ನವದೆಹಲಿ 18: ವಕ್ಫ್ ಮಸೂದೆ ವಿಚಾರವಾಗಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿದ್ದಕ್ಕಾಗಿ ಬಾಂಗ್ಲಾದೇಶ ಸರ್ಕಾರಕ್ಕೆ ಭಾರತ ಸರ್ಕಾರ ಖಡಕ್ ತಿರುಗೇಟು ನೀಡಿದ್ದು, 'ಮೊದಲು ನಿಮ್ಮ ದೇಶದ ಅಲ್ಪ ಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯದ ಕುರಿತು ಗಮನ ಕೊಡಿ' ಎಂದು ಹೇಳಿದೆ.
ಏಪ್ರಿಲ್ 8 ರಂದು ಭುಗಿಲೆದ್ದ ಹಿಂಸಾಚಾರದಲ್ಲಿ ತನ್ನ ಪಾತ್ರವಿದೆ ಎಂಬ ಆರೋಪಗಳನ್ನು ತಿರಸ್ಕರಿಸಿದ ಬಾಂಗ್ಲಾದೇಶದ ಪತ್ರಿಕಾ ಕಾರ್ಯದರ್ಶಿ ಶಫಿಕುಲ್ ಆಲಂ, "ಅಲ್ಪಸಂಖ್ಯಾತ ಮುಸ್ಲಿಂ ಜನಸಂಖ್ಯೆಯನ್ನು ಸಂಪೂರ್ಣವಾಗಿ ರಕ್ಷಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಭಾರತ ಮತ್ತು ಪಶ್ಚಿಮ ಬಂಗಾಳ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಹೇಳಿದ್ದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಕಡೆಯಿಂದ ಬಂದ ಹೇಳಿಕೆಗಳನ್ನು ನಾವು ತಿರಸ್ಕರಿಸುತ್ತೇವೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ಕಿರುಕುಳದ ಬಗ್ಗೆ ಭಾರತದ ಸಮಾನಾಂತರವಾಗಿ ಬಂಗಾಳ ಘಟನೆಯನ್ನು ಚಿತ್ರಿಸುವ ಕಪಟ ಪ್ರಯತ್ನವಾಗಿದೆ. ಬಾಂಗ್ಲಾದೇಶದಲ್ಲಿ ಅಂತಹ ಕೃತ್ಯಗಳ ಅಪರಾಧಿಗಳು ಮುಕ್ತವಾಗಿ ತಿರುಗಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಅನಗತ್ಯ ಹೇಳಿಕೆಗಳನ್ನು ನೀಡುವ ಬದಲು, ಬಾಂಗ್ಲಾದೇಶ ತನ್ನದೇ ಆದ ಅಲ್ಪಸಂಖ್ಯಾತ ಹಿಂದೂಗಳ ಹಕ್ಕುಗಳನ್ನು ರಕ್ಷಿಸುವತ್ತ ಗಮನಹರಿಸುವುದು ಉತ್ತಮ ಎಂದು ಅವರು ಹೇಳಿದರು.
.