ಪಕ್ಷದ್ರೋಹಿಗಳು ಎಂದಿಗೂ ಅನರ್ಹರೇ-ಸಿದ್ದರಾಮಯ್ಯ

ಮೈಸೂರು,ಫೆ 6 :    ಪಕ್ಷದ್ರೋಹಿಗಳು ಎಂದಿಗೂ ಅನರ್ಹರೇ. ಕಾಂಗ್ರೆಸ್ ಗೆ ದ್ರೋಹ ಬಗೆದವರಿಗೆ ಮಂತ್ರಿಸ್ಥಾನ ಸಿಕ್ಕ ಮಾತ್ರಕ್ಕೆ ಅವರ ಅನರ್ಹ ಹಣೆಪಟ್ಟಿ ಅಳಿಸಿಹೋಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್​​​ ತೊರೆದ ಪಕ್ಷ ದ್ರೋಹಿಗಳು ಯಾವುದೇ ಸರ್ಕಾರದಲ್ಲಿ ಮಂತ್ರಿಯಾದರೂ ಅನರ್ಹರೇ, ಪಕ್ಷ ದ್ರೋಹಿಗಳು ಮಂತ್ರಿಯಾಗಿದ್ದು  ಖುಷಿ ವಿಚಾರವಲ್ಲ. ಮಂತ್ರಿಯಾದ ಮಾತ್ರಕ್ಕೆ ಅವರು ಅರ್ಹರಲ್ಲ, ಕಾನೂನಿನ ಪ್ರಕಾರ ಎಂದಿಗೂ ಅವರೆಲ್ಲ ಅನರ್ಹರೇ ಎಂದು ಕಿಡಿಕಾರಿದರು.

ಯಡಿಯೂರಪ್ಪ ದಿಲ್ಲಿಗೆ ಕಳುಹಿಸಿದ್ದ ಪಟ್ಟಿಗೆ ಬಿಜೆಪಿ ವರಿಷ್ಠರು ಒಪ್ಪಿಗೆ ನೀಡಿಲ್ಲ. ಯಡಿಯೂರಪ್ಪ ನೇತೃತ್ವದ ಸರ್ಕಾರದ ಸಂಪುಟ ವಿಸ್ತರಣೆ ಪೂರ್ತಿಯಾಗಿಲ್ಲ. ಇನ್ನೂ ಆರು ಖಾತೆಗಳು ಬಾಕಿ ಉಳಿದಿದ್ದು, ಅವರನ್ನು ನೋಡಿದರೆ ಕರುಣೆ ಬರುತ್ತದೆ. ತಮಗೆ ಬೇಕಾದವರನ್ನು  ಮಂತ್ರಿ ಮಾಡುವ ಸ್ವಾತಂತ್ರ್ಯ ಯಡಿಯೂರಪ್ಪ ಅವರಿಗೆ ಇಲ್ಲ. ನೂತನ ಸಚಿವರು ಪಕ್ಷ ದ್ರೋಹಿಗಳು‌. ಅವರು ಮಂತ್ರಿಯಾಗಿ ಪ್ರಮಾಣ ವಚವ ಸ್ವೀಕರಿಸಿದ ಕಾರಣಕ್ಕಾಗಿ ಶುಭಾಶಯ ಕೋರುತ್ತಿದ್ದೇನೆ ಅಷ್ಟೇ  ಎಂದರು.