ರಾಮದುರ್ಗ 02: ಕರ್ನಾಟಕದಲ್ಲಿ ಎಂದು ಕೇಳರಿಯದ ಪ್ರವಾಹ ಉಂಟಾದರೂ ನೆರೆ ಸಂತ್ರಸ್ಥರಿಗೆ ಪರಿಹಾರ ನೀಡುವಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿರುವ ಕೇಂದ್ರ ಸರಕಾರದ ನೀತಿ ಖಂಡನೀಯ ಎಂದು ನವಲಗುಂದ ಮಾಜಿ ಶಾಸಕ ಹಗೂ ಜೆಡಿಎಸ್ ಮುಖಂಡ ಎನ್.ಎಚ್. ಕೋನರಡ್ಡಿ ಉಭಯ ಸರಕಾರಗಳ ವಿರುದ್ದ ವಾಗ್ದಾಳಿ ನಡೆಸಿದರು.
ಸ್ಥಳೀಯ ಪ್ರೆಸ್ ಕ್ಲಬ್ನಲ್ಲಿ ಮಂಗಳವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಯಾವತ್ತು ಪ್ರವಾಹ ಉಂಟಾದ ಸಂದರ್ಭದಲ್ಲಿ ಪರಿಹಾರ ಘೋಷಣೆಯಲ್ಲಿ ಈ ರೀತಿಯ ವಿಳಂಭವಾಗಿಲ್ಲ. ಈ ಬಾರಿ ರಾಜ್ಯದಲ್ಲಿಯೂ ಬಿಜೆಪಿ ಸರಕಾರವಿದ್ದು ಕೇಂದ್ರದಿಂದ ಹೆಚ್ಚಿನ ಅನುದಾನ ದೊರೆಯಲಿದೆ ಎಂದು ಆಶೆ ಭಾವನೆ ಇಟ್ಟುಕೊಂಡಿದ್ದ ರಾಜ್ಯದ ಜನತೆಗೆ ಬಿಜೆಪಿ ಸರಕಾರಗಳು ನಿರಾಶೆಯನ್ನುಂಟು ಮಾಡಿವೆ ಎಂದು ಬೇಸರ ವ್ಯಕ್ತಪಡಿಸಿದರು.
ನೆರೆ ಸಂತ್ರಸ್ಥರಿಗೆ 10 ಸಾವಿರ ಚೆಕ್ ವಿತರಣೆ ಮಾಡಿ ಕೈ ತೊಳೆದುಕೊಂಡಂತೆ ಮಾಡಿದ ರಾಜ್ಯ ಸರಕಾರ, ಮುಖ್ಯಮಂತ್ರಿಗಳ ಘೋಷಣೆಯಂತೆ ಪ್ರವಾಹ ಉಂಟಾಗಿ ಎರಡು ತಿಂಗಳು ಗತಿಸಿದರೂ ಸಂಪೂರ್ಣ ಮನೆ ಬಿದ್ದವರಿಗೆ ರೂ.5 ಲಕ್ಷ ಭಾಗಶಃ ಹಾನಿಯಾದವರಿಗೆ 1 ಲಕ್ಷ ಮತ್ತು 25 ಸಾವಿರಗಳ ಪರಿಹಾರ ನೀಡುವುದಾಗಿ ತಿಳಿಸಿದ ಸರಕಾರ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಮೊದಲ ಕಂತು 1 ಲಕ್ಷ ನೀಡುವುದಾಗಿ ಹೇಳಿ ಅದರ ಬಗ್ಗೆ ಮತ್ತೆ ಮಾತನಾಡದೆ ಇರುವುದು ಖಂಡನೀಯ ಎಂದು ಸರಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಬಾಹ್ಯಾಕಾಶ ನೌಕೆಯ ವೀಕ್ಷಣೆಗೆ ಆಗಮಿಸಿದ ಪ್ರಧಾನ ಮಂತ್ರಿಗಳು ನೆರೆ ಸಂತ್ರಸ್ಥರಿಗೆ ಪರಿಹಾರ ನೀಡುವಕುರಿತು ಮಾತನಾಡದೇ ಉತ್ತರ ಕರ್ನಾಟಕದ ಜನತೆಯನ್ನು ಕಡೆಗಣಿಸಿದ್ದಾರೆ. ರಾಜ್ಯದಿಂದ ಆಯ್ಕೆಗೊಂಡ 25 ಸಂಸದರು ಹೆಸರಿಗೆ ಮಾತ್ರ. ಯಾರಿಗೂ ಪ್ರಧಾನ ಮಂತ್ರಿಗಳೊಂದಿಗೆ ಮಾತನಾಡಿ, ರಾಜ್ಯಕ್ಕೆ ಪರಿಹಾರ ಕೇಳುವ ತಾಕತ್ತಿಲ್ಲ. ಸ್ವತಃರಾಜ್ಯದ ಮುಖ್ಯಮಂತ್ರಿಗಳ ಬೇಟಿಗೂ ಸಮಯ ನೀಡದ ಪ್ರಧಾನ ಮಂತ್ರಿಗಳ ರಾಜ್ಯ ವಿರೋಧಿ ನೀತಿಗೆ ರಾಜ್ಯದ ಸಂತ್ರಸ್ಥರು ಬೇಸರಗೊಳ್ಳುವಂತಾಗಿದೆ ಎಂದರು.
ಎನ್ಡಿಆರ್ಎಫ್ ನಿಯಮದಂತೆ ಸಂತ್ರಸ್ಥರಿಗೆ ಪರಿಹಾರ ನೀಡಬೇಕು. ಅದನ್ನು ಕಡೆಗಣಿಸುವುದು ಬೇಡ. ಎನ್ಡಿಆರ್ಎಫ್ ನಿಯಮಗಳನ್ನು ಬದಲಾವಣೆ ಮಾಡಿಕೊಂಡು ಉಭಯ ಸರಕಾರಗಳು 35 ಸಾವಿರ ನೀಡಬೇಕಾದ ಪರಿಹಾರವನ್ನು 3 ಸಾವಿರಕ್ಕೆ ಮಿತಿಗೊಳಿಸಲು ಯೋಚಿಸುತ್ತಿರುವುದು ಸರಿಯಲ್ಲ ಎಂದರು.
ಮಹಾದಾಯಿ ವಿಚಾರವಾಗಿ ನ್ಯಾಯಾಧೀಕರಣದ ತೀರ್ಪಿನಂತೆ ಮಹದಾಯಿ ಕಾಮಗಾರಿ ಕೈಗೊಳ್ಳಲು ಕೇಂದ್ರ ಸರಕಾರ ಕಾಮಗಾರಿ ಕೈಗೊಳ್ಳಲು ಅಧಿಸೂಚನೆ ಹೊರಡಿಸುವುದನ್ನು ಬಿಟ್ಟು ಉಭಯ ರಾಜ್ಯಗಳು ಮಾತು ಕತೆಯ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಹೇಳುತ್ತಿರುವ ಪ್ರಧಾನ ಮಂತ್ರಿಗಳ ಕ್ರಮ ರೈತ ವಿರೋಧಿಯಾಗಿದೆ.
ಇತ್ತ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಕೇಂದ್ರ ಹೇಳಿದರೆ ಅತ್ತ ಗೋವಾ ಮುಖ್ಯಮಂತ್ರಿಗಳು ಮಾತುಕತೆ ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಕೂಡಲೇ ಕೇಂದ್ರ ಸರಕಾರ ನ್ಯಾಯಾಧೀಕರಣದ ತೀರ್ಪಿನಂತೆ ಕಾಮಗಾರಿ ಕೈಗೊಳ್ಳಲು ಅಧಿಸೂಚನೆ ಹೊರಡಿಸಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಪಿ.ಎಫ್.ಪಾಟೀಲ, ಕೃಷಿಕ ಸಮಾಜದ ಅಧ್ಯಕ್ಷ ವೈ.ಎಚ್.ಪಾಟೀಲ, ಜೆಡಿಎಸ್ ಮುಖಂಡ ಶಂಕರ ಮಾಡಲಗಿ, ಮುಖಂಡ ಪ್ರಕಾಶ ಶೋನಾಲ್ಕರ, ತಾಲೂಕಾಧ್ಯಕ್ಷ ಇಮಾಮಸಾಬ ಮುಜಾವರ, ನ್ಯಾಯವಾದಿಗಳಾದ ವಿ.ಬಿ. ಸಿದ್ದಾಟಗಿಮಠ, ಜಿ.ಪಿ. ಕೊಳ್ಳಿ, ಅಬೂಬ್ಬಕ್ಕರ ನಾಯ್ಕರ, ಜಿ.ಐ. ಕಲಾಲ ಸೇರಿದಂತೆ ಮುಂತಾದವರಿದ್ದರು.