ಬೆಂಗಳೂರು, ಫೆ. 28: ಇದೇ ಸೋಮವಾರದಿಂದ ಮುಂದುವರೆಯಲಿರುವ ವಿಧಾನಮಂಡಲ ಅಧಿವೇಶನದ ಎರಡೂ ಸದನಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್, ದೊರೆಸ್ವಾಮಿ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಅವಹೇಳನಕಾರಿ ಹೇಳಿಕೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಬಿಜೆಪಿಯ ನಡೆ ವಿರೋಧಿಸಿ ಕಾಂಗ್ರೆಸ್ ಧ್ವನಿಯೆತ್ತಲಿದೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರನ್ನು ನಿಂದಿಸಿದಕ್ಕಾಗಿ ಬಿಜೆಪಿ ಸರ್ಕಾರ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗ ಕ್ಷಮೆಯಾಚಿಸದೇ ಇದ್ದಲ್ಲಿ ವಿಧಾನಮಂಡಲ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಎಚ್ಚರಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೊರೆಸ್ವಾಮಿ ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಎಲ್ಲಾ ಸರ್ಕಾರಗಳ ಕಾಲದಲ್ಲಿಯೂ ಅವರು ಜನಪರ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ. ಇಂತಹ ವ್ಯಕ್ತಿ ಬಗ್ಗೆ ಯಾರೇ ಅವಹೇಳನಕಾರಿ ಹೇಳಿಕೆ ನೀಡುವುದಾಗಲೀ ಹಗುರವಾಗಿ ಮಾತನಾಡುವುದಾಗಲೀ ಮಾಡಬಾರದು ಎಂದು ಕಿಡಿಕಾರಿದರು.
ಏಳು ತಿಂಗಳಿನಿಂದ ಹೈದ್ರಾಬಾದ್ ಕರ್ನಾಟಕದ ಭಾಗದ ಮೇಲೆ ಬಿಜೆಪಿ ಅನ್ಯಾಯವೆಸಗುತ್ತಾ ಬಂದಿದೆ. ಬೀದರ್‌ನಲ್ಲಿ 200 ಕೋಟಿ ರೂ. ವೆಚ್ಚದ ಹನಿ ನೀರಾವರಿಗೆ ಆಯವ್ಯಯದಲ್ಲಿ ಘೋಷಣೆಯಾಗಿ ಹಣ ಮೀಸಲಿಟ್ಟಿದರೂ ಇದುವರೆಗೂ ಯಾವುದೇ ಕೆಲಸ ಆಗಿಲ್ಲ. ಬರಿ ಕಲ್ಯಾಣ ಕರ್ನಾಟಕ ಎಂದು ಘೋಷಣೆ ಮಾಡಿದರೆ ಸಾಲದು. ನಿಜಕ್ಕೂ ಹೈದರಾಬಾದ್ ಕರ್ನಾಟಕದ ಕಲ್ಯಾಣವಾಗಬೇಕು. ನಿಂತಿರುವ ಆಶ್ರಯ ಮನೆಗಳಾಗಲೀ, ನಿವೇಶನಗಳಾಗಲೀ ಇನ್ನೂ ಪ್ರಾರಂಭವಾಗಿಲ್ಲ. ಈ ಭಾಗದ ಜನರನ್ನು ಬಿಜೆಪಿ ಸರ್ಕಾರ ಬೀದಿಗೆ ತಂದಿದೆ. ಬೀದರ್ ತಾಲೂಕಿನಲ್ಲಿ ಸಾವಿರಾರು ಮಹಿಳೆಯರು ರಾಜೀವ್ ಗಾಂಧಿ ನಿಗಮದ ಅಧಿಕಾರಿಗಳಿಗೆ ಘೇರಾವ್ ನಿರ್ಬಂಧ ಹೇರಿದ್ದಾರೆ. ಕೆಲವು ಕಡೆ ಆಯವ್ಯಯದಲ್ಲಿ ಇಲ್ಲದಿದ್ದರೂ ಸರ್ಕಾರ ಹೊಸ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಆದರೆ ಮೈತ್ರಿ ಸರ್ಕಾರದಲ್ಲಿ ಆಯವ್ಯಯದಲ್ಲಿ ಘೋಷಣೆಯಾಗಿದ್ದರೂ ಕಾರ್ಯಕ್ರಮಗಳನ್ನು ಜಾರಿಗೊಳಿಸಿಲ್ಲ. ಬಿಜೆಪಿಯ ಈ ತಾರತಮ್ಯ ನೀತಿ ಖಂಡಿಸಿ ಅಧಿವೇಶನದ ಜೊತೆಗೆ ರಾಜ್ಯಾದ್ಯಂತ ಪಕ್ಷದಿಂದ ಹೋರಾಟ ಮಾಡಲಾಗುವುದು ಎಂದು ಖಂಡ್ರೆ ಎಚ್ಚರಿಸಿದರು.
ಸಮಾಜದ ಸ್ವಾಸ್ಥ್ಯವನ್ನು ಕದಡುವಂತಹ ಪ್ರಯತ್ನ ಮಾಡುವುದು, ಪ್ರಚೋದನಕಾರಿ ಹೇಳಿಕೆ ಕೊಡುವುದನ್ನು ನೋಡಿದರೆ ಬಿಜೆಪಿ ಸರ್ಕಾರದಲ್ಲಿರುವವರು ಮನುಷ್ಯರೇ? ಎಂಬ ಅನುಮಾನ ಮೂಡುತ್ತಿದೆ ಎಂದರು.
ದೆಹಲಿಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು ಪೊಲೀಸರು ಅಮಾನವೀಯ ನಡೆಯಿಂದಾಗಿ. ಪೊಲೀಸರು ಅಲ್ಲಿ ಕ್ರೂರವಾಗಿ ನಡೆದುಕೊಳ್ಳುತ್ತಿದ್ದಾರೆ. ಕೇಂದ್ರದ ಗೃಹ ಸಚಿವ ಅಮಿತ್ ಷಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಪಡೆಯಬೇಕು ಇಲ್ಲವೇ ರಾಷ್ಟ್ರಪತಿಗಳು ಶಾ ರಾಜೀನಾಮೆಗೆ ಆಗ್ರಹಿಸಬೇಕು ಎಂದು ಖಂಡ್ರೆ ಒತ್ತಾಯಿಸಿದರು.
ನ್ಯಾಯಾಲಯದ ನ್ಯಾಯಾಧೀಶರನ್ನೇ ಹೆದರಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ನ್ಯಾಯಾಧೀಶರಾದ ಮುರುಳೀದರ್ ಅವರನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿದೆ. ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದಿದ್ದರು. ಅನೇಕ ಕಡೆ ನ್ಯಾಯಪಾಲಿಕೆ ನ್ಯಾಯಾಧೀಶರನ್ನು ಹೆದರಿಸುವ ಕೆಲಸ ಬಿಜೆಪಿ ಸರ್ಕಾರದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದು ಜನರು ಅಪಾಯದಲ್ಲಿದ್ದಾರೆ. ವಾಕ್, ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ. ಲೋಕಸಭೆ ವಿಧಾನಸಭೆ ಇಂದಿಗೂ ಅಸ್ತಿತ್ವದಲ್ಲಿದೆ ಎಂದರೆ ಅದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಸಂವಿಧಾನವೇ ಕಾರಣವಾಗಿದೆ ಎಂದು ಹೇಳಿದರು.
ಪಡಿತರ ಚೀಟಿಯಲ್ಲಿ ಅಕ್ಕಿ ಕಡಿತಗೊಳಿಸಿ ಗೋಧಿ ನೀಡುವ ನಿರ್ಧಾರವನ್ನು ಸರ್ಕಾರ ಕೈಬಿಟ್ಟು ಏಳು ಕೆಜಿ ಅಕ್ಕಿ ನೀಡಲೇಬೇಕು. ಬೇಕಾದರೆ ಹೆಚ್ಚುವರಿಯಾಗಿ ಗೋಧಿ ಕೊಡಲಿ. ಬಸ್ ದರ ಹೆಚ್ಚಳ, ವೈದ್ಯಕೀಯ ಶುಲ್ಕ ಹೆಚ್ಚಳವನ್ನು ಸರ್ಕಾರ ಹಿಂಪಡೆಯಬೇಕು. ತೊಗರಿ ಬೆಂಬಲ ಬೆಲೆ ಹೆಚ್ಚಿಸಬೇಕು ಎಂದು ಖಂಡ್ರೆ ಒತ್ತಾಯಿಸಿದರು.
ಬೀದರ್‌ನಲ್ಲಿ ಸಚಿವ ಪ್ರಭು ಚೌಹಾಣ್ ಬೆಂಬಲಿಗರು ಆರ್‌ಟಿಓ ಅಧಿಕಾರಿಗಳಿಗೆ ಹೆದರಿಸಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಈಶ್ವರ್ ಖಂಡ್ರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬ್ಲಾಕ್‌ಮೇಲ್ ಸಂಸ್ಕೃತಿ ರಾಜ್ಯದಲ್ಲಿ ಹೆಚ್ಚಳವಾಗಿದೆ. ನಕಲಿ ರಾಷ್ಟ್ರೀಯತೆಯನ್ನು ಬಿಂಬಿಸುವ ಹುನ್ನಾರ ನಡೆಯುತ್ತಿದೆ. ಮಂತ್ರಿಗಳು ಜಿಲ್ಲೆಗಳಿಗೆ ಭೇಟಿಕೊಡುವ ಉದ್ದೇಶ ಜನರಿಗೆ ಒಳ್ಳೆಯದಾಗಲೀ ಎನ್ನುವುದಾಗಬೇಕು. ಈ ರೀತಿ ಜನರಿಗೆ ಧಮಕಿ ಹಾಕುವುದು ಸರಿಯಲ್ಲ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ. ಬೆಂಬಲಿಗರ ಬ್ಲಾಕ್‌ಮೇಲ್ ವಿಚಾರವಾಗಿ ಸಚಿವರು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಪಕ್ಷದ ರಾಜಕೀಯ ವಿಚಾರವಾಗಿ ಮಾತನಾಡಿದ ಈಶ್ವರ್ ಖಂಡ್ರೆ, ಆದಷ್ಟು ಬೇಗ ಕೆಪಿಸಿಸಿಗೆ ಅಧ್ಯಕ್ಷರ ನೇಮಕವಾಗಲಿದೆ. ನಮಗೂ ಬೇಗ ಅಧ್ಯಕ್ಷರು ಸಿಗಲಿ ಎಂಬ ನಿರೀಕ್ಷೆಯಿದೆ ಎಂದರು.
ಭೂಗತಪಾತಕಿ ರವಿ ಪೂಜಾರಿಯಿಂದ ಈ ಹಿಂದೆ ಕಾಂಗ್ರೆಸ್ ಮುಖಂಡರಿಗೆ ಧಮಕಿ ವಿಚಾರವಾಗಿ ತನಿಖೆಯೂ ಆಗಲೀ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.