ಮಲಾಮರಡಿ ಕ್ರಾಂತಿಯ ಕಿಡಿ : ಡಾ. ಯಲ್ಲಪ್ಪ ಹಿಮ್ಮಡಿ

ಮಲಾಮರಡಿ ಕ್ರಾಂತಿಯ ಕಿಡಿ : ಡಾ. ಯಲ್ಲಪ್ಪ ಹಿಮ್ಮಡಿ   The spark of the Malamaradi revolution: Dr. Yallappa Himmadi

ಮಲಾಮರಡಿ ಕ್ರಾಂತಿಯ ಕಿಡಿ : ಡಾ. ಯಲ್ಲಪ್ಪ ಹಿಮ್ಮಡಿ   

ಅಂಕಲಗಿ 25: ಒಂದು ಹಳ್ಳಿ ಅಥವಾ ಪಟ್ಟಣವು ತನ್ನ ಸಾಂಸ್ಕೃತಿಕ ಸಾಧನೆಯಿಂದ ಸುತ್ತಲಿನ ನಾಡಿಗೆ, ದೇಶಕ್ಕೆ ಪ್ರಖ್ಯಾತಿಯಾಗಿರುತ್ತದೆ. ಹಾಗೆಯೇ ಪ್ರಗತೀಶೀಲ ಚಳುವಳಿಯ ಬಸವರಾಜ ಕಟ್ಟೀಮನಿಯವರು ತಮ್ಮ ಪರಿಶುದ್ಧ ಬದುಕು ಮತ್ತು ಕ್ರಾಂತಿಕಾರಿ ಬರಹಗಳಿಂದ ಪ್ರಸಿದ್ಧರಾದರಲ್ಲದೇ ತಮ್ಮ ಹುಟ್ಟೂರು ಮಲಾಮರಡಿಯಲ್ಲಿ ನೆಲೆ ನಿಂತು ಅದೊಂದು ಕ್ರಾಂತಿಯ ಕಿಡಿ ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟವರು ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಯಲ್ಲಪ್ಪ ಹಿಮ್ಮಡಿ ಹೇಳಿದರು.  

ಅವರು ಗೋಕಾಕ ತಾಲೂಕಿನ ಮಲಾಮರಡಿಯಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದಿಂದ ಗುರುವಾರ ಹಮ್ಮಿಕೊಂಡಿದ್ದ ಬಸವರಾಜ ಕಟ್ಟೀಮನಿ ಪುಣ್ಯ ಸ್ಮರಣೆ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಾಲ್ಯದಿಂದಲೇ ಹೋರಾಟದ ಗುಣಗಳನ್ನು ಬೆಳೆಸಿಕೊಂಡಿದ್ದ ಕಟ್ಟೀಮನಿಯವರಿಗೆ ಪ್ರಗತೀಶೀಲ ಸಾಹಿತ್ಯ ಚಳುವಳಿ ಅವರ ಬರವಣಿಗೆಗೆ ಒತ್ತಾಸೆಯಾಯಿತು. ತನ್ನ ತವರಿನಲ್ಲೇ ಬಹುಕಾಲ ನೆಲೆ ನಿಂತು ಸಾಮಾಜಿಕ ಧಾರ್ಮಿಕ ರಾಜಕೀಯ ಅಸಮಾನತೆಗಳ ವಿರುದ್ಧ ಹೋರಾಡುತ್ತಲೇ ಕಟ್ಟೀಮನಿಯವರು 42 ಕಾದಂಬರಿ 10 ಕಥಾ ಸಂಕಲನ ಸೇರಿದಂತೆ 66ಕ್ಕೂ ಹೆಚ್ಚು ಕೃತಿ ರಚಿಸಿ ಕನ್ನಡ ಸಾಹಿತ್ಯಕ್ಕೆ ಸತ್ವ ಮತ್ತು ಶಕ್ತಿ ತುಂಬಿದರು ಎಂದು ವಿವರಿಸಿದರು.  

      ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಅಂಕಲಗಿ ಪದವಿ ಕಾಲೇಜಿನ ಪ್ರಾಂಶುಪಾಲ ಎಂ. ಎನ್‌. ಮಾವಿನಕಟ್ಟಿ ಅವರು ಬಡತನವನ್ನೇ ಸಾಧನವಾಗಿಸಿಕೊಂಡಿದ್ದ ಕಟ್ಟೀಮನಿಯವರು ಸ್ವಾಭಿಮಾನದಿಂದಲೇ ಬದುಕು ಮತ್ತು ಬರಹವನ್ನು ಪೂರೈಸಿದವರು. ಇಂತಹ ಕಟ್ಟೀಮನಿಯವರ ಸಾಹಿತ್ಯವನ್ನು ಪ್ರತಿಷ್ಠಾನವು ಯುವ ಸಮುದಾಯದ ಕಡೆಗೆ ಕೊಂಡೊಯ್ಯುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಥಳೀಯ ಮುಖಂಡರಾದ ಈರ​‍್ಪ ಮಾಳಗಿ ಅವರು ಮಲಾಮರಡಿಯ ರುದ್ರ ಭೂಮಿಯ ಸಮೀಪದಲ್ಲಿ ಬಸವರಾಜ ಕಟ್ಟೀಮನಿಯವರ ಸ್ಮಾರಕ ನಿರ್ಮಾಣ ಮಾಡಲು ಮತ್ತು ಊರಿನ ದ್ವಾರಕ್ಕೆ ಕಟ್ಟೀಮನಿಯವರ ಹೆಸರಿನ ಕಮಾನು ನಿರ್ಮಿಸಲು ಪ್ರತಿಷ್ಠಾನ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.  

ಆರಂಭದಲ್ಲಿ ಸಮುದಾಯ ಭವನದಲ್ಲಿನ ಬಸವರಾಜ ಕಟ್ಟೀಮನಿಯವರ ಪ್ರತಿಮೆಗೆ ಪ್ರತಿಷ್ಠಾನದ ಸದಸ್ಯರಾದ ಎಸ್‌. ಜಿ. ಚಿಕ್ಕನರಗುಂದ, ಧಾರವಾಡದ ಪ್ರೊ. ಬಿ. ಸಿ. ಬಿರಾದಾರ್ ಮಾಲಾರೆ​‍್ಣ ಮಾಡಿದರು. ಕಟ್ಟೀಮನಿಯವರ ಸುಪುತ್ರರಿಯರಾದ ಮಂಜುಳಾ ಬಿರಾದಾರ್ ಮತ್ತು ನೀಲಾ ಮಾಳಗಿ ದೀಪ ಬೆಳಗಿದರು. ಪ್ರತಿಷ್ಠಾನದ ಸದಸ್ಯರಾದ ಡಾ. ಕೆ. ಆರ್‌. ಸಿದ್ದಗಂಗಮ್ಮ, ಹಮೀದಾ ಬೇಗಂ ದೇಸಾಯಿ, ಪ್ರೊ. ಪ್ರಕಾಶ್ ಕುರಪಿ, ಬಸವರಾಜ ಮಾಳಗಿ, ಗಂಗಪ್ಪ ಮಾಳಗಿ, ನಾಗರಾಜ ಮಾಳಗಿ, ಅಪ್ಪಣ್ಣ ಕುಸ್ತಿ, ಬಸವರಾಜ ನಾವಲಗಟ್ಟಿ ಮುಂತಾದವರು ಉಪಸ್ಥಿತರಿದ್ದರು. ಕವಿ ಸುರೇಶ್ ಮುದ್ದಾರ ಸ್ವಾಗತಿಸಿದರು, ಪ್ರತಿಷ್ಠಾನದ ಸದಸ್ಯ ವಿಠ್ಠಲ ದಳವಾಯಿ ವಂದಿಸಿದರು.