ಬೆಂಗಳೂರು, ಜ. 27, ನಗರದ ಪ್ರಸಿದ್ಧ ಗಾಳಿ ಆಂಜನೇಯ ದೇವಾಲಯದ ಲಾಕರ್ ಒಡೆದು ಹಣ ಕಳವು ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮೈಸೂರು ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನ ಐತಿಹಾಸಿಕ ಪ್ರಸಿದ್ಧ ದೇವಸ್ಥಾನವಾಗಿದೆ. 48 ಸಾವಿರ ರೂ. ಹಣವನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ ಎಂದು ಆರೋಪಿಸಿ ದೇವಸ್ಥಾನ ಟ್ರಸ್ಟಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಜ. 14ರಂದು ರಾತ್ರಿ ದೇವಾಲಯದ ಗೋಡೆಯ ಮೇಲಿಂದ ಒಳ ನುಗ್ಗಿರುವ ಕಳ್ಳರು ಲಾಕರ್ ಮುರಿದು ಹಣ ದೋಚಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಕಳ್ಳತನವಾದ ಹಣವು ಧನುರ್ಮಾಸದ ಪ್ರಯುಕ್ತ ಇರುಮುಡಿಯಿಂದ ಬಂದ ಹಣ ಎಂದು ದೇವಾಲಯದ ಟ್ರಸ್ಟಿಗಳು ತಿಳಿಸಿದ್ದಾರೆ.ಟ್ರಸ್ಟಿಗಳು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಟರಾಯನಪುರ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.