ಅಹಿಂಸೆಯ ಮಾರ್ಗವೇ ಶ್ರೇಷ್ಠ ಮಹಾವೀರರ ಉಪದೇಶಗಳು: ವೆಂಕಟೇಶ ವಜ್ರಂಗಿ

ಅಹಿಂಸೆಯ ಮಾರ್ಗವೇ ಶ್ರೇಷ್ಠ ಮಹಾವೀರರ ಉಪದೇಶಗಳು: ವೆಂಕಟೇಶ ವಜ್ರಂಗಿ The path of non-violence is the teachings of the great Mahavira: Venkatesa Vajrangi

ಲೋಕದರ್ಶನ ವರದಿ

ಗದಗ-ಬೇಟಗೇರಿ 31: ಜೈನ ಪರಂಪರೆಯ 24ನೆಯ ತೀರ್ಥಂಕರ ಮಹಾವೀರರ ಅಹಿಂಸೆ, ಸತ್ಯ ಮತ್ತು ತ್ಯಾಗದ ತತ್ವಗಳು ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದ್ದು, ಮಾನವೀಯತೆ ಮತ್ತು ಸಹಿಷ್ಣುತೆಯನ್ನು ಬೆಳೆಸಲು ಮಹಾವೀರರ ಉಪದೇಶಗಳು ದಾರೀದೀಪವಾಗಿವೆ ಎಂದು ವೆಂಕಟೇಶ ವಜ್ರಂಗಿ ಹೇಳಿದರು. ಅವರು ಗದಗ ಜಿಲ್ಲಾ ದಿಗಂಬರ ಜೈನ ಸಂಘವು ಮಹಾವೀರ ತೀರ್ಥಂಕರರ 2625ನೆಯ ಜನ್ಮಕಲ್ಯಾಣಕ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತ ಮಹಾವೀರರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ ಮತ್ತು ಸಮಾನತೆ ಸ್ಥಾಪನೆ ಸಾಧ್ಯವೆಂದು ಅಭಿಪ್ರಾಯಪಟ್ಟರು.

ಸಂಘದ ಉಪಾಧ್ಯಕ್ಷ ಎಂ.ಟಿ. ಕಬ್ಬಿಣ ಮಹಾವೀರರ ತತ್ವಗಳು ಜಗತ್ತಿನ ಶಾಂತಿಗೆ ಮೂಲಸ್ತಂಭವಾಗಿದ್ದು, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನೈತಿಕ ಮೌಲ್ಯಗಳು ಬಲವಾಗುತ್ತವೆ ಹಾಗೂ ಸಮಾಜದಲ್ಲಿ ಸಮಾನತೆ ಮತ್ತು ಶಾಂತಿ ಸ್ಥಾಪನೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಲೋಹಿತಕುಮಾರ ಕಾಸಾರ ಅವರು ಇಂದಿನ ಹಿಂಸಾಚಾರ ಮತ್ತು ಅಸಹಿಷ್ಣುತೆಯ ಪರಿಸ್ಥಿತಿಯಲ್ಲಿ ಮಹಾವೀರರ ಸಂದೇಶಗಳು ದಾರೀದೀಪವಾಗಿವೆ ಎಂದು ತಿಳಿಸುತ್ತ, ಸರ್ಕಾರದ ಇಲಾಖೆಗಳು, ಶಾಲಾ-ಕಾಲೇಜುಗಳು, ಸಂಘ-ಸಂಸ್ಥೆಗಳು ಇತರೆ ಮತಪಂಥಗಳ ದಾರ್ಶನೀಕರು, ಮಹನೀಯರ ಜಯಂತಿಗಳನ್ನು ಶ್ರದ್ಧೆ-ಭಕ್ತಿಯಿಂದ ಆಚರಿಸುವಂತೆ ಜೈನ ಧರ್ಮದ ಮಹಾಮಾನವತಾದಿ ಮಹಾವೀರರ ಜಯಂತಿಯನ್ನೂ ಆಚರಿಸಿ ಅವರ ಆದರ್ಶಗಳನ್ನು ಸ್ಮರಿಸಬೇಕೆಂದು ಮನವಿ ಮಾಡಿದರು. 

ಸಂಘದ ಅಧ್ಯಕ್ಷ ಪಿ.ಎ. ಕುಲಕರ್ಣಿ ಅಧ್ಯಕ್ಷೀಯ ಭಾಷಣದಲ್ಲಿ ಮಹಾವೀರರ ಅಹಿಂಸೆ, ಸತ್ಯ, ಅಪರಿಗ್ರಹ ಮತ್ತು ತ್ಯಾಗದ ತತ್ವಗಳು ಇಂದಿನ ಸಮಾಜದಲ್ಲಿ ಅತ್ಯಂತ ಪ್ರಸ್ತುತವಾಗಿವೆ ಎಂದು ತಿಳಿಸುತ್ತ, ಮಾನವಕುಲವು ಶಾಂತಿ ಮತ್ತು ಸಹಜೀವನವನ್ನು ಸಾಧಿಸಲು ಮಹಾವೀರರ ಉದೇಶಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವೆಂದು ಹೇಳಿದರು. ಸಂಘದ ಪದಾಧಿಕಾರಿಗಳು ಮತ್ತು ಗದಗ ಜಿಲ್ಲೆಯ ಜೈನ ಸಮಾಜದ ಗಣ್ಯಮಾನ್ಯರು ಮಹಾವೀರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವಿಸುವ ಮೂಲಕ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ವೈ.ಪಿ. ಸಿದ್ದಣ್ಣವರ ಗಣ್ಯಮಾನ್ಯರನ್ನು ಸ್ವಾಗತಿಸಿದರು. ಆಹಾರದಾನಿ ಎ.ಎನ್‌. ಬಸ್ತಿ ಅವರನ್ನು ಸನ್ಮಾನಿಸಲಾಯಿತು. ಖಜಾಂಚಿ ಸಂಕಪ್ಪ ನಾವಳ್ಳಿ ವಂದನಾರೈ​‍್ಗದರು. ಕಾರ್ಯದರ್ಶಿ ಪ್ರಕಾಶ ಮುತ್ತಿನ ಕಾರ್ಯಕ್ರಮ ನಡೆಸಿಕೊಟ್ಟರು. ಗದಗ-ಬೇಟಗೇರಿ ಮತ್ತು ಜಿಲ್ಲೆಯ ಶ್ರಾವಕ-ಶ್ರಾವಿಕೆಯರು ಭಾಗವಹಿಸಿದ್ದರು.