ಅಂದು ಸುಭಾಷ್‌ಬಾಬುಗೆ ಸ್ಪಷ್ಟವಾದ ದಾರಿ ಗೋಚರಿಸಿತ್ತು. ನಾನು ಅಂದುಕೊಂಡಂತೆ ಇಲ್ಲಿ ಏನು ನಡೆಯುವುದಿಲ್ಲ. ಎಲ್ಲರ ಗಮನ ಬೇರೆಯ ಕಡೆಗೆ ಇದೆ. ನನ್ನ ನಿಲುವನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ನಮ್ಮವರೇ ಇಲ್ಲ. ನನ್ನ ನಿಲುವನ್ನು ಒಪ್ಪಿಕೊಳ್ಳದೇ ಸ್ವಾತಂತ್ರ್ಯ ಪಡೆಯುವುದು ಸುಲಭವೂ ಅಲ್ಲ. ಆದರೆ ಅದನ್ನು ಅರ್ಥ ಮಾಡಿಸುವುದು ವ್ಯರ್ಥವಾದ ಕಾರ್ಯದಂತೆ ಕಾಣುತ್ತಿದೆ. ಅರ್ಥಮಾಡಿಕೊಳ್ಳಬೇಕಾದವರು ಅಪಾರ್ಥಕ್ಕೆ ಎಡೆ ಮಾಡಿಕೊಡುವ ಹಾಗೆ ನಡೆದುಕೊಳ್ಳುತ್ತಲಿದ್ದಾರೆ. ಮುಂದಿನ ದಾರಿಯೂ ಹೀಗೆ ಸವೆಸಿದರೆ ಸ್ವತಂತ್ರ್ಯ ಭಾರತದ ಕನಸು ಕನಸಾಗಿಯೇ ಉಳಿಯುತ್ತದೆ. ಬಂಧನದಲ್ಲಿರುವ ಭಾರತಾಂಬೆ ಹಾಗೆಯೇ ಕೊರಗಬೇಕಾಗುತ್ತದೆ. ಇದೆಲ್ಲವನ್ನು ಬದಲಾಯಿಸಬೇಕಾದರೆ ನಾನೇ ಗಟ್ಟಿ ನಿರ್ಧಾರ ಮಾಡಬೇಕು. ನನ್ನ ನಿಲುವನ್ನು ಒಪ್ಪಿಕೊಳ್ಳುವ ಜನರಿಗಾಗಿ ನಾನು ಹುಡುಕಾಟ ಮಾಡಬೇಕು. ಸತ್ತರು ಸರಿಯೇ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲೇ ಬೇಕು. ಎನ್ನುವ ಇರಾದೆಯಿಂದ ಸುಭಾಷ್‌ಬಾಬು ಒದ್ದಾಡುತ್ತಿದ್ದರು. ಮನಸ್ಸಿನಲ್ಲಿ ಬಗೆಹರಿಯದ ನೂರಾರು ಪ್ರಶ್ನೆಗಳು. ಯಾವದಾರಿ ತುಳಿಯಬೇಕು ಎನ್ನುವುದು ತಿಳಿಯದಂತ ಥಳಮಳ. ಇದರ ನಡುವೆ ತನ್ನ ಪ್ರಯತ್ನವನ್ನು ಮುನ್ನಡೆಸುವ ನಿರ್ಧಾರ. ಮೊದಲೇ ರಾಷ್ಟ್ರೀಯ ಕಾಂಗ್ರೆಸ್ ಎನ್ನುವುದು ಒಡೆದ ಮನೆಯಾಗಿತ್ತು. ಒಂದು ಮನೆಯಲ್ಲಿ ಮಹಾತ್ಮಾ ಗಾಂಧಿ, ಮತ್ತೊಂದರಲ್ಲಿ ಸುಭಾಶ್ಚಂದ್ರ. ಈ ಮನೆಗಳ ಮಧ್ಯದಲ್ಲಿ ಬೇಳೆ ಬೇಯಿಸಿಕೊಳ್ಳುವುದಕ್ಕೆ ಹವಣಿಸುವ ಬಾಲಬಡುಕರು. ಹೀಗಿರುವಾಗ ಯಾರ ವಿಚಾರಧಾರೆಗಳಿಗೂ ಸ್ಪಷ್ಟತೆ ದೊರೆಯದಂತ ಸ್ಥಿತಿ. ಇದೆ ಬೋಸರು ಕಾಂಗ್ರೆಸ್‌ನಿಂದ ಹೊರಬರಲು ಕಾರಣವಾಯಿತು. ಚುನಾವಣೆಗೆ ಸ್ಪರ್ಧೇ ಮಾಡಿದಾಗಲೇ ಸುಭಾಶರ ವಿರುದ್ಧ ಪಟ್ಟಾಭಿ ಸೀತಾರಾಮಯ್ಯರನ್ನು ಕಣಕ್ಕಿಳಿಸಿ ಶಕ್ತಿ ಪ್ರದರ್ಶನ ಮಾಡಲಾಯಿತು. ಆದರೂ ಕೂಡ ಸೀತಾರಾಮಯ್ಯ ಹೀನಾಯವಾಗಿ ಸೋತರು. ಆದರೆ ಆ ಸೋಲನ್ನು ಒಪ್ಪಿಕೊಳ್ಳುವ ದೊಡ್ಡತನವನ್ನು ತೋರದೆ, ಕಾಂಗ್ರೇಸ್‌ನಲ್ಲೇ ಆಂತರಿಕ ಬಂಡಾಯವೆದ್ದಾಗ, ನೇರವಾಗಿ ನಿಮ್ಮ ದಾರಿ ನಿಮಗೆ ನಮ್ಮ ದಾರಿ ನಮಗೆ ಎನ್ನುವ ಮೂಲಕ ಬಿಟ್ಟು ಹೋಗಿ ಎನ್ನುವ ಮಾತನ್ನು ಹೇಳಿದ್ದೇ ಭಾಪು. ಇದು ಒಂದು ರೀತಿ ಭಾರತ ಹೋರಾಟದ ಹಾದಿಗೆ ತಿರುವು ಸಿಕ್ಕಂತ ಸನ್ನಿವೇಶ. ಅಲ್ಲಿಂದ ಸುಭಾಶರ ದೃಷ್ಠಿಕೋನವೇ ಬದಲಾಗಿ ಹೋಯಿತು. ಭಾರತದ ಹುಲಿ ನೇರವಾಗಿ ಬ್ರಿಟೀಷರ ಮೆಲೆರಗಲು ಮುಂದಾಯಿತು.
ರಾಷ್ಟ್ರೀಯ ಕಾಂಗ್ರೆಸ್‌ನಿಂದ ತಮ್ಮ ಹೋರಾಟದ ದಾರಿಗೆ ಯಾವುದೇ ರೀತಿಯ ಸಹಕಾರ ಸಿಕ್ಕದು ಎನ್ನುವುದನ್ನು ಅರಿತ ಸುಭಾಷ್ ತನ್ನ ನಿಲುವನ್ನು ವ್ಯಕ್ತಪಡಿಸಲು ಮತ್ತು ತಮ್ಮ ವಿಚಾರವನ್ನು ಒಪ್ಪುವ ಜನರನ್ನು ಹುಡುಕುತ್ತ ಮಹ್ಮದಾಲಿ ಜಿನ್ನಾಬಳಿ ಬಂದರು. ಅದಾಗಲೇ ಜಿನ್ನಾ ತಲೆಯಲ್ಲಿ ಧರ್ಮದ ಅಫೀಮಿನ ಘಮಲು ಕಾರ್ಯ ಮಾಡಲು ಶುರು ಮಾಡಿತ್ತು. ಸುಭಾಶರದು ದೇಶ ಉಳಿಸುವ, ಸ್ವಾತಂತ್ರ್ಯಗಳಿಸುವ ವಿಚಾರದಲ್ಲಿ ಧರ್ಮದ ಹಸ್ತಕ್ಷೇಪ ಸರಿಯೋ, ತಪ್ಪೋ ತಿಳಿಯದಂತಾಯಿತು. ಹೀಗೆ ಆಲೋಚಿಸುತ್ತಲೇ ಮುಂದಿನ ಹೆಜ್ಜೆ ಇಟ್ಟಿದ್ದು ವಿನಾಯಕ್ ದಾಮೋದರ ಸಾವರ್ಕರ್ ಅವರಲ್ಲಿ. 1940 ಜೂನ್ 22 ರಂದು ಸಾವರ್ಕರ್ ಭೇಟಿಗೆ ಸುಭಾಷ್‌ಬಾಬು ಬಂದಾಗ ಅವರ ಎಲ್ಲ ಸವಾಲುಗಳಿಗೆ ಜವಾಬು ದೊರೆತವು ಮಾತ್ರವಲ್ಲ; ತಮ್ಮ ದಾರಿಯಲ್ಲಿ ಬಿದ್ದಿದ್ದ ಮಂಜು ಕರಗಿ ನಿಚ್ಚಳತೆ ಕಾಣಲಾರಂಭಿಸಿತು. ಸುಭಾಷರ ವಿಚಾರಗಳನ್ನು ಅರಿತ ಸಾವರ್ಕರ್ “ಈ ದೇಶದಲ್ಲಿದ್ದುಕೊಂಡು ಮನವಿ ಪತ್ರ ಸಲ್ಲಿಸುತ್ತ. ಇಲ್ಲವೇ ಕಾನೂನುಭಂಗ ಚಳುವಳಿ ಎನ್ನುತ್ತ ಯಾವುದೋ ಒಂದು ಕ್ರಾಂತಿಯ ನಿಲುವಿನಿಂದ ಸೆರೆಸಿಕ್ಕು ಕಾರಾಗ್ರಹದಲ್ಲಿ ಕೊಳೆಯುವುದಕ್ಕಿಂತ ರಾಸ್ ಬಿಹಾರಿ ಬೋಸರ ಹಾಗೆ ಬೇರೆದೇಶದಲ್ಲಿದ್ದುಕೊಂಡು, ಸಮಯನೋಡಿ ಜಪಾನ ಹಾಗೂ ಜರ್ಮನರ ಶಸ್ತ್ರಾಸ್ತ್ರಗಳ ಸಹಾಯದಿಂದ, ಭಾರತದ ದೇಶಭಕ್ತ ಸೈನಿಕರನ್ನು ಒಂದು ಮಾಡಿ, ಬ್ರಿಟೀಷರ ಮೇಲೆ ಮುಗಿಬಿದ್ದರೆ ಮಾತ್ರ ಸ್ವಾತಂತ್ರ್ಯ ಗಳಿಸಲು ಸಾಧ್ಯ. ನೀವೇಕೆ ಅಂತ ಕಾರ್ಯಕ್ಕೆ ಮುಂದಾಗಬಾರದು. ಜರ್ಮನಿ ಹಾಗೂ ಜಪಾನಿಗೆ ಸೆರೆ ಸಿಕ್ಕಿರುವ ಸಾವಿರಾರು ಭಾರತೀಯ ಸೈನಿಕರನ್ನು ಬಿಡುಗಡೆ ಮಾಡಿಸಿ ಸೈನ್ಯ ನಿರ್ಮಿಸಿದರೆ ಬ್ರಿಟೀಷರ ತೊಡೆಯನ್ನೆ ಮುರಿಯಬಹುದು. ಭಾರತ ದೇಶದಲ್ಲಿ ಕ್ರಾಂತಿ ಮಾಡಿ ಶಸ್ತ್ರಾಸ್ತ್ರ ಹೋರಾಟ ಮಾಡುವ ಕ್ಷಾತ್ರ ತೇಜಸ್ಸು ಕೇವಲ ಇಬ್ಬರು ಮೂರಲ್ಲಿ ಮಾತ್ರವಿದೆ. ಅದರಲ್ಲಿ ನೀವೂ ಒಬ್ಬರು ಎಂದು ನಾನು ನಂಬಿದ್ದೇನೆ” ಎನ್ನುವ ಮಾತುಗಳನ್ನು ಕೇಳುತ್ತಲೇ ಸುಭಾಶ್ ಬಾಬುವಿನ ನಿಲುವು ಸ್ಪಷ್ಟವಾಗಿ ಹೋಯಿತು. ಮುಂದೆ ಕಾರಾಗ್ರಹವಾಸ ಅನುಭವಿಸುವ ಸಂದರ್ಭದಲ್ಲಿ ಸಾವರ್ಕರರ ಮಾತು ಅವರ ಕಿವಿಯಲ್ಲಿ ಗುಂಇಗುಡುತ್ತಿದ್ದವು. ಅದೇ ಮುಂದೊಂದು ದಿನ “ಆಜಾದ ಹಿಂದ ಪೌಜ್” ನಿರ್ಮಾಣಕ್ಕೆ ಕಾರಣವಾಯಿತು.
ಸಾವರ್ಕರ ಮಾತಿನಿಂದ ಪ್ರೇರಿತರಾಗಿ ಸಶಸ್ತ್ರ ಹೋರಾಟಕ್ಕಾಗಿ ಸುಭಾಶ್ಚಂದ್ರರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಒಂದು ಕಡೆ ಕಾಲಾಪಾಣಿ ಶಿಕ್ಷೆಗೆ ಒಳಗಾಗಿ ನರಳಿದ ಸಾವರ್ಕರ ಬಿಟ್ಟರೆ, ದೇಶ ದೇಶವನ್ನು ಸುತ್ತಿ ವಿದೇಶದಲ್ಲಿಯೇ ಭಾರತೀಯ ಸೇನೆಯನ್ನು ಕಟ್ಟುವ ಗಟ್ಟಿತನವನ್ನು ಪ್ರದರ್ಶಿಸಿದ ಸುಭಾಶ್ಚಂದ್ರರ ಹೋರಾಟವೇ ನಿಜವಾದ ಭಾರತೀಯನ ಕಣ್ಣಿಗೆ ಕಟ್ಟುತ್ತದೆ. ವೇಶಬದಲಿಸಿಕೊಂಡು ವಿದೇಶಕ್ಕೆ ಹಾರುವುದು ಅಷ್ಟು ಸುಲಭವಲ್ಲದ ಕಾಲದಲ್ಲಿ ಕಾಬೂಲ ಮೂಲಕ ಅಫ್ಗಾನಿಸ್ಥಾನ ಸೇರಿ ಅಲ್ಲಿಂದ ಜರ್ಮನಿ, ಜಪಾನ, ಇಟಲಿಗಳಿಗೆ ಸಂಚರಿಸಿ ಬ್ರಿಟೀಷರ ವಿರುದ್ಧ ತೊಡೆತಟ್ಟುವ ಮಟ್ಟಕ್ಕೆ ಸುಭಾಶ್ಚಂದ್ರ ಹೋಗುತ್ತಾರೆಂದು ಯಾರೂ ಕನಸಲ್ಲೂ ಊಹಿಸಿರಲಿಲ್ಲ. ಅದರಲ್ಲೂ ಕಾಂಗ್ರೇಸ್ಸಿನ ಹಿತ ಶತ್ರಗಳೇ ಸುಭಾಶರ ಹೋರಾಟದ ಹಾದಿಯನ್ನಾಗಲಿ, ಅದಕ್ಕಾಗಿ ಅವರ ಅನುಸರಿಸುವ ತಂತ್ರವನ್ನಾಗಲಿ ಕನಸಿನಲ್ಲಿಯೂ ಕಂಡಿದ್ದಿಲ್ಲ. ಅವರು ಆಜಾದ ಹಿಂದ ಫೌಜ್ ಕಟ್ಟಿದ್ದೇ ಒದು ರೋಚಕವಾದ ಇತಿಹಾಸವಾಗಿದೆ. ಇತ್ತ ಭಾರತದ ಸ್ವತಂತ್ರ್ಯಕ್ಕಾಗಿ ದೇಶವನ್ನು ಬಿಟ್ಟು ಬರಿಗೈ ಫಕೀರನಾಗಿ, ವಿದೇಶಗಳಿಗೆ ತೆರಳಿ ಸಂಘಟನೆಯಲ್ಲಿ ನಿರತನಾದರೆ; ಅತ್ತ ಭಾರತದಲ್ಲಿ ಹಿತಶತ್ರುಗಳು ಬ್ರಿಟೀಷರ ಎಂಜಲನ್ನು ತೀರ್ಥದಂತೆ ನೆಕ್ಕುತ್ತ ಸುಭಾಶರ ವಿರುದ್ಧ ಅಪಪ್ರಚಾರಕ್ಕೆ ಮುಗಿಬಿದ್ದವು. ಮನಸ್ಸಿಗೆ ನಾಟುವ ವಿಚಾರಗಳಾದರು ಅವುಗಳನ್ನು ಅಲಕ್ಷ್ಯ ಮಾಡಿದ ಬೋಸರು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್, ಇಟಲಿಯ ಸರ್ವಾಧಿಕಾರಿ ಮುಸೊಲಿನಿ, ಜಪಾನ್ ಅಧ್ಯಕ್ಷ ಟೋಜೋರಂತ ಘಟಾನುಗಟಿಗಳನ್ನು ಭೇಟಿ ಮಾಡಿ ಕೊನೆಗೂ ತಮ್ಮ ಕಾರ್ಯದಲ್ಲಿ ಯಶಸ್ಸು ಕಂಡುಕೊಂಡರು. ಯುದ್ಧದಲ್ಲಿ ಸೆರೆ ಸಿಕ್ಕ ಸೈನಿಕರನ್ನು ಬಿಡುಗಡೆ ಮಾಡಿಸಿ ಅಜಾದ್ ಹಿಂದ್ ಫೌಜ್‌ನ್ನು ನಿರ್ಮಾಣ ಮಾಡಿದ್ದು ಮಾತ್ರವಲ್ಲದೆ ವಿದೇಶದಲ್ಲಿರುವ ಭಾರತೀಯರನ್ನು ಅದರಲ್ಲಿ ಸೇರಿಸಿಕೊಂಡು ಸೈನ್ಯದ ಗಾತ್ರವನ್ನು ಹಿಗ್ಗಿಸಿದರು ಮಾತ್ರವಲ್ಲ, ಭಾರತಕ್ಕೆ ನುಗ್ಗುವ ಶುಭಸಮಯಕ್ಕಾಗಿ ಚಾತಕಪಕ್ಷಿಯಂತೆ ಎದುರು ನೋಡುತ್ತಿದ್ದರು. ಸೈನಿಕರ ಆಹಾರ ಹಾಗೂ ಶಸ್ತ್ರಾಸ್ತ್ರಳಿಗಾಗಿ ಸಂಪನ್ಮೂಲ ಕ್ರೂಡಿಕರಣಕ್ಕಾಗಿ ಸುಭಾಶ ಭಾಷಣ ಮಾಡಿದರೆ ಎಷ್ಟೋಜನ ಮಹಿಳೆಯರು ತಮ್ಮ ಮೈಮೇಲಿನ ಒಡವೆಯನ್ನೇ ಬಿಚ್ಚಿಕೊಡುತ್ತಿದ್ದರು. ಅದೆಷ್ಟೋ ಶ್ರೀಮಂತರು ತಮ್ಮ ಇಡೀ ಆಸ್ತಿಯನ್ನು ಇವರಿಗೆ ನೀಡುತ್ತಿದ್ದರು ಎಂದಮೇಲೆ ಅರ್ಥ ಮಾಡಿಕೊಳ್ಳಿ ಸುಭಾಶರ ಮಾತಿನ ಶೈಲಿ ಹಾಗೂ ಅವರ ದೂರದೃಷ್ಠಿಯ ನಿರ್ಧಾರ ಹೇಗಿರಬೇಕು ಎಂದು. ಇತ್ತ ಬ್ರಿಟೀಷರ ಪಾದದ ಧೂಳನ್ನು ಹಣೆಗೆ ವಿಭೂತಿ ಮಾಡಿಕೊಂಡು, ಸ್ವಾತಂತ್ರ್ಯ ಸಿಕ್ಕ ನಂತರ ಪಟ್ಟಕ್ಕೇರುವ ದುರಾಲೋಚನೆಯಲ್ಲಿ ತೊಡಗಿದ್ದವರು ಇಂದು ಇತಿಹಾಸದಲ್ಲಿ ಹೀರೋ ಆಗಿ ಮಿಂಚಿದರೆ ದೇಶಕ್ಕಾಗಿ ಪ್ರಾಣ ಕೊಟ್ಟವರು ಖಳನಾಯಕರ ಪಟ್ಟ ಹೊತ್ತು ದಾರಿತಪ್ಪಿದ ದೇಶಭಕ್ತರಾಗುತ್ತಾರೆ ಎಂದರೆ ಇದು ನಮ್ಮ ದೌರ್ಭಾಗ್ಯವಲ್ಲದೇ ಮತ್ತೇನಾಗಲು ಸಾಧ್ಯ ನೀವೇ ಹೇಳಿ.
“ದೆಹಲಿಯ ಕೆಂಪುಕೋಟೆಯ ಮೇಲೆ ಸ್ವತಂತ್ರ ಭಾರತದ ತ್ರಿವರ್ಣ ಧ್ವಜ ಹಾರಿಸದ ಹೊರತು ಸುಮ್ಮನೆ ಕೂಡುವ ಹಾಗಿಲ್ಲ. ಭಾರತವನ್ನು ಮೊದಲು ಸ್ವತಂತ್ರಗೊಳಿಸುವುದು, ಆ ನಂತರ ಅದರ ಸ್ವಾತಂತ್ರ್ಯ ರಕ್ಷಣೆ ಮಾಡುವುದು. ಈ ಎರಡು ಜವಾಬ್ದಾರಿಗಳು ನಮ್ಮ ಹೆಗಲ ಮೇಲಿವೆ. ತುಮ್ ಮುಝೆ ಖೂನ್ ದೋ, ಮೈ ತುಮ್ಹೆ ಆಝಾದೀ ದೂಂಗಾ. ರಕ್ತಕ್ಕೆ ರಕ್ತವೇ ಸವಾಲು ಹಾಕುತ್ತಿದೆ, ಸಿದ್ಧರಾಗಿ, ಈಗ ನಾವು ಒಂದು ಕ್ಷಣವನ್ನು ವ್ಯರ್ಥ ಮಾಡುವಂತಿಲ್ಲ. ಶಸ್ತ್ರವನ್ನು ಕೈಗೆತ್ತಿಕೊಳ್ಳಿ. ಶತ್ರುವನ್ನು ಸಂಹರಿಸೋಣ. ಕೇವಲ ಎರಡು ವರ್ಷದಲ್ಲಿ ಸ್ವಾತಂತ್ರ್ಯ ಗಂಗೆಯಲ್ಲಿ ಮಹಾಮಜ್ಜನ ಮಾಡೋಣ. ಇಲ್ಲದಿದ್ದರೆ ಹುತಾತ್ಮರಿಗೆ ಯೋಗ್ಯವಾದ ಬಲಿದಾನ ಮಾಡೋಣ ದಿಲ್ಲಿಗೆ ಹೋಗುವ ದಾರಿಯಲ್ಲಿ ನಮ್ಮ ರಕ್ತ ಚೆಲ್ಲಿತೆಂಬ ತೃಪ್ತಿ ಕಡಿಮೆಯದೇನಲ್ಲ. ದಿಲ್ಲಿಕಾ ರಾಸ್ತಾ ಆಝಾದಿ ಕಾ ರಾಸ್ತಾ ಚಲೋ ದಿಲ್ಲಿ” ಎಂದು ಅವರು ತಮ್ಮ ಆಝಾದ್ ಹಿಂದ್ ಫೌಜ್‌ಗೆ ಹೇಳುತ್ತಿದ್ದರೆ ಕೇಳಿದ ಆ ವೀರರ ರಕ್ತ ಕುದಿಯುತ್ತಿತ್ತು. ನಮ್ಮ ದೇಶಲ್ಲೇ ಇದ್ದುಕೊಂಡು ನಮ್ಮವರನ್ನೇ ಸಂಘಟಿಸುವುದು ದೊಡ್ಡದೇನು ಅಲ್ಲ. ಯಾವುದೋ ದೇಶದಲ್ಲಿದ್ದುಕೊಂಡು ನಮ್ಮವರನ್ನು ಸಂಘಟಿಸಿ ಸಶಸ್ತ್ರ ಹೋರಾಟಕ್ಕೆ ಅಣಿಗೊಳಿಸುವುದೆಂದರೆ ಅದು ಕೇವಲ ಗಟ್ಟಿಗುಂಡಿಗೆಯುಳ್ಳ ಹುಲಿಗಳಿಗೆ ಮಾತ್ರ ಸಾಧ್ಯ. ಅದಕ್ಕೆ ಆಝಾದ ಹಿಂದ್ ಸರ್ಕಾರದ ತ್ರಿವರ್ಣ ಧ್ವಜದಲ್ಲಿ ಹುಲಿ ಹಾರುವ ಚಿತ್ರವಿತ್ತು. ಇಡೀ ತ್ರಿವರ್ಣಧ್ವಜ ಭಾರತವನ್ನು ಪ್ರತಿನಿಧಿಸಿದರೆ ಅದರಲ್ಲಿನ ಹುಲಿ ಸುಭಾಶರನ್ನು ಪ್ರತಿನಿಧಿಸುತ್ತಿತ್ತು. ಹಾಗಿತ್ತು ಸುಭಾಶ್ ಅವರ ಆರ್ಭಟ. ಅವರ ಸಿಡಿಲು ಸೀಳುವ ಘರ್ಜನೆ. ಇದು ನಮ್ಮ ದೇಶದ ಯುವಕರಿಗೆ ಗೊತ್ತೇ ಇಲ್ಲ. ಗೊತ್ತಿಲ್ಲ ಎನ್ನುವುದಕ್ಕಿಂತ ಹೆಚ್ಚಾಗಿ ವ್ಯವಸ್ಥಿತವಾಗಿ ಗೊತ್ತು ಮಾಡದಂತ ಸ್ಥಿತಿಯನ್ನು ಸೃಷ್ಠಿ ಮಾಡಲಾಗಿತ್ತು. ಅದು ಮುಂದುವರಿಯಿತು ಎಂದು ಹೇಳಬಹುದು.
ತನ್ನ ಶಕ್ತಿಯನ್ನು ಒಂದು ಮಾಡಿ ಮುನ್ನುಗ್ಗುತ್ತಿದ್ದ ಆಝಾದ್ ಹಿಂದ್ ಫೌಜ್‌ನ ರೆಜಿಮಂಟ್‌ಗಳಿಗೆ ಸುಭಾಶ್ಚಂದ್ರ ಬೋಸರು ತಮ್ಮನ್ನೇ ಭಹಿಷ್ಕಾರ ಮಾಡಿ ಅಪಮಾನ ಮಾಡಿದ ಅದೇ ಕಾಂಗ್ರೇಸ್‌ನ ಮಹಾನ್ ನಾಯಕರ ಹೆಸರುಗಳನ್ನು ನೀಡಿ ಗೌರವ ನೀಡಿದ್ದರು. ಆದರೆ ಅದೇ ಕಾಂಗ್ರೇಸ್‌ನ ನಾಯಕರುಗಳು ಸುಭಾಶರಿಗೆ ದಾರಿತಪ್ಪಿದ ದೇಶಭಕ್ತರು ಎನ್ನುವ ಹೆಸರನ್ನು ಕೊಟ್ಟು ಅವಮಾನಿಸಿದ್ದರು. ಒಂದು ವೇಳೆ ಅವರು ದಾರಿ ತಪ್ಪಿದ್ದರೆ ಅವರ ಹಿಂದೆ ಇಂಥ ಸೈನ್ಯ ಸಿದ್ಧವಾಗುತ್ತಿತ್ತೆ?. ಇಂದು ದೇಶದ ಸ್ವಾತಂತ್ರ್ಯಕ್ಕೆ ಇಂತವರೇ ಕಾರಣ ಎಂದು ಹೇಳುವ ಮಟ್ಟಕ್ಕೆ ನಾವು ತಲುಪಿದ್ದೇವೆ. ಸರಿ ಅವರ ಮಾತನ್ನೇ ಒಪ್ಪಿಕೊಳ್ಳುವುದಾದರೆ ಜಪಾನ್‌ದೇಶದ ಹಿಡಿತದಲ್ಲಿ ಅಂಡಮಾನ್ ನಿಕೋಬಾರ್ ದ್ವಿಪಗಳಲ್ಲಿ ಆಝಾದ್ ಹಿಂದ ಪೌಜ್ ಸರ್ಕಾರವನ್ನು ಸ್ಥಾಪಿಸಿ “ಶಹೀದ್” ಮತ್ತು “ಸ್ವರಾಜ್” ಎಂದು ನಾಮಕರಣ ಮಾಡಿ, ಭಾರತೀಯರು ಆಳ್ವಿಕೆ ಮಾಡಿದ್ದು ದೇಶದ ಮೊದಲನೇ ಸ್ವಾತಂತ್ರ್ಯವಲ್ಲವೇ? ಈ ಸ್ವಾತಂತ್ರ್ಯ ದೊರಕಿಸಿದ್ದು ಸುಭಾಶರಲ್ಲವೇ? ಅಂದಮೇಲೆ ಇವರನ್ನು ದಾರಿತಪ್ಪಿದ ದೇಶಭಕ್ತರು ಎನ್ನುವುದು ಸರಿಯೇ? ಇವರು ಮಾಡಿದ ಈ ಸಾಧನೆಗೆ ಕಿಂಚಿತ್ತು ಬೆಲೆ ಇಲ್ಲವೆ? ವಿಚಾರ ಮಾಡಿ. ಆದರು ನಮಗೆ ಇದು ಲೆಕ್ಕಕ್ಕಿಲ್ಲ. ಕಾರಣ ವ್ಯವಸ್ಥಿತವಾಗಿ ಕ್ರಾಂತಿಕಾರಿಗಳನ್ನು ಧಮನ ಮಾಡುವ ಹುನ್ನಾರ ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.
ನನಗೆ ಈಗಲು ಕಾಡುತ್ತಿದೆ, ಇಂಪಾಲ ಯುದ್ಧದಲ್ಲಿ ಹತ್ತು ಸಾವಿರ ಆಝಾದ್ ಹಿಂದ್ ಫೌಜ್ ಸೈನಿಕರನ್ನು ಕಳುಹಿಸಲಾಗಿತ್ತು. ಆದರೆ ಪ್ರಕೃತಿ ಈ ಸೈನಿಕರಿಗೆ ಸಾಥ ನೀಡದ ಕಾರಣ ಸೋಲಬೇಕಾಯಿತು ಆದರೂ ಇವರು ಕೈಗೊಂಡ ಹೋರಟವನ್ನು ಜಪಾನ್ ಸೈನ್ಯಾಧಿಕಾರಿಗಳೆ ಕೊಂಡಾಡುತ್ತಾರೆ ಎಂದಮೇಲೆ ಈ ವೀರರ ಪಡೆ ಭಾರತವನ್ನು ಪ್ರವೇಶಿಸಿದ್ದರೆ ಭಾರತದ ಸಧ್ಯದ ಇತಿಹಾಸ ಹೇಗಿರುತ್ತಿತ್ತು ಎಂದು. ದೇಶ ಸ್ವಾತಂತ್ರ್ಯವಾದ ಮೇಲೆ ಆಝಾದ್ ಹಿಂದ ಸರ್ಕಾರ ವಿಸರ್ಜನೆ ಮಾಡಿ ಜನರ ಆಯ್ಕೆಗೆ ಆಧ್ಯತೆ ನೀಡುತ್ತೇನೆ ಎಂದು ಹೇಳಿದ ಸುಭಾಶರು ಹಾಗೂ ಅಧಿಕಾರಕ್ಕಾಗಿಯೇ ದೇಶ ಒಡೆಯಲು ಮುಂದಾಗುವ ಜನರ ನಿಲುವುಗಳ ಮಧ್ಯೆ ಭಾರತೀಯರು ಹೇಗಿರುತ್ತಿದ್ದರು? ಮತ್ತು ಭಾರತ ಹೇಗಿರುತ್ತಿತ್ತು? ಎನ್ನುವುದನ್ನು ನೆನಸಿಕೊಂಡರೆ ಕುತುಹಲ ಮೂಡುತ್ತದೆ. ಆದರೆ ವಾಸ್ತವ ಬೇರೆಯಾಗಿದೆ ಆಝಾದ್ ಹಿಂದ ಪೌಜ್ ತನ್ನ ಅಸ್ಥಿತತ್ವವನ್ನು ಕಳೆದುಕೊಂಡಿತು. ಸುಭಾಶ್‌ಬಾಬು ನಿಗೂಢವಾಗಿ ಕಣ್ಮರೆಯಾದರು. ಬ್ರಿಟೀಷರು ಸ್ವಾತಂತ್ರ್ಯ ಕೊಟ್ಟರು. ಆಸೆ ಪಟ್ಟವರು ಅಧಿಕಾರ ಹಿಡಿದರು. ಕೊನೆಗೆ ದೇಶಕ್ಕಾಗಿ ಹೋರಾಡಿದವರು ಮರೆತು ಹೋದರು. ಅಲ್ಲಿಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷರ ಮೇಲೆರಗಿದ ಹುಲಿಗಳು ಇತಿಹಾಸದ ಪುಟದಲ್ಲಿ ಮೂಲೆಗುಂಪಾದರು.
ವಿಚಿತ್ರ ಹೇಗಿದೆ ಎಂದರೆ ತನ್ನನ್ನು ತಾನು ಮರೆತು ದೇಶಕ್ಕಾಗಿ ದುಡಿದವರು ಇಂದು ಇತಿಹಾಸದಲ್ಲಿ ಉಳಿಯುವುದಿಲ್ಲ. ಹೇಳಬೇಕಾದ ಸತ್ಯವನ್ನು ಹೇಳುವ ಮನಸ್ಸು ಮಾಡುತ್ತಿಲ್ಲ. ವಾಸ್ತವದಲ್ಲಿ ಆಝಾದ ಹಿಂದ ಪೌಜ್ ನಿರ್ಮಾಣಕ್ಕೆ ಪರೋಕ್ಷ ಕಾರಣರಾದ ಸಾವರ್ಕರ್‌ಗೆ ಭಾರತರತ್ನ ನೀಡಲು ಪ್ರಭಲ ವಿರೋಧ, ಸುಭಾಶ್ಚಂದ್ರರ ಹೋರಾಟಕ್ಕೆ ನಮ್ಮವರಿಂದಲೇ ಪ್ರತಿರೋಧ. ಬ್ರಿಟೀಷರು ಶತಮಾನಗಳಿಂದಲೂ ಶೋಷಿಸುತ್ತಿದ್ದರು ಒಂದು ಹುಲ್ಲುಕಡ್ಡಿಯನ್ನು ಎತ್ತದ ಭಾರತೀಯ ನಾಯಕರು ಹೇಳುತ್ತಾರೆ “ಆಝಾದ ಹಿಂದ್ ಫೌಜ್ ಭಾರತಕ್ಕೆ ನುಗ್ಗಿದರೆ ಅದರ ವಿರುದ್ಧ ನಾನೇ ಕತ್ತಿ ಹಿಡಿದು ಹೋರಾಡುತ್ತೇನೆ” ಎಂದು. ಅದಕ್ಕಾಗಿಯೇ ಅವರ ನಿಲುವನ್ನೆ ಸಮರ್ಥಿಸಿಕೊಂಡ ಭಾರತೀಯರು ನಮ್ಮ ವಿರುದ್ಧ ನಾವೇ ಬಡಿದಾಡಿಕೊಳ್ಳುತ್ತಿದ್ದೇವೆ. ಮತ್ತೇ ದೇಶ ಒಡೆಯುವ ಕಾರ್ಯಕ್ಕೆ ಮುಂದಾಗುತ್ತಿದ್ದೆವೆ. ಆದರು ಈ ದಿನ ಸುಭಾಶರ ನೆನಪು ಕಾಡುತ್ತಿದೆ. ಅವರ ಹೋರಾಟದ ಹಾದಿ ಯುವಭಾರತಕ್ಕೆ ಪ್ರೇರಣೆ ನೀಡುತ್ತಿದೆ. ಮತ್ತೆ ಮತ್ತೇ ಕಾಡುವ ಪ್ರಶ್ನೆ ಆಝಾದ್ ಹಿಂದ್ ಪೌಜ್ ಭಾರತಕ್ಕೆ ನುಗ್ಗಿದ್ದರೆ?
- * * * -