ಬೆಂಗಳೂರು ಏ 9, ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಇನ್ನು 15 ದಿನ ಲಾಕ್ ಡೌನ್ ವಿಸ್ತರಣೆ ಒಳಿತು ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಪ್ರಧಾನಿ ಕೈಗೊಳ್ಳುವ ನಿರ್ಧಾರದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ . ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದೆ 14ರ ಬಳಿಕ ರಾಜ್ಯದ್ಯಂತ ಲೌಕ್ ಡೌನ್ ಮುಂದುವರೆಸಬೇಕಾ ಅಥವಾ ಕೊರೊನಾ ಹಾಟ್ ಸ್ಪಾಟ್ ಜಿಲ್ಲೆಗಳಲ್ಲಿ ಮುಂದುವರೆಸಬೇಕಾ ಎಂಬ ಬಗ್ಗೆ ಮುಖ್ಯಮಂತ್ರಿ ಸಚಿವರೊಂದಿಗೆ ಚರ್ಚೆ ನಡೆಸಿದರು.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಅವರು ಪರೋಕ್ಷವಾಗಿ ಲಾಕ್ ಡೌನ್ ವಿಸ್ತರಣೆ ಸುಳಿವು ನೀಡಿದರು. ಲಾಕ್ ಡೌನ್ ಒಂದು ಹಂತಕ್ಕೆ ಬರಬೇಕಾದರೆ, ಏ.14ರವರೆಗೆ ಜನತೆ ಯಾರೂ ಮನೆಯಿಂದ ಹೊರಬರಬೇಡಿ ಎಂದು ಮನವಿ ಮಾಡಿದ್ದಾರೆ ರಾಜ್ಯದಲ್ಲಿ ಮಾರಕ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ನು ಕನಿಷ್ಟ 15 ದಿನಗಳವರೆಗೆ ಲಾಕ್ ಡೌನ್ ವಿಸ್ತರಿಸಿದರೆ ಒಳಿತು ಎಂಬುದಾಹಗಿ ಹಲವು ಸಚಿವರು ಯಡಿಯೂರಪ್ಪ ಅವರಿಗೆ ಸಲಹೆ ಕೊಟ್ಟಿದ್ದಾರೆ.ಇದೆ 11 ರಂದು ಪ್ರಧಾನಿ ಜೊತೆ ಸಭೆ ನಡೆಯಲಿದ್ದು, ಈ ವೇಳೆ ಪ್ರಧಾನಿ ಯಾವ ನಿರ್ಧಾರ ಕೈಗೊಳ್ಳುತ್ತಾರೆಯೋ ಅದರ ಬಳಿಕ ರಾಜ್ಯದಲ್ಲಿ ಮುಂದೇನು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು. ಹೀಗಾಗಿ ಎರಡು ತಿಂಗಳವರೆಗೆ ಪಡಿತರ ವಿತರಿಸುವಂತೆ ಸೂಚಿಸಲಾಗಿದೆ ಎಂದರು.