ಸಮಾಜ ಕಲ್ಯಾಣ ಇಲಾಖೆ ಕಚೇರಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಾರ್ವಜನಿಕರ ಪರದಾಟ

ಸಮಾಜ ಕಲ್ಯಾಣ ಇಲಾಖೆ ಕಚೇರಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಾರ್ವಜನಿಕರ ಪರದಾಟ The road to the Social Welfare Department office has completely deteriorated, causing public outcry.

ಸವದತ್ತಿ 24 : ಪಟ್ಟಣದ ಭಗೀರಥ ಸರ್ಕಲ್ ಸಮೀಪವಿರುವ ಸಮಾಜ ಕಲ್ಯಾಣ ಇಲಾಖೆ ಕಾರ್ಯಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಕಚೇರಿಗೆ ತಲುಪಲು ಹರಸಾಹಸ ಪಡುವಂತಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಈ ಕಚೇರಿಗೆ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ವೃದ್ಧರು ಹಾಗೂ ಸಾರ್ವಜನಿಕರು ವಿವಿಧ ಕೆಲಸಗಳಿಗಾಗಿ ಭೇಟಿ ನೀಡುತ್ತಾರೆ. ಆದರೆ, ಕಚೇರಿಗೆ ಹೋಗುವ ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ಮಳೆ ಬಂದರಂತೂ ರಸ್ತೆ ಕೆಸರು ಗದ್ದೆಯಂತಾಗುತ್ತಿದೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಅನಾಹುತಕ್ಕೆ ಈಡಾಗುವ ಸಂಭವ ಹೆಚ್ಚಿದೆ. ಸರ್ಕಾರಿ ಕಚೇರಿ ಇರುವ ಜಾಗದ ರಸ್ತೆಯೇ ಈ ಸ್ಥಿತಿಯಲ್ಲಿದ್ದರೆ ಸಾರ್ವಜನಿಕರ ಪಾಡೇನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.  

ಕಚೇರಿಯ ಸ್ವಂತ ವಾಹನಗಳು ಓಡಾಡಲು ಕಷ್ಟಪಡುತ್ತಿದ್ದು, ಸಾರ್ವಜನಿಕರು ತಮ್ಮ ಬೈಕ್ ಮತ್ತು ಇತರ ವಾಹನಗಳಲ್ಲಿ ಈ ರಸ್ತೆಯಲ್ಲಿ ಬರಲು ಭಯಪಡುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ, ಕಚೇರಿಯವರೆಗೆ ಸುಸಜ್ಜಿತ ರಸ್ತೆ ನಿರ್ಮಿಸಿ ಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆರ್‌.ಆರ್‌.ಕುಲಕರ್ಣಿ, ಮಾತನಾಡಿ ರಸ್ತೆಯ ದುಸ್ಥಿತಿಯ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಶೀಘ್ರವಾಗಿ ದುರಸ್ತಿಪಡಿಸುವಂತೆ ತಿಳಿಸಲಾಗಿದೆ ಎಂದರು.