ಮೂರು ಉಪಮುಖ್ಯಮಂತ್ರಿ ಹುದ್ದೆ ಯಾವುದೇ ಗೊಂದಲ ಸೃಷ್ಟಿಸಿಲ್ಲ : ಗೋವಿಂದ್ ಕಾರಜೋಳ

ಬೆಂಗಳೂರು, ಆಗಸ್ಟ್ 27    ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿರುವುದರಿಂದ ಪಕ್ಷದಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗಿಲ್ಲ, ಶಾಸಕರಲ್ಲದ ಲಕ್ಷ್ಮಣ್ ಸವದಿಗೆ ಉಪಮುಖ್ಯಮಂತ್ರಿ ಹುದ್ದೆ ಕೊಟ್ಟಿರುವುದು ಪಕ್ಷದ ವರಿಷ್ಠರ ನಿರ್ಧಾರವಾಗಿರುವುದರಿಂದ ಈ ಬಗ್ಗೆ ತಾವು ಪ್ರತಿಕ್ರಿಯಿಸುವುದು ಸರಿಯಲ್ಲ ಎಂದು ಸಮಾಜ ಕಲ್ಯಾಣ ಸಚಿವ  ಹಾಗೂ ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ಹೇಳಿದ್ದಾರೆ 

ಸಚಿವರಾದ ಬಳಿಕ ಮೊದಲ ಬಾರಿಗೆ ಮಂಗಳವಾರ ವಿಧಾನಸೌಧದ ಕೊಠಡಿ ಪ್ರವೇಶಿಸಿದರು. 

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾತೆ ಹಂಚಿಕೆ, ಸಚಿವ ಸಂಪುಟ ವಿಸ್ತರಣೆ ಸಂಬಂಧ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಸಂಘಪರಿವಾರದಿಂದ ಬಂದಿರುವ  ಸಿ.ಟಿ.ರವಿ ಶಿಸ್ತಿನ ಸಿಪಾಯಿ. ಖಾತೆ ಹಂಚಿಕೆ ಸಂಬಂಧ ಅವರಿಗೆ ಯಾವುದೇ ಬೇಸರವಿಲ್ಲ ಎಂದರು. 

ತಮಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲು  ಕಾರಣರಾಗಿರುವ ಮುಧೋಳ ಕ್ಷೇತ್ರದ ಜನರಿಗೆ ಮೊದಲಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ತಮ್ಮ ಮೇಲೆ ವಿಶ್ವಾಸವಿಟ್ಟು ಹುದ್ದೆ ನೀಡಿರುವ ಪ್ರಧಾನಿ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ  ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು. 

ಮಳೆಯಿಂದ ಹಾನಿಯಾದ ರಸ್ತೆಗಳನ್ನು ಸರಿಪಡಿಸಲು ಮೊದಲ ಆದ್ಯತೆ ನೀಡಲಾತ್ತಿದ್ದು, ಸೇತುವೆ, ಸರ್ಕಾರಿ ಕಟ್ಟಡಗಳನ್ನು ಸರಿಪಡಿಸುವ ಜವಬ್ದಾರಿಯೂ ತಮ್ಮ ಮೇಲಿದೆ. ಸಮಾಜ ಕಲ್ಯಾಣ ಇಲಾಖೆ ನೊಂದವರ ಧ್ವನಿಯಾಗಬೇಕು, ದಲಿತರಿಗೆ ಉತ್ತಮ ಕಾರ್ಯಕ್ರಮ ನೀಡಬೇಕು. ಪರಿಶಿಷ್ಟರಿಗೆ ಉದ್ಯೋಗ ಸೃಷ್ಟಿ ಮಾಡಲಾಗುವುದು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಆರ್ಥಿಕ ಪರಿಮಿತಿಯೊಳಗೆ ಕಾರ್ಯಕ್ರಮಗಳನ್ನು ರೂಪಿಸುವುದಾಗಿ ಕಾರಜೋಳ ತಿಳಿಸಿದರು. 

ಬುಧವಾರ ಲೋಕೋಪಯೋಗಿ ಇಲಾಖೆಯ ಸಭೆ ಕರೆಯಲಾಗಿದ್ದು, ಮಳೆಹಾನಿ ಸಂಬಂಧ ವಿವರವಾದ ಮಾಹಿತಿ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಿ  ನಷ್ಟದ ಬಗ್ಗೆ ಸ್ಪಷ್ಟ ಮಾಹಿತಿ ಕಲೆ ಹಾಕಲಾಗುವುದು. ಬಳಿಕ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಪರಿಹಾರಕ್ಕೆ ಮನವಿ ಮಾಡಲಾಗುವುದು ಎಂದರು. 

ಸಮಾಜ ಕಲ್ಯಾಣ ಇಲಾಖೆ ಕೂಡ ಮಹತ್ವದ ಇಲಾಖೆಯಾಗಿದ್ದು, ದಲಿತರಿಗೆ ಇದು ಧ್ವನಿಯಾಗಬೇಕು. 

ಬಡ ದೀನ ದಲಿತರ ಮಕ್ಕಳಿಗೆ  ಹಾಸ್ಟೆಲ್ ನಲ್ಲಿ ಊಟ ಹಾಕುವುದಷ್ಟೇ ಕೆಲಸವಲ್ಲ. ಅವರಿಗೆ  ಉದ್ಯೋಗ ನೀಡುವ ಕೆಲಸವೂ ಆಗಬೇಕಿದೆ. ಮಳೆಯಿಂದ ಹಾನಿಯಾಗಿರುವ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು  

ಪುನರ್ ನಿರ್ಮಾಣ ಮಾಡಬೇಕಿದೆ. ಬಾಗಲಕೋಟೆ ಹಾಗೂ ತಮ್ಮ ಮತಕ್ಷೇತ್ರದಲ್ಲಿಯೂ ನೆರೆಯಿಂದ ಭಾರೀ ಹಾನಿಯಾಗಿದೆ. ಕೆಲವು ದಿನಗಳಲ್ಲಿ ಎಲ್ಲದರ ಬಗ್ಗೆ ಮಾಹಿತ ಪಡೆದು ಕೇಂದ್ರಕ್ಕೆ ವರದಿ ನೀಡಲಾಗುವುದು. ಪರಿಹಾರ ಕೇಂದ್ರಗಳಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದು ಸುಳ್ಳು.  ಅಧಿಕಾರಿಗಳು 24 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದು, ಯಾವುದೇ ತೊಂದರೆ ಆಗದಂತೆ ಸೂಕ್ತ ಕ್ರಮಗಳನ್ನು  ಕೈಗೊಳ್ಳುತ್ತಿದ್ದಾರೆ ಎಂದು ಗೋವಿಂದ್ ಕಾರಜೋಳ ಸಮರ್ಥಿಸಿಕೊಂಡರು.