ಕಲುಬುರಗಿ, ಅ 17: ವಿಧಾನ ಮಂಡಲ ಅಧಿವೇಶನಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದು ಸ್ಪೀಕರ್ ಅವರ ಸ್ವಂತ ನಿರ್ಧಾರ, ಅವರ ವಿವೇಚನಾ ಅಧಿಕಾರವನ್ನು ಪ್ರಶ್ನಿಸಲಾಗದು ಎಂದು ರಾಜ್ಯ ಉಪಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಸ್ಪೀಕರ್ ನಿರ್ಧಾರ ಅಂತಿಮವಾಗಿರುತ್ತದೆ. ಈ ಕುರಿತು ಈಗಾಗಲೇ ಚರ್ಚೆ ನಡೆದಿದ್ದು, ಸದನದ ಘನತೆ ಎತ್ತಿಹಿಡಿಯಲು ಮತ್ತು ಅದರ ಗೌರವ ಕಾಪಾಡುವ ಉದ್ದೇಶದಿಂದ ಸ್ಪೀಕರ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದರು.
ಉಪಚುನಾವಣೆಗಳ ಹಿನ್ನೆಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ಕಲಬುರಗಿಯಲ್ಲಿ ನಡೆಯಬೇಕಿದ್ದ 85ನೇ 'ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ' ಜನವರಿ 2020ರಲ್ಲಿ ಹಮ್ಮಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ ಎಂದರು.
ಡಿಸೆಂಬರ್ ನಲ್ಲಿ ಎಲ್ಲಾ ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿ ವ್ಯಸ್ತರಾಗಿರುವುದರಿಂದ ಆ ಸಮಯದಲ್ಲಿ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ಸಾಧ್ಯವಿಲ್ಲ ಎಂದರು.