ನವದೆಹಲಿ, ನ 5: ತೀಸ್ ಹಜಾರಿ ಕೋರ್ಟ್ ಬಳಿ ನವಂಬರ್ 2 ರಂದು ನಡೆದ ಘರ್ಷಣೆಯಲ್ಲಿ 21 ಪೊಲೀಸ್ ಸಿಬ್ಬಂದಿ ಹಾಗೂ 8 ಮಂದಿ ವಕೀಲರು ಗಾಯಗೊಂಡ ಘಟನೆ ಸಂಬಂಧ ದೆಹಲಿ ಪೊಲೀಸರು ಮಂಗಳವಾರ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದಾರೆ.
ನವಂಬರ್ 2ರ ಘಟನೆ ಹಿನ್ನಲೆಯಲ್ಲಿ ಪೊಲೀಸ್ ಸಿಬ್ಬಂದಿ ದೆಹಲಿಯ ಪೊಲೀಸ್ ಕೇಂದ್ರ ಕಚೇರಿಯ ಬಳಿ ಪ್ರತಿಭಟನೆ ನಡೆಸುತ್ತಿದ್ದು, ಸ್ಥಳದಲ್ಲೂ ಈಗಲೂ ಪ್ರತಿಭಟನೆ ಮುಂದುವರಿದಿದೆ.
ಪೊಲೀಸ್ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ, ದೆಹಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಿಕ್, ಪೊಲೀಸ್ ಪಡೆಗಳಿಗೆ ಇಂದೊಂದು ಪರೀಕ್ಷಾ ಸಮಯ, ಆದರೆ ನಮ್ಮ ಮೇಲೆ ಇರಿಸಿರುವ ನಿರೀಕ್ಷೆಗಳ ಸಮಯವೂ ಇದಾಗಿದೆ. ಶಿಸ್ತಿನ ಪಡೆಗಳಂತೆ ವರ್ತಿಸಿ, ಶಾಂತಿ ಕಾಪಾಡಲಿದ್ದಿರಿ ಎಂಬ ಸಂಪೂರ್ಣ ನಂಬಿಕೆಯಿದೆ ಎಂದು ಹೇಳಿದರು.
ಉತ್ತರ ದೆಹಲಿಯ ತೀಸ್ ಹಜಾರಿ ಕೋರ್ಟ್ ಬಳಿ ಶನಿವಾರ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ನಡೆದ ಮಾತಿನ ಚಕಮಕಿಯ ನಂತರ ಪೊಲೀಸರು ಹಾಗೂ ವಕೀಲರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿತ್ತು.
ಈ ಗಲಭೆಯಲ್ಲಿ 14 ಮೋಟಾರ್ ಸೈಕಲ್, ಒಂದು ಪೊಲೀಸ್ ಕಾರಿಗೆ ಬೆಂಕಿ ಹಚ್ಚಲಾಗಿತ್ತು. ಎಂಟು ಬಂದಿಖಾನೆ ವ್ಯಾನ್ ಗಳು ಹಾನಿಗೊಳಗಾಗಿದ್ದವು.
ಘರ್ಷಣೆ ಸಂಬಂಧ ಭಾನುವಾರ ವಿಶೇಷ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ, ಘಟನೆ ಕುರಿತು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಯೊಬ್ಬರಿಂದ ನ್ಯಾಯಾಂಗ ತನಿಖೆಗೆ ಆದೇಶಿಸಿ, ಪೊಲೀಸ್ ಅಧಿಕಾರಿಗಳ ಪರವಾಗಿ ದಾಖಲಾಗುವ ಎಫ್ ಐ ಆರ್ ಆಧಾರದ ಮೇಲೆ ವಕೀಲರ ವಿರುದ್ದ ಯಾವುದೇ ದ್ವೇಷದ ಕ್ರಮ ಜರುಗಿಸಬಾರದು ಎಂದು ಪೊಲೀಸರಿಗೆ ತಾಕೀತು ಮಾಡಿತ್ತು.
ಲಾಕಪ್ ಮುಂದೆ ವಕೀಲರೊಬ್ಬರ ಕಾರು ನಿಲುಗಡೆಗೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಆಕ್ಷೇಪಿಸಿದಾಗ ತೀಸ್ ಹಜಾರಿ ಸಂಕೀರ್ಣದ ಬಳಿ ಹಿಂಸಾಚಾರ ನಡೆಯಿತು ಎಂದು ಪೊಲೀಸರು ಹೇಳಿದ್ದಾರೆ.
ಲಾಕಪ್ ಮುಂದೆ ವಾಹನ ನಿಲ್ಲಿಸಬೇಡಿ ಎಂದು ಪೊಲೀಸರು ಮಾಡಿಕೊಂಡ ಮನವಿಗೆ ಆಕ್ರೋಶಗೊಂಡ ಭಾರಿ ಸಂಖ್ಯೆಯ ವಕೀಲರ ದಂಡು ಬಲವಂತವಾಗಿ ವಾಗಿ ಲಾಕಪ್ ಪ್ರವೇಶಿಸಿ, ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲು ಮುಂದಾದರು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದು, ವಕೀಲರ ಎಲ್ಲ ಕೃತ್ಯಗಳೂ ಸಿಸಿಟಿವಿಯಲ್ಲಿ ದಾಖಲಾಗಿವೆ ಎಂದು ತಿಳಿಸಿದ್ದಾರೆ.