ಭಗವಾನ ಮಹಾವಿರರ ಉಪದೇಶಗಳು ಇಂದಿಗೂ ಪ್ರಸ್ತುತ: ಡಾ.ಅಜಿತ ಪ್ರಸಾದ

ಭಗವಾನ ಮಹಾವಿರರ ಉಪದೇಶಗಳು ಇಂದಿಗೂ ಪ್ರಸ್ತುತ: ಡಾ.ಅಜಿತ ಪ್ರಸಾದ The teachings of Lord Mahavira are still relevant today: Dr. Ajit Prasad

ಲೋಕದರ್ಶನ ವರದಿ 

ಧಾರವಾಡ 30: ಪ್ರಸ್ತುತ ಯುದ್ಧಗಳ ಸಂದರ್ಭದಲ್ಲೂ ಭಾರತ ದೇಶದ ಜನತೆ ನೆಮ್ಮದಿಯಿಂದ ಜೀವನ ಸಾಗಿಸುತ್ತಿದೆ ಎಂದರೆ ಅದಕ್ಕೆ ಶ್ರೀ ಭಗವಾನ ಮಹಾವೀರ ಸ್ವಾಮಿಯ ಅಹಿಂಸಾ ತತ್ವ, ಬುದ್ಧ ಬಸವಾದಿಗಳ ಉಪದೇಶಗಳೇ ಕಾರಣ. ಭಗವಾನ ಮಹಾವೀರರು ಮಾನವಕುಲಕ್ಕೆ ಶಾಂತಿ, ಅಹಿಂಸೆ ಮತ್ತು ಸತ್ಯದ ಮಾರ್ಗವನ್ನು ತೋರಿಸಿದವರು. ಕೋಪ, ಹಿಂಸೆ ಮತ್ತು ಅಸಹಿಷ್ಣುತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಮಹಾವೀರರ ಉಪದೇಶಗಳು ಬಹಳ ಅಗತ್ಯವಾಗಿವೆ. ನಾವು ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಬೆಳೆಯುತ್ತದೆ ಎಂದು ಜೆ.ಎಸ್‌.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಜೆ.ಎಸ್‌.ಎಸ್ ಐ.ಟಿ.ಐ ಕಾಲೇಜು ಮತ್ತು ಜೆ.ಎಸ್‌.ಎಸ್ ಎಂ.ಸಿ.ಎ ಕಾಲೇಜು ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶ್ರೀ ಭಗವಾನ ಮಹಾವೀರ ಜಯಂತಿಯಲ್ಲಿ ಮಹಾವೀರರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ ರವರು ಮಾತನಾಡಿದರು. ಜೈನ ಧರ್ಮ ತನ್ನದೇ ಆದ ವೈಶಿಷ್ಠ್ಯತೆ ಹೊಂದಿದೆ. ಧರ್ಮದ ಆಚಾರ ವಿಚಾರಗಳು ನಿರ್ದಿಷ್ಠವಾದ ಜಾತಿ ಮತಕ್ಕೆ ಸೀಮಿತವಾಗಿರದೇ ಮಾನವಕುಲದ ಒಳಿತಿಗೆ ಮಾರ್ಗದಶಕವಾಗಿವೆ. ಕೋಪಕ್ಕಿಂತ ಕ್ಷಮೆ, ದ್ವೇಷಕ್ಕಿಂತ ಪ್ರೀತಿ, ಹಿಂಸೆಗೆ ಬದಲು ದಯೆ ತೋರುವುದು, ಅಸೂಯೆನ್ನು ಬಿಡುವುದು ಶಾಂತಿಯುತ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗುತ್ತವೆ ಎಂದು ಹೇಳಿದರು. 

ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಡಾ. ಆರ್‌.ವಿ. ಚಿಟಗುಪ್ಪಿಯವರು ಮಾತನಾಡಿ ಜೈನ ಧರ್ಮದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುದರಿಂದ ನಮ್ಮ ವ್ಯಕ್ತಿತ್ವನ್ನು ರೂಪಿಸಿಕೊಳ್ಳಬಹುದು. ಸಿಧ್ದಾರ್ಥ ಹಾಗೂ ತ್ರಿಶಲಾ ದೇವಿ ಮಗನಾಗಿ ಹುಟ್ಟಿದ ವರ್ಧಮಾನರು 30 ವರ್ಷಗಳವರೆಗೆ ರಾಜಭೋಗ ಅನುಭವಿಸಿದರು. ನಂತರ ಭೌತಿಕ ಜೀವನವನ್ನು ತ್ಯಜಿಸಿ ಆತ್ಮಸಾಕ್ಷಾತ್ಕಾರಕ್ಕಾಗಿ ತಪಸ್ಸು ಪ್ರಾರಂಭಿಸಿದರು. 12 ವರ್ಷಗಳ ತಪಸ್ಸಿನ ನಂತರ ಅವರಿಗೆ ಜ್ಞಾನೋದಯ ದೊರೆಯಿತು. ನಂತರ ಅವರು ಜನರಿಗೆ ಅಹಿಂಸೆ, ಸತ್ಯ, ಅಪರಿಗ್ರಹ ಮತ್ತು ಶಾಂತಿಯ ಮಾರ್ಗವನ್ನು ಬೋಧಿಸಿದರು. ಇವು ಮೋಕ್ಷಕ್ಕೆ ಅತಿ ಸರಳವಾದ ದಾರಿಯಾಯಿತು ಅಲ್ಲದೇ ಇದನ್ನು ಪ್ರಾಕೃತ ಪಾಲಿ ಭಾಷೆಯಲ್ಲಿ ಜೈನ ಧರ್ಮದ ವಿಚಾರಗಳನ್ನು ಜನರಿಗೆ ತಿಳಿಹೇಳಿದ ಕಾರಣ ಈ ಜೈನ ಧರ್ಮದ ಸಿಧ್ದಾಂತಗಳು ಅತಿ ಬೇಗನೆ ಜನರನ್ನು ತಲುಪಿ ದೇಶದಲ್ಲೆಡೆ ಜೈನ ಧರ್ಮ ಮುನ್ನೆಲೆಗೆ ಬಂದಿತು. ಮಹಾವೀರರು ಪ್ರತಿಪಾದಿಸಿದ ತತ್ವಗಳಾದ ನಂಬಿಕೆ, ಜ್ಞಾನ, ನಡತೆ ಮಾನ ವ ಜೀವನ ಸುಧಾರಿಸುವ ಅಸ್ತ್ರಗಳಾದವು. ಮೊದಲು ನಮ್ಮ ಮೇಲೆ ಮತ್ತು ನಾವು ಮಾಡುತ್ತಿರುವ ಕೆಲಸದ ಮೇಲೆ ನಂಬಿಕೆ, ಆತ್ಮವಿಶ್ವಾಸವಿರಬೇಕು ಇದು ನಮ್ಮ ಪ್ರತಿಯೊಂದು ಕೆಲಸಕ್ಕೆ ಶ್ರೇಯಸ್ಸು ತರುತ್ತದೆ ಹಾಗೂ ಇಲ್ಲಿ ನಮ್ಮ ಗೆಲುವು ಖಚಿತವಾಗಿರುತ್ತದೆ. ಯಾವುದೇ ಕಾರ್ಯ ಕೈಗೊಳ್ಳುವ ಮುನ್ನ ಪೂರ್ಣ ಪ್ರಮಾಣದ ಜ್ಞಾನ ಪಡೆದುಕೊಳ್ಳಿ ತುಂಬಿದ ಕೊಡ ಹೇಗೆ ತುಳುಕುವದಿಲ್ಲವೋ ಹಾಗೇಯೆ ಪೂರ್ತಿ ಜ್ಞಾನ ಪಡೆದುಕೊಂಡು ಮಾಡಿದ ಕೆಲಸ ಎಂದೂ ಅಪೂರ್ಣ ಆಗುವದಿಲ್ಲ. ಅದರೇ ರೀತಿ ಸಮಾಜದಲ್ಲಿ ನೀವು ನಿಮ್ಮದೇ ಆದ ಚಾಪು ಮೂಡಿಸಲು ನಡತೆ ಅತಿ ಮುಖ್ಯ ಎಲ್ಲ ಸರಿಯಿದ್ದು, ನಡತೆ ಸರಿ ಇಲ್ಲದಿದ್ದರೇ ಮಾಡಿ ಎಲ್ಲ ಪ್ರಯತ್ನವು ವ್ಯರ್ಥ. ಜೈನ ಧರ್ಮ ಮಾನವನ ಕುಲದ ಒಳಿತಿಗಾಗಿ ತನ್ನದೇ ಆದ ಕೊಡುಗೆಗಳನ್ನು ನೀಡಿದ್ದು ಅವುಗಳನ್ನು ಪಾಲಿಸುವುದು ಮೋಕ್ಷಕ್ಕೆ ರಹದಾರಿಯಾಗಿವೆ ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ಜೆ.ಎಸ್‌.ಎಸ್ ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ ಮಹಾವೀರ ಉಪಾದ್ಯೆ ನಿರೂಪಿಸಿ, ವಂದಿಸಿದರು. ಎಂ.ಸಿ.ಎ ನಿರ್ದೇಶಕಾರಾದ ಡಾ. ಸೂರಜ್ ಜೈನ್, ಜ್ಯೋತಿ ಅಕ್ಕಿ, ಶೃತಿ ಶೆಟ್ಟಿ, ಡಾ. ರೋನಿಲ್ ಮನೋಹರ್, ಡಾ. ಜಿನ್ನಪ್ಪ ಕುಂದಗೋಳ, ಡಾ. ಮಂಜುನಾಥ ಪೂಜಾರ, ಭಲಭೀಮ ಹಾವನೂರ, ಶಿಲ್ಪಾ ನಾಯಕ್, ರಜನಿ ತಾಳಿಕೋಟಿ ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.