ಸಮಾನ ಶಿಕ್ಷಣಕ್ಕಾಗಿ ವಿದ್ಯಾರ್ಥಿ ಸಮುದಾಯ ಸಂಘಟಿತರಾಗಬೇಕು: ಮಾರುತಿ ತಳವಾರ

ಸಮಾನ ಶಿಕ್ಷಣಕ್ಕಾಗಿ ವಿದ್ಯಾರ್ಥಿ ಸಮುದಾಯ ಸಂಘಟಿತರಾಗಬೇಕು: ಮಾರುತಿ ತಳವಾರ  The student community must unite for equal education: Maruti Talwar


ರಾಣೇಬೆನ್ನೂರು, ಆ.23: ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿರುವ ವೈಪರೀತ್ಯಗಳನ್ನು ನಿವಾರಿಸಿ ಎಲ್ಲರಿಗೂ ಸಮಾನ ಶಿಕ್ಷಣ ದೊರೆಯುವಂತೆ ಮಾಡಬೇಕಾಗಿದೆ ಎಂದು ಯುವಕವಿ ಮಾರುತಿ ತಳವಾರ ಹೇಳಿದರು.  

ನಗರದ ವಾಗೀಶ ನಗರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶುಕ್ರವಾರ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಆಯೋಜಿಸಿದ್ದ 10ನೇ ವಿದ್ಯಾರ್ಥಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.  

ಇಂದಿನ ಶಿಕ್ಷಣ ವ್ಯವಸ್ಥೆ ಹಲವು ವೈರುಧ್ಯಗಳು ಮತ್ತು ವೈಪರೀತ್ಯಗಳಿಂದ ಕೂಡಿದೆ. ಇಂತಹ ಸಂದರ್ಭದಲ್ಲಿ ಎಲ್ಲರಿಗೂ ಸಮಾನ ಶಿಕ್ಷಣ ಜಾರಿಯಾಗಬೇಕು. ಜನಪರ ಹಾಗೂ ಜವಾಬ್ದಾರಿಯುತ ಸರ್ಕಾರಗಳು ಈ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.  

ಸಮಾನತೆ ಎಂಬುದು ಕೇವಲ ಶಿಕ್ಷಣ ಸಂಸ್ಥೆಗಳಲ್ಲಷ್ಟೇ ಸೀಮಿತವಾಗದೆ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಎಸ್‌ಎಫ್‌ಐ ಸಂಘಟನೆಯ ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಸಮಾಜಮುಖಿ ಹೋರಾಟಗಳಲ್ಲಿ ತೊಡಗಬೇಕು ಎಂದು ಕರೆ ನೀಡಿದರು.  

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಉದ್ದೇಶದಿಂದ ಹಲವು ಸಂಘಟನೆಗಳು ಹೋರಾಟ ನಡೆಸುತ್ತಿದ್ದರೂ ನೀರೀಕ್ಷಿತ ಫಲಿತಾಂಶ ದೊರೆಯುತ್ತಿಲ್ಲ. ವಿದ್ಯಾರ್ಥಿ ಸಮುದಾಯವು ತನ್ನ ನ್ಯಾಯಸಮ್ಮತ ಹಕ್ಕುಗಳು ಹಾಗೂ ಶೈಕ್ಷಣಿಕ ಸಮಾನತೆಗಾಗಿ ಸಂಘಟಿತ ಹೋರಾಟ ನಡೆಸುವುದು ಇಂದಿನ ಅಗತ್ಯವಾಗಿದೆ ಎಂದು ಮಾರುತಿ ತಳವಾರ ತಿಳಿಸಿದರು.  

ಹೋರಾಟದ ಗೆಲುವು-ಸೋಲಿಗೆ ಕುಗ್ಗದೆ, ಧ್ಯೇಯ ಮತ್ತು ಸಿದ್ಧಾಂತಗಳ ಆಧಾರದ ಮೇಲೆ ಪ್ರಗತಿಪರ ಚಿಂತನೆ ಬೆಳೆಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದ, ಡಾ. ಬಿ.ಆರ್‌. ಅಂಬೇಡ್ಕರ್, ಭಗತ್ ಸಿಂಗ್ ಸೇರಿದಂತೆ ಮಹನೀಯರು ಶಿಸ್ತು ಮತ್ತು ಪ್ರಗತಿಪರ ಚಿಂತನೆಯೊಂದಿಗೆ ದೇಶದ ಭವಿಷ್ಯ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.  

ಜಿಲ್ಲಾಧ್ಯಕ್ಷ ಬಸವರಾಜ ಎಸ್‌. ಮಾತನಾಡಿ, ಹೋರಾಟದ ತತ್ವ ಮತ್ತು ಸಿದ್ಧಾಂತಗಳನ್ನು ಹೊಂದಿರುವ ಯುವ ಸಮುದಾಯವು ಆದರ್ಶ ಜೀವನ ರೂಪಿಸಿಕೊಂಡು ಕೋಮು ಗಲಭೆಗಳನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಜಾತಿ, ಧರ್ಮದ ಹೆಸರಿನಲ್ಲಿ ನಡೆಯುವ ವಿಭಜನಾ ರಾಜಕಾರಣದ ವಿರುದ್ಧ ವೈಚಾರಿಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.  

ಶಿಕ್ಷಣವು ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ವ್ಯಾಪಾರೀಕರಣಗೊಳ್ಳುತ್ತಿರುವುದು ಆತಂಕಕಾರಿ. ಶಿಕ್ಷಣ ಮತ್ತು ಉದ್ಯೋಗ ಪ್ರತಿಯೊಬ್ಬರ ಮೂಲಭೂತ ಹಕ್ಕಾಗಬೇಕು. ಇಂತಹ ಪರಿವರ್ತನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಂಘಟಿತರಾಗಿ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟ ರೂಪಿಸಬೇಕು ಎಂದು ಅವರು ತಿಳಿಸಿದರು.  

ಶಿಕ್ಷಣದ ಉಳಿವು ಹಾಗೂ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಶಿಕ್ಷಣ ಪ್ರೇಮಿಗಳು ಒಗ್ಗೂಡಿ ದೇಶದ ಸಾಮರಸ್ಯ ಮತ್ತು ಸೌಹಾರ್ದತೆ ಬಲಪಡಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ನಿರಂತರ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷ ಗೌತಮ್ ಸಾವಕ್ಕನವರ ವಹಿಸಿದ್ದರು. ಸಿಂಧು ಮಕರವಳ್ಳಿ ಸ್ವಾಗತಿಸಿ ನಿರೂಪಿಸಿದರು.  

ಜಿಲ್ಲಾ ಮುಖಂಡರಾದ ಅರುಣ್ ಕುಮಾರ್ ನಾಗಾವತ್, ಚೈತ್ರಾ ಕೊರವರ ಸೇರಿದಂತೆ ಡಿವೈಎಫ್‌ಐ ಜಿಲ್ಲಾ ಮುಖಂಡ ವಿಠಲ್ ಗೌಳಿ, ಹನುಮಂತಗೌಡ ಹಾಗೂ ಎಸ್‌ಎಫ್‌ಐ ಮುಖಂಡರಾದ ವಾಣಿಶ್ರೀ, ಪೂರ್ವಿಕಾ, ಭೂಮಿಕಾ, ಸಂಗೀತ, ಶಶಿಕಲಾ, ಸೌಭಾಗ್ಯ, ಗುರುಕಿರಣ, ಬಿರೇಶ ಬಿ., ಮನೋಜ್ ಬಿ., ಮಹಮ್ಮದ್ ಯಾಸಿನ್, ಖಲಂದರ್ ಎನ್‌., ಪ್ರತಾಪ್ ಎನ್‌., ದೀಲೀಪ್ ಬಿ. ಸೇರಿದಂತೆ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.