತ್ತು ಪ್ರೀತಿ ಬೇರೆಲ್ಲೂ ಸಿಗುವುದಿಲ್ಲ. ಇದರಿಂದ ನನ್ನ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದು ಉತ್ತಮ ರೀತಿಯ ಒತ್ತಡ," ಎಂದು ರಸೆಲ್ ತಮ್ಮ ಮನದಾಳ ತೆರೆದಿಟ್ಟಿದ್ದಾರೆ.
ಐಪಿಎಲ್‌ನಲ್ಲಿ ಸಿಗುವ ಪ್ರೇಕ್ಷಕರ ಬೆಂಬಲ ಬೇರೆಲ್ಲೂ ಸಿಗರಾರದು ಎಂದಿರುವ ರಸೆಲ್, ಇದೇ ವೇಳೆ ತಾವು ನಿವೃತ್ತಿ ಹೊಂದುವುದಾದರೆ ಅದು ಕೆಕೆಆರ್ ತಂಡದಲ್ಲಿ ಎಂದು ಹೇಳಿಕೊಂಡಿದ್ದಾರೆ. "ಇದು ನನ್ನ ಕೊನೆಯ ಐಪಿಎಲ್ ಎಂದು ನನಗೆ ಅನಿಸುವವರೆಗೂ ನಾನು ಕೆಕೆಆರ್ ತಂಡದಲ್ಲೇ ಆಡಲು ಬಯಸುತ್ತೇನೆ. ಕಳೆದ ಆರು ಆವೃತ್ತಿಗಳಲ್ಲಿ ನಾನು ಕೆಕೆಆರ್ ಪರ ಆಡಿದ್ದೇನೆ. ತಂಡದೊಂದಿಗೆ ಪ್ರತಿಯೊಂದು ಕ್ಷಣವನ್ನು ಆನಂದಿಸಿದ್ದೇನೆ. ಒಂದೆರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿ ಮೂರನೇ ಪಂದ್ಯದಲ್ಲಿ ಕಣಕ್ಕಿಳಿದಾಗಲೂ ನನಗೆ ಪ್ರೇಕ್ಷಕರಿಂದ ಅದೇ ರೀತಿಯ ಬೆಂಬಲ ಸಿಗುತ್ತದೆ. ಇದನ್ನು ಸದಾ ಸ್ವಾಗತಿಸುತ್ತೇನೆ," ಎಂದು ರಸೆಲ್ ವಿವರಿಸಿದ್ದಾರೆ.