ಸ್ವಾತಂತ್ರ್ಯ ವೀರರ-ತ್ಯಾಗ ಬಲಿದಾನ ಸ್ಮರಣೀಯ: ಡಾ.ಹೂಗಾರ

ಸ್ವಾತಂತ್ರ್ಯ ವೀರರ-ತ್ಯಾಗ ಬಲಿದಾನ ಸ್ಮರಣೀಯ: ಡಾ.ಹೂಗಾರ  The sacrifices of freedom fighters are memorable: Dr. Hugara

ತಾಳಿಕೋಟಿ 15: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನ ಸ್ಮರಿಸಿ ಗೌರವ ಸಲ್ಲಿಸುವುದರ ಜೊತೆಗೆ ಸಶಕ್ತ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಪಣ ತೊಡಬೇಕಾಗಿದೆ ಎಂದು ತಹಸಿಲ್ದಾರ್ ಡಾ.ವಿನಯಾ ಹೂಗಾರ ಹೇಳಿದರು.  

ಶುಕ್ರವಾರ ಪಟ್ಟಣದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲೂಕಾಡಳಿತದ ವತಿಯಿಂದ ಹಮ್ಮಿಕೊಂಡ 79ನೇ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಭಾರತ ಸ್ವಾತಂತ್ರ್ಯದ ಈ 79 ವರ್ಷಗಳಲ್ಲಿ ಕೃಷಿ ಆರೋಗ್ಯ ಶಿಕ್ಷಣ ತಂತ್ರಜ್ಞಾನ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಗಣನೀಯವಾದ ಪ್ರಗತಿಯನ್ನು ಸಾಧಿಸಿದೆ ಇವತ್ತು ಇಡೀ ವಿಶ್ವ ಭಾರತದ ಕಡೆಗೆ ನೋಡುತ್ತಿದೆ ಇದರ ಹೊರತಾಗಿಯೂ ನಾವು ಹಲವಾರು ಸವಾಲು ಹಾಗೂ ಸಮಸ್ಯೆಗಳನ್ನೂ ಸಹ ಎದುರಿಸುತ್ತಿದ್ದೇವೆ ಇವುಗಳನ್ನು ಮೆಟ್ಟಿ ನಿಲ್ಲಲು ನಾಗರಿಕರದ ನಾವು ನಮ್ಮ ನಮ್ಮ ಜವಾಬ್ದಾರಿಗಳನ್ನು ತಿಳಿದು ದೇಶಕ್ಕಾಗಿ ಕೆಲಸ ಮಾಡುವ ಸಂಕಲ್ಪವನ್ನು ಇಂದು ನಾವೆಲ್ಲರೂ ಇಲ್ಲಿ ಮಾಡಬೇಕಾಗಿದೆ ಎಂದರು.  

ಆರಂಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಗರಿಷ್ಠ ಅಂಕಗಳಿಸಿದ ಸರ್ಕಾರಿ ಶಾಲಾ ಕಾಲೇಜಿನ ಮೂವರು ವಿದ್ಯಾರ್ಥಿಗಳಿಗೆ, ಕೃಷಿ ಕ್ಷೇತ್ರದ ಸಾಧಕ ರೈತರಿಗೆ, ಕರಾಟೆ ಗೋಲ್ಡ್‌ ಮೆಡಿಲಿಸ್ಟ್‌ ರಿಗೆ ಹಾಗೂ ಗೃಹರಕ್ಷಕ ದಳದವರಿಗೆ ಸನ್ಮಾನಿಸಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.  

ಪಿಎಸ್‌ಐ ಆರ್‌.ಎಸ್‌.ಭಂಗಿ ನೇತೃತ್ವದಲ್ಲಿ ಪೋಲಿಸ್ ಇಲಾಖೆ, ಗೃಹರಕ್ಷಕ ದಳ, ಏನ್ಸಿಸಿ ಹಾಗೂ ವಿಪಿಎಂ ಶಾಲಾ ವಿದ್ಯಾರ್ಥಿಗಳು ಧ್ವಜವಂದನೆ ಸಲ್ಲಿಸಿದರು. ಪುರಸಭೆ ಅಧ್ಯಕ್ಷೆ ಜುಬೇದಾಬೇಗಂ ಜಮಾದಾರ, ಮುಖ್ಯಾಧಿಕಾರಿ ವಸಂತ ಪವಾರ, ಪಿಎಸ್‌ಐ ಜ್ಯೋತಿ ಖೋತ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಸಂಗಮೇಶ ದೇಸಾಯಿ ಒಳಗೊಂಡಂತೆ ಪುರಸಭೆ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ರಾಜಕೀಯ ಮುಖಂಡರು, ಕನ್ನಡ ಪರ ಸಂಘಟನೆಗಳ ಹಾಗೂ ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಇದ್ದರು.