ಕಲಬುರಗಿ, ಮಾ. 19, ಕೊರೊನಾ ವೈರಸ್ ಸೋಂಕು ತಗುಲಿ ಕಲಬುರಗಿ ವೃದ್ಧ ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದಾರೆ.ವೃದ್ಧನಿಗೆ ಚಿಕಿತ್ಸೆ ನೀಡಿದ ವೈದ್ಯ ಸೇರಿ, ಮೃತರ ಮಗಳಿಗೆ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.ಜಿಲ್ಲೆಯ ಆಳಂದ ಪಟ್ಟಣದಲ್ಲಿ ವಾಡಿಕೆಯಂತೆ ಗುರುವಾರದಂದು ಬೃಹತ್ ಸಂತೆ ಜರುಗುತ್ತದೆ. ಹೀಗಾಗಿ ಅಂದು ಆಳಂದ ತಾಲೂಕಿನ ಸುತ್ತಮುತ್ತಲಿನ ಹಳ್ಳಿಯ ಜನರು ಇಲ್ಲಿ ಬಂದು ಸಂತೆ ಮಾಡುತ್ತಾರೆ. ಅಲ್ಲದೇ, ಪಟ್ಟಣದ ಹಜರತ್ ಲಾಡ್ಲೆ ಮಶಾಕ್ ದರ್ಗಾದ ಎದುರಿಗೆ ಕುರಿ, ಕೋಳಿ ಸಂತೆಯೂ ಜರುತ್ತದೆ. ಆದರೆ, ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಂದು ಪಟ್ಟಣ ಸಂಪೂರ್ಣ ಸ್ತಬ್ಧವಾಗಿದ್ದು, ಸಂತೆಯೂ ರದ್ದಾಗಿದೆ.
ಆಳಂದ ಬಸ್ಸು ನಿಲ್ದಾಣ, ಪುರಸಭೆಯ ಎದುರುಗಡೆಯ ಅಂಗಡಿ ಮುಂಗಟ್ಟು ಸೇರಿ ಪಟ್ಟಣದ ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿದ್ದು, ಮಾರುಕಟ್ಟೆ ಬಿಕೋ ಎನ್ನುತ್ತಿದೆ.
ಯುಎನ್ಐ ಸುದ್ದಿ ಸಂಸ್ಥೆಯೊಂದಿಗೆ ಆಳಂದ ಪುರಸಭೆಯ ಮುಖ್ಯಾಧಿಕಾರಿ ಬಾಬುರಾವ್ ವಿಭೂತೆ ಮಾತನಾಡಿ, ಪಟ್ಟಣದಲ್ಲಿ ಗುರುವಾರಕೊಮ್ಮೆ ಸಂತೆ ನಡೆಯುತ್ತದೆ. ಈ ಸಂತೆಯಲ್ಲಿ ತಾಲೂಕಿನ ಸುತ್ತ ಮುತ್ತಲು ಜನ ಸೇರುತ್ತಾರೆ. ಹೀಗಾಗಿ ಜನಸಂಖ್ಯೆ ಜಾಸ್ತಿ ಆದ ಸಂದರ್ಭದಲ್ಲಿ ಕೊರೊನಾ ವೈರಸ್ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಶರತ್ ಬಿ ಅವರ ಆದೇಶದಂತೆ ಸಂತೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ, ದೈನಂದಿನ ಜೀವನಕ್ಕೆ ಬೇಕಾಗುವ ಸಾಮಾಗ್ರಿ ವಸ್ತುಗಳು ದೊರೆಯಲಿದ್ದು, ಮೆಡಿಕಲ್ ಶಾಪ್ ಗಳು ಕೂಡ ಕಾರ್ಯನಿರ್ವಹಿಸಲಿವೆ ಎಂದರು.
ಕೊರೊನಾ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮನೆಯಿಂದ ಹೊರಬರದೇ, ತಮ್ಮ ಮನೆಯಲ್ಲೇ ಇರುವ ಮೂಲಕ ಆರೋಗ್ಯದ ಬಗ್ಗೆ ಗಮನ ವಹಿಸಬೇಕು ಎಂದು ಅವರು ಮನವಿ ಮಾಡಿದರು.ಪಟ್ಟಣದ ನಿವಾಸಿ ಚಂದ್ರಶೇಖರ್ ಕಾಂಬಳೆ ಮಾತನಾಡಿ, ಕೊರೊನಾ ವೈರಸ್ ಸೋಂಕು ತಗುಲದಂತೆ ಜಿಲ್ಲಾಡಳಿತ ವಹಿಸಿರುವ ಕ್ರಮ ಸ್ವಾಗತಾರ್ಹ. ನಮ್ಮ ಆರೋಗ್ಯದ ಮೇಲೆ
ದುಷ್ಪರಿಣಾಮ ಬೀರದಿರಲಿ ಎಂಬ ಕಾರಣಕ್ಕೆ ಕಠಿಣ ಕ್ರಮಕೈಗೊಳ್ಳಲಾಗಿದೆ. ಆದರೆ, ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಉಚಿತವಾಗಿ ಮಾಸ್ಕ್ ನೀಡಬೇಕು. ಅಲ್ಲದೇ, ಕೊರೊನಾ ಕುರಿತು
ಅನಕ್ಷರಸ್ಥರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದರು. ಆಳಂದ ಪಟ್ಟಣದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಪುರಸಭೆ ಸಿಬ್ಬಂದಿ ಕಡ್ಡಾಯವಾಗಿ ಚರಂಡಿ ಸ್ವಚ್ಛ ಮಾಡುತ್ತಿಲ್ಲ. ಅಲ್ಲದೇ ಕುಡಿಯುವ ನೀರು ಕೂಡ ಸ್ವಚ್ಛವಾಗಿ ಪೂರೈಕೆ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಲು ಪುರಸಭೆ ಸಂಪೂರ್ಣ ವಿಫಲವಾಗಿದೆ. ಈ ಕುರಿತು ಪುರಸಭೆ ಗಮನ ಹರಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.