ದಲಿತ ಬಂಡಾಯ ಗೋಷ್ಠಿಯ ಅಧ್ಯಕ್ಷೀಯ ಭಾಷಣಕ್ಕೆ ಅವಕಾಶ ಕಲ್ಪಿಸಬೇಕು; ಪ್ರಗತಿಪರರ ಒತ್ತಾಯ

ಮೈಸೂರು, ಫೆ. 6 :     ಕಲಬುರಗಿಯಲ್ಲಿ ನಡೆಯುತ್ತಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಬಂಡಾಯ ಗೋಷ್ಠಿಯ ಅಧ್ಯಕ್ಷೀಯ ಭಾಷಣಕ್ಕೆ ಅವಕಾಶ ನೀಡದಂತೆ ಪತ್ರ ಬರೆದಿರುವ ನಿಲುವನ್ನು ಮೈಸೂರಿನ ಪ್ರಗತಿಪರ ಚಿಂತಕರು ಖಂಡಿಸಿದ್ದಾರೆ.

ಬೆತ್ತಲಾದ ಚಂದ್ರ ಸಂಕಲನದ ಕರ್ತೃ ಡಾ. ಹೆಚ್.ಟಿ ಪೋತೆಯವರು ನಾಳಿನ ದಲಿತ ಬಂಡಾಯ ಗೋಷ್ಠಿಯ ಅಧ್ಯಕ್ಷ ಭಾಷಣ ಮಾಡಲು ಅವಕಾಶ ನೀಡದಂತೆ ಪತ್ರ ಬರೆಯಲಾಗಿದೆ. ಈ ಕುರಿತು ರಾಯುಚೂರು ಜಿಲ್ಲಾ ಲಿಂಗಾಯತ ಜಂಗಮ ಸಂಘಟನೆಯಿಂದ ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಕಲಬುರಗಿ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಕ್ರಮಕ್ಕೆ ಮೈಸೂರು ಪ್ರಗತಿಪರ ಚಿಂತಕರು ಖಂಡನೆ ವ್ಯಕ್ತಪಡಿಸಿದ್ದಾರೆ.

ಗುಲ್ಬರ್ಗ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ ಹಾಗೂ ನಿರ್ದೇಶಕರಾಗಿರುವ ಎಚ್.ಟಿ ಪೋತೆ ಅವರ ಬೆತ್ತಲಾದ ಚಂದ್ರ ಕಥಾ ಸಂಕಲನದ ಪರಿ ಕಥೆಯಲ್ಲಿ ಜಂಗಮ ಲಿಂಗಾಯತರ ವಿರುದ್ಧ ಬರೆದಿರುವ ಆರೋಪವಿದೆ. ಬೇಡ ಜಂಗಮ, ಬುಡುಗ ಜಂಗಮ ಸಮುದಾಯದ ಮೀಸಲಾತಿಯನ್ನು ಲಿಂಗಾಯತ ಜಂಗಮ ಸಮುದಾಯ ಕಬಳಿಸುವ ಬಗ್ಗೆ ಹಾಗೂ ಲಿಂಗಾಯತ ಜಂಗಮರು ಎಸ್.ಸಿ. ಪ್ರಮಾಣ ಪತ್ರ ಪಡೆದು ವಂಚನೆ ಮಾಡಿದ್ದಾರೆಂದು ಕಥಾಸಂಕಲನದಲ್ಲಿ ಉಲ್ಲೇಖ ಮಾಡಿದ್ದಾರೆ. ಇದರಿಂದ ಕೆರಳಿರುವ ರಾಯಚೂರು ಜಿಲ್ಲಾ ಲಿಂಗಾಯತ ಜಂಗಮ ಸಂಘಟನೆ ಹೆಸರಿನಲ್ಲಿ ಪತ್ರ ಬರೆಯಲಾಗಿದೆ. ಇದಕ್ಕೆ ಯಾರೂ ಮಣಿಯಬಾರದು. ನಾಳೆ ನಡೆಯುವ ದಲಿತ ಬಂಡಾಯ ಗೋಷ್ಠಿಯಲ್ಲಿ  ಡಾ. ಎಚ್.ಟಿ ಪೋತೆಯವರು ಅಧ್ಯಕ್ಷ ಭಾಷಣ ಮಾಡಲು ಅವಕಾಶ ನೀಡಬೇಕು ಎಂದು ಪ್ರೊ.ಮಹೇಶ್ ಚಂದ್ರಗುರು ಮನವಿ ಮಾಡಿದ್ದಾರೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೊಫೆಸರ್ ಮಹೇಶ್ ಚಂದ್ರಗುರು, ಬೆತ್ತಲಾದ ಚಂದ್ರ ಗುಲ್ಬರ್ಗ ವಿ.ವಿ ಯಲ್ಲಿ ಪಠ್ಯವಾಗಿದೆ. ಅದನ್ನು ಓದಿದ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆ ಬರೆದಿದ್ದಾರೆ. ಪುಸ್ತಕದಲ್ಲಿ ವಾಸ್ತವವನ್ನು ಬರೆದಿದ್ದಾರೆ. ಈ ಹಂತದಲ್ಲಿ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕೆ.ಎಸ್ ಭಗವಾನ್, ಜ್ಞಾನಪ್ರಕಾಶ ಸ್ವಾಮೀಜಿ ಹಾಗೂ ದಲಿತ ವೆಲ್ ಫೇರ್ ಟ್ರಸ್ಟ್ ನ ಶಾಂತರಾಜು ಮತ್ತಿತರರು ಉಪಸ್ಥಿತರಿದ್ದರು.