ಲೋಕದರ್ಶನ ವರದಿ
ಬೈಲಹೊಂಗಲ 18: ಗುರುಗಳ ಅರುವಿನ ಅಗ್ನಿಯಲ್ಲಿ ಬೆಂದು ಬೆಳಕಾಗಿ, ಆತ್ಮಜ್ಞಾನಿಗಳಾಗಿದ್ದ ಶರೀಫರು ಕಂಡದ್ದೆಲ್ಲ ಕಾವ್ಯವಾಯಿತು. ತತ್ವವಾಯಿತು ಎಂದು ಎಪಿಎಂಸಿ ನಿದರ್ೇಶಕ ಎಫ್.ಎಸ್.ಸಿದ್ದನಗೌಡರ ಹೇಳಿದರು.
ಪಟ್ಟಣದಲ್ಲಿ ನವಲಗುಂದದ ಗುರುಕುಮಾರೇಶ್ವರ ನಾಟ್ಯ ಸಂಘದಿಂದ ಬುಧುವಾರ ಸಂಜೆ ಆಯೋಜಿಸಿದ್ದ ಆಧ್ಯಾತ್ಮಿಕ ನಾಟಕ ಸಂತ ಶಿಶುನಾಳ ಷರೀಫ್ ನಾಟಕವನ್ನು ಉದ್ಘಾಟನೆಗೊಳಿಸಿ ಮಾತನಾಡಿ, ಸಾಹಿತ್ಯ ಸೀಮೆಯ ಸಾಮ್ರಾಟ ಏನಿಸಿದ ಶರೀಫರು ಸಂಸಾರಿಕರೂ ಆಗಿದ್ದರು. ಅವರು ಕುಂದಗೋಳದ ನಾಯಕ ಮನೆತನದ ಫಾತಿಮಾಳನ್ನು ಮದುವೆಯಾದರು. ಬಡತನ ಅವರಿಗೆ ಬೆನ್ನು ಬಿಡದೆ ಕಾಡಿದ್ದರಿಂದ ಇದ್ದೊಬ್ಬ ಮಗಳನ್ನು ಕಳೆದುಕೊಂಡಿದ್ದರು. ನಂತರ ದಿನಗಳಲ್ಲಿ ಹೆಂಡತಿಯನ್ನು ಕಳೆದುಕೊಂಡರು ಅವರು ಎದೆಗುಂದಲಿಲ್ಲ. ಅವರ ಕಾಲ ಕೆಳಗೆ ಸಂಸಾರದ ಕೆಸರಿದ್ದರೂ, ಅವರ ತಲೆ ತತ್ವದ ಆಕಾಶದ ತುತ್ತ ತುದಿಯಲ್ಲಿರುತ್ತಿತ್ತು. ಪ್ರಾಪಂಚಿಕನೂ ಗುರು ಕಾರುಣ್ಯದಿಂದ ಸದ್ಗತಿಗೆ ಹೋಗಬಲ್ಲನೆಂಬುದಕ್ಕೆ ಶರೀಫರು ಜೀವಂತ ನಿದರ್ಶನ ಎಂದರು. ಶರೀಫರ ಗದ್ದುಗೆ ಸರ್ವಧರ್ಮದ ಸಮನ್ವಯ ಪರಧರ್ಮ ಸಹಿಷ್ಣತೆಯ ಜ್ಯಾತ್ಯತೀತ ನಿಲುವಿನ ಜೀವಂತ ಕೇಂದ್ರ. ಅದು ಭಕ್ತಿಯ ಆಗರ. ಗದ್ದುಗೆಯ ಎಡಭಾಗದಲ್ಲಿ ಮಹಮ್ಮದೀಯರು ಸಕ್ಕರೆ ಓದಿಕೆ ಮಾಡುತ್ತಾರೆ. ಕುರಾನ್ ಪಠಿಸುತ್ತಾರೆ. ನಮಾಜು ಮಾಡುತ್ತಾರೆ. ಶರೀಫ ನಾನಾಕಿ ದೋಸ್ತರಾ ಎಂದು ಉದ್ಘೋಷಿಸುತ್ತಾರೆ. ಬಲ ಬದಿಗೆ ಎಲ್ಲ ಧರ್ಮ ವರ್ಗದ ಭಕ್ತರು ಕರ್ಪುರ ಬೆಳಗಿ, ಕಾಯಿ ಒಡೆದು, ಶರೀಫ ಶಿವಯೋಗಿ ಮಹಾರಾಜ ಕೀ ಜೈ ಎಂದು ಜಯಘೋಷ ಮಾಡುತ್ತಾರೆ. ಬ್ರಾಹ್ಮಣರೂ ಗುರು ಗೋವಿಂದ ಶಿವಯೋಗಿ ಮಹಾರಾಜ ಕೀ ಜೈ ಎಂದು ಜಯಕಾರ ಮಾಡುತ್ತಾರೆ. ಎಲ್ಲ ಭಕ್ತರ ಎದೆಯೊಳದಿಂದ ಉಕ್ಕಿ ಬರುವ ಅಲ್ಲಾ-ಅಲ್ಲಮ, ಮಾಧವ ಮಹಾದೇವ ಎಂಬ ಭಕ್ತಿಯ ಕೂಗು ಶರೀಫರ ಗದ್ದುಗೆ ಮೂರು ಮಹಾಸಂಸ್ಕೃತಿಗಳ ಸಂಗಮ ಎಂಬುದಕ್ಕೆ ಸಾಕ್ಷಿ. ಶರೀಫರ ಗದ್ದುಗೆಯಲ್ಲಿರುವ ದೊಡ್ಡದಾದ ಬೇವಿನ ಮರಕ್ಕೆ ಅದರದೇ ಆದ ವಿಶಿಷ್ಟ ಇತಿಹಾಸವಿದೆ. ಮೊದಲಲ್ಲಿ ಎರಡು ಬೇವಿನ ಗಿಡಗಳಿದ್ದವು. ಶರೀಫರ ಗದ್ದುಗೆಯಲ್ಲಿ ಎಲ್ಲರೂ ಒಂದಾಗಿರುವಾಗ, ನಾವು ಯಾಕೆ ಎರಡಾಗಿರಬೇಕು ಎಂದು ಅವು ಎರಡೂ ಕೂಡಿ ಒಂದಾದವು. ಇದು ಶರೀಫರ ಗದ್ದುಗೆಯಲ್ಲಿನ ಜೀವಂತ ಪ್ರಕೃತಿ ಲೀಲೆ. ಸತ್ಯ ಸಂಗತಿ ಎಂದರು. ಬೈಲಹೊಂಗಲ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪಿ.ಎಮ್.ವಸ್ತ್ರದ ಅಧ್ಯಕ್ಷತೆ ವಹಿಸಿದ್ದರು. ನಾಟ್ಯ ಸಂಘದ ಮಾಲಿಕ ಷರೀಫ್ ಸಾಹೇಬನ ಪಾತ್ರದಾರಿ ಪ್ರವೀಣಕುಮಾರ ಬಾಗಲಕೋಟ ಅವರನ್ನು ಹೊಸೂರ ಗ್ರಾಮಸ್ಥರು ಸತ್ಕರಿಸಿದರು.
ಉಪನ್ಯಾಸಕ ಎಸ್.ಕೆ.ಮೆಳ್ಳಿಕೇರಿ, ಶಿಕ್ಷಕರಾದ ಜಿ.ಎಸ್.ಬೋಳತ್ತಿನ ಪಾರಿಶ್ವಾಡ, ಬಸವರಾಜ ಬಾಳಿಕಾಯಿ, ಮಲ್ಲಿಕಾರ್ಜುನ ಕರಡಿಗುದ್ದಿ, ಶಿವು ಮಾಕಿ, ಆನಂದ ಮುನವಳ್ಳಿ, ಸೋಮಪ್ಪ ಯರಡಾಲ, ಮಲ್ಲಿಕಾರ್ಜುನ ಬೋಳತ್ತಿನ, ಪ್ರಕಾಶ ಭರಮಗೌಡರ, ಮಹಾಂತೇಶ ಕಮತ, ಯಲ್ಲಪ್ಪ ಮೂಗಬಸವ, ಬಸಪ್ಪ ಶಿದ್ನಾಳ, ಮಡಿವಾಳಪ್ಪ ಚಿಕ್ಕೊಪ್ಪ, ಮಹಾಂತೇಶ ರೇಶ್ಮೀ ಇದ್ದರು.