ತಾಂಡಾಗಳಲ್ಲಿನ ಗುಳೇ ಸಮಸ್ಯೆ ಅರಿತು ಮಮ್ಮಲ ಮರುಗಿದ ಸಿ.ಎಂ

ಲೋಕದರ್ಶನವರದಿ

ವಿಜಯಪುರ, 25 : ಮಹಾರಾಷ್ಟ್ರದ ಖಂಡಾಲಾ ಬಳಿ ಎಂಟು ತಿಂಗಳ ಹಿಂದೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಲು ಮಂಗಳವಾರ ಬೆಳಿಗ್ಗೆ ವಿಜಯಪುರ ತಾಲೂಕಿನ ಮದಭಾವಿ ತಾಂಡಾ (ರಾಜಾಜಿನಗರ)ಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಾಂಡಾಗಳಲ್ಲಿ ವಾಸಿಸುವ ಜನರ ಗುಳೇ ಸಮಸ್ಯೆ ಅರಿತು ಮಮ್ಮಲ ಮರುಗಿದರು.

ತಾಂಡಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಪಘಾತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ನಂತರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.

ಗುಳೇ ಹೋಗುವುದನ್ನು ತಪ್ಪಿಸಿ ತಾಂಡಾ ನಿವಾಸಿಗಳು ತಾವಿರುವ ತಾಂಡಾಗಳಲ್ಲಿಯೇ ಉದ್ಯೋಗಾವಕಾಶ ಸೇರಿದಂತೆ ಸರಕಾರದಿಂದ ಎಲ್ಲ ಸೌಲಭ್ಯ ಕಲ್ಪಿಸಿ ನೆಮ್ಮದಿಯಿಂದ ಬದುಕು ಸಾಗಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಒಂದು ಪೈಲಟ್ ಪ್ರಾಜೆಕ್ಟ್ ರೂಪಿಸಲು ನಿಧರ್ಾರ ಮಾಡಿದ್ದೇನೆ. ವಿಜಯಪುರ ಜಿಲ್ಲೆಯಲ್ಲಿ ಈ ಯೋಜನೆ ಯಶಸ್ವಿಯಾದರೆ ಅದನ್ನು ಹಂತ-ಹಂತವಾಗಿ ರಾಜ್ಯಾದ್ಯಂತ ವಿಸ್ತರಣೆ ಮಾಡುವುದಾಗಿ ಪ್ರಕಟಿಸಿದರು.

ತಾಂಡಾ ನಿವಾಸಿಗಳು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಯುವಕರು ಹಾಗೂ ಮಹಿಳೆಯರು ಸರಕಾರದ ಸೌಲಭ್ಯ ಪಡೆದುಕೊಂಡು ಸ್ವಾವಲಂಬಿಯಾಗಿ ಬದುಕಬೇಕು ಎಂದು ಹೇಳಿದ ಕುಮಾರಸ್ವಾಮಿ ಅವರು,  ಈ ಭಾಗದ ಮುಖಂಡರುಗಳು, ಹಾಗೂ ಸ್ಥಿತಿವಂತರು ಸಹ ತಾಂಡಾದ ಬಡಜನರಿಗೆ ನೆರವಾಗಲು ಮುಂದೆ ಬರಬೇಕು ಎಂದು ಕೋರಿದರು. 

ತಾಂಡಾಗಳಲ್ಲಿ ಇಂದಿಗೂ ಅಲ್ಲಿನ ಜನರು ಉದ್ಯೋಗ ಅರಸಿ ನೆರೆಯ ಮಹಾರಾಷ್ಟ್ರಕ್ಕೆ ಗುಳೇ ಹೋಗುವುದು ನಿಂತಿಲ್ಲ. ಮಹಾರಾಷ್ಟ್ರಕ್ಕೆ ದುಡಿಯಲು ಹೋಗುವ ಸಂದರ್ಭದಲ್ಲಿಯೇ ಮಹಾರಾಷ್ಟ್ರದ ಖಂಡಾಲಾ ಬಳಿ ಸಂಭವಿಸಿದ ಅಪಘಾತದಲ್ಲಿ ಮಧಬಾವಿ ತಾಂಡಾ ಹಾಗೂ ಸುತ್ತಲಿನ ವಿವಿಧ ತಾಂಡಾಗಳ 19 ಜನರು ಅಸುನಿಗೀದ್ದನ್ನು ಇಲ್ಲಿ ಸ್ಮರಿಸಬಹುದು.

ಭೀಕರ ರಸ್ತೆ ದುರಂತ ಮಧಭಾವಿ ತಾಂಡೆಯ ಅನೇಕರ ಬದುಕನ್ನೇ ಛಿದ್ರಗೊಳಿಸಿದೆ. ಇಂದಿಗೂ ಅಪಘಾತದ ಬಗ್ಗೆ ನೆನೆಸಿಕೊಂಡರೆ ರಾಠೋಡ ಕುಟುಂಬದವರು ಕಣ್ಣೀರು ಹಾಕುತ್ತಾರೆ.