ಕಾರವಾರ: ಮನೆಗೆ ಹೊರಟಿದ್ದ ಯೋಧನೋರ್ವ ರೈಲಿನಿಂದ ಬಿದ್ದು ಮೃತಪಟ್ಟಿರುವುದಾಗಿ ಆತನ ಜೊತೆ ಪಯಣಿಸುತ್ತಿದ್ದ ಸೈನಿಕರು ಕಾರವಾರ ಮಕೇರಿ ಗ್ರಾಮದಲ್ಲಿನ ಆತನ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.
ದುಮಿಂಗ್ ಎಂ.ಸಿದ್ದಿ(39) ಮೃತಪಟ್ಟಿದ್ದಾನೆ ಎನ್ನಲಾದ ಯೋಧನ ಹೆಸರಾಗಿದ್ದು, ಈತ ಕಳೆದ 15 ವರ್ಷಗಳಿಂದ ಸೇನೆಯಲ್ಲಿ ಯೋಧನಾಗಿದ್ದ. ದುಮಿಂಗ್ ಸಿದ್ದಿ ಮೂಲತಃ ಯಲ್ಲಾಪುರದವರು. ಆದರೆ ಕಳೆದ ಮೂರು ದಶಕಗಳಿಂದ ಆತನ ಕುಟುಂಬ ಕಾರವಾರ ಸಮೀಪದ ಮಖೇರಿಯಲ್ಲಿ ನೆಲೆ ನಿಂತಿದೆ. ಆತನ ತಂದೆ ತಾಯಿ ಸಹೋದರರು, ಪತ್ನಿ ಹಾಗೂ ಇಬ್ಬರು ಮಕ್ಕಳು ಕಾರವಾರದ ಮಕೇರಿ ಗ್ರಾಮದಲ್ಲಿ ನೆಲೆ ನಿಂತಿದ್ದಾರೆ. ದುಮಿಂಗ್ ಸಿದ್ದ ಅವರ ಸಾವಿನ ಸುದ್ದಿ ಕೇಳಿ ಇಡೀ ಕುಟುಂಬ ಆತಂಕಕ್ಕೆ ಒಳಗಾಗಿದೆ.
ಮಗನ ಬರ್ತಡೇಗೆ ಬರುತ್ತೇನೆ ಎಂದು ಕುಟುಂಬದವರಿಗೆ ಶನಿವಾರ ದೂರವಾಣಿ ಕರೆ ಮಾಡಿ ದುಮ್ಮಿಂಗ್ ತಿಳಿಸಿದ್ದರಂತೆ. ಸೋಮವಾರ ಹೊರಡುವುದಾಗಿ ಹೇಳಿದ್ದ ಅವರು ಕಳೆದ ಶನಿವಾರವೇ ರೈಲಿನ ಮೂಲಕ ಹೊರಟಿದ್ದರು. ಶನಿವಾರವೇ ಕರೆ ಮಾಡಿದ ದುಮ್ಮಿಂಗ್ ಸಿದ್ದಿ ಸ್ನೇಹಿತನೋರ್ವ, ಪಯಣಿಸುವಾಗ ದುಮ್ಮಿಂಗ್ ರೈಲಿನಿಂದ ಬಿದ್ದು ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿದ್ದೇವೆ ಎಂದು ತಿಳಿಸಿದ್ದಾನೆ. ಪಂಜಾಬ್ ಪಠಾಣಕೋಟ್ನಲ್ಲಿ ಸೈನಿಕ ಕ್ಯಾಂಪ್ನಲ್ಲಿ ದುಮ್ಮಿಂಗ್ ಕೆಲಸ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಸೈನ್ಯಕ್ಕೆ ಸೇರಿದ್ದ ದುಮ್ಮಿಂಗ್ ಜಮ್ಮು ಕಾಶ್ಮೀರ್, ಅಸ್ಸಾಂನಲ್ಲಿ ಕೆಲ ಸಮಯ ಸೈನಿಕನಾಗಿ ಕೆಲಸ ಮಾಡಿದ್ದರು. ಸದ್ಯದಲ್ಲೇ ಸೈನ್ಯದಿಂದ ನಿವೃತ್ತಿ ಹೊಂದಿ ಅವರು ಬರಲಿದ್ದರು.
ಮನೆ ಕಟ್ಟಿಸುತ್ತಿರುವ ದುಮ್ಮಿಂಗ್ ಇದೇ ಕ್ರಿಸ್ಮಸ್ ವೇಳೆಗೆ ಹೊಸಮನೆ ಪ್ರವೇಶ ಮಾಡಿ, ಹೊಸ ಬದುಕಿನ ಕನಸು ಕಂಡಿದ್ದರು. ಇದೀಗ ಮಗನ ಸಾವು ದುಮ್ಮಿಂಗ್ ಸಿದ್ದ ಅವರ ತಂದೆ ಮೊಹತೀಸ್ ಸಿದ್ದಿ ಹಾಗೂ ಆತನ ಪತ್ನಿ , ಮಕ್ಕಳಲ್ಲಿ ಹಾಗೂ ಸಹೋದರರಲ್ಲಿ ನೋವು ತಂದಿದೆ. ದುಮ್ಮಿಂಗ್ ಸಾವನ್ನು ಸೈನ್ಯದ ಅಧಿಕಾರಿಗಳು ಕುಟುಂಬದವರಿಗೆ ದೃಢಪಡಿಸಿದ್ದಾರೆ ಎನ್ನಲಾಗಿದ್ದು, ಬುಧುವಾರ ಸೈನಿಕನ ಶವ ಕಾರವಾರ ತಲುಪುವ ಸಾಧ್ಯತೆಗಳಿವೆ.