ಧಾರವಾಡ 29: ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಅಡಗಿಕೊಂಡಿರುವ ಮನೋಭಾವವನ್ನು ಹೊರಹೊಮ್ಮಿಸುತ್ತವೆ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಪ್ರವೃತ್ತಿ ನಮ್ಮ ಸಂಸ್ಕೃತಿ ಮತ್ತು ಕ್ರೀಡೆಗಳಲ್ಲಿ ಅಡಗಿದೆ ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ಕುಲಸಚಿವ ಡಾ. ಸಿ. ಬಿ. ಹೊನ್ನು ಸಿದ್ಧಾರ್ಥ ಅವರು ಹೇಳಿದರು.
ಅವರು ಜೆ.ಎಸ್.ಎಸ್. ಮಂಜುನಾಥೇಶ್ವರ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 2019-20 ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಮನುಷ್ಯ ಜಾತಿ ನಾವೆಲ್ಲಾ ಒಂದೆನ್ನುವ ಜಾತ್ಯಾತೀತ ಮನೋಭಾವ ಬೆಳೆಸುವ ಶಕ್ತಿ ಕ್ರೀಡೆಗಳಲ್ಲಿದೆ. ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳು ದೈಹಿಕ ಶಕ್ತಿ ಮತ್ತು ಆತ್ಮ ಸ್ಥೈರ್ಯವನ್ನು ತುಂಬುವಲ್ಲಿ ಸಹಕಾರವನ್ನು ನೀಡುತ್ತವೆ. ನಮ್ಮ ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಕೋಕೋ, ಚಿನ್ನಿ ದಾಂಡಿನ ಆಟಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದಿವೆ. ಅದರಂತೆ ಹುಲಿ-ಕುರಿ ಆಟ ಇದು ಇಂದು ಚೆಸ್ ಆಟವಾಗಿ ಪ್ರಸಿದ್ಧಿ ಪಡೆದಂತೆ ಬಿಲ್ಲು-ಭಾಣದಾಟ ಇಂದು ಶೂಟಿಂಗ್ ಕ್ಷೇತ್ರದಲ್ಲಿ ಪ್ರಸಿದ್ಧಿಯನ್ನು ಪಡೆದಿವೆ. ಈ ಆಟಗಳು ನಮ್ಮ ಜ್ಞಾನವನ್ನು ಮತ್ತು ದೈಹಿಕ ಶಕ್ತಿಯನ್ನು ಹೆಚ್ಚಿಸಿ ನಮ್ಮ ದೇಶವನ್ನು ಸಂರಕ್ಷಣೆ ಮಾಡಿಕೊಳ್ಳುವಂತಾ ಸಂಪ್ರದಾಯವನ್ನು ಹಾಕಿಕೊಟ್ಟಿವೆ. ಕಾರಣ ವಿದ್ಯಾರ್ಥಿಗಳು ಇಂತಹ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಗಳ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನಮ್ಮ ಜೆ.ಎಸ್.ಎಸ್. ಸಂಸ್ಥೆಯು ಕ್ರೀಡೆಯಲ್ಲಿ ಭಾಗವಹಿಸುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ ನೀಡುವುದರೊಂದಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ. ಅದರ ಪರಿಣಾಮವಾಗಿ 2007-08 ರಿಂದ ಅಥ್ಲೆಟಿಕ್ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆಂದು ಹೇಳಿದರು. ಆರಂಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವಾಯ್.ಎಸ್. ರಾಯಬಾಗಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿ ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಗಳ 45 ವರ್ಷಗಳ ಇತಿಹಾಸವನ್ನು ಪರಿಚಯಿಸಿದ್ದೂ ಅಲ್ಲದೇ ಗಣ್ಯರಿಗೆ ಸ್ವಾಗತ ಕೋರಿದರು.
ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಗಳ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ ಹಾಗೂ ಸಮಾರಂಭದ ಮುಖ್ಯ ಅತಿಥಿಗಳಾದ ಡಾ. ಸಿ. ಬಿ. ಹೊನ್ನು ಸಿದ್ಧಾರ್ಥ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘದ ಉಪಾಧ್ಯಕ್ಷ ಡಾ. ಎಸ್. ಕೆ. ನಡುವಿನಕೇರಿ ಹಾಗೂ ಕ್ರೀಡಾ ನಿರ್ದೇಶಕ ಪವನ ಗೊರವರ ಅವರು ವೇದಿಕೆಯ ಮೇಲೆ ಹಾಜರಿದ್ದರು. ವಿದ್ಯಾರ್ಥಿ ಕಾರ್ಯದರ್ಶಿ ಸಹನಾ ಜೋಶಿ ಹಾಗೂ ಜಂಟಿ ಕಾರ್ಯದರ್ಶಿ ಕಿರಣ ಕೋಟಿ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಶ್ರೀಹರ್ಷ ದೇಶಮುಖ, ಪ್ರಿಯಾಂಕಾ ಹಿರೇಮಠ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ವಿದ್ಯಾ ದೊಡ್ಡಗೌಡರ ಹಾಗೂ ನಿಶಾ ದೇಶಪಾಂಡೆ ಅವರು ಕಾರ್ಯಕ್ರಮ ನಿರೂಪಿಸಿದರು. ಸಹನಾ ಜೋಶಿ ವಂದನಾರ್ಪಣೆ ಸಲ್ಲಿಸಿದರು.